ಬಿ. ರಾಮಪ್ರಸಾದ್ ಗಾಂಧಿ
ಮೊದಲಿನಿಂದಲೂ ದಿನವಹಿ ಹಾಗೂ ವಾರದ ಸಂತೆ ಈ ಜಾಗದಲ್ಲಿಯೇ ನಡೆಯುತ್ತಿತ್ತು. ಕಾಲಕ್ಕೆ ತಕ್ಕಂತೆ ನೂತನ ಸಂತೆ ಮಾರುಕಟ್ಟೆ ನಿರ್ಮಿಸಲು ಪುರಸಭೆಯವರು ಐಡಿಎಸ್‌ಎಂಟಿ ಆವರ್ತ ನಿಧಿಯಲ್ಲಿ ಅನುದಾನ ನಿಗದಿಗೊಳಿಸಿದರು. ಟೆಂಡರ್ ಪ್ರಕ್ರಿಯೆ ನಡೆದು ₹2.75 ಕೋಟಿ ವೆಚ್ಚದಲ್ಲಿ ಮಂಗಳೂರಿನ ಕೆ.ಆರ್. ಜನಾರ್ದನ ಎಂಬ ಗುತ್ತಿಗೆದಾರ ಕಾಮಗಾರಿ ನಿರ್ಮಿಸಲು ಮುಂದಾದರು. ಆ ಪ್ರಕಾರ 2022 ಸೆ. 7ರಂದು ಅಂದಿನ ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು. ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು 9 ತಿಂಗಳು ಕಾಲವಕಾಶ ನೀಡಿದರು.
ಇಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುವವರೆಗೂ ದಿನವಹಿ ಹಾಗೂ ಪ್ರತಿ ಶನಿವಾರ ನಡೆಯುವ ವಾರದ ಸಂತೆಯನ್ನು ಕೋಟೆ ಕಾಳಮ್ಮನ ದೇವಸ್ಥಾನದ ಬಳಿ ನಡೆಸಲು ತೀರ್ಮಾನಿಸಿ ಈ ವರೆಗೂ ನಡೆದುಕೊಂಡು ಬಂದಿದೆ. ಇತ್ತ ಗುತ್ತಿಗೆದಾರರು ಶೇ. 40ರಷ್ಟು ಕಾಮಗಾರಿ ಮಾಡಿ ಆನಂತರ 9 ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಚಾವಣಿ, ಕಟ್ಟೆಗಳು, ನೆಲಹಾಸು ಮುಂತಾದ ಕಾಮಗಾರಿ ಕೆಲಸ ಬಾಕಿ ಇದೆ. ಈ ವರೆಗೂ ಗುತ್ತಿಗೆದಾರ ಈ ಕಡೆ ತಿರುಗಿ ನೋಡುತ್ತಾ ಇಲ್ಲ, ಪುರಸಭೆಯವರು ಸಂಬಂಧಿಸಿದ ಗುತ್ತಿಗೆದಾರನಿಗೆ ಈಗಾಗಲೇ ನೋಟೀಸ್ ನೀಡಿ ಎಚ್ಚರಿಸಿದರೂ ಗುತ್ತಿಗೆದಾರ ತಲೆ ಕೆಡಿಸಿಕೊಂಡಂತೆ ಕಾಣುತ್ತಾ ಇಲ್ಲ.ಈಗ ತಾತ್ಕಾಲಿಕವಾಗಿ ಕೋಟೆ ಕಾಳಮ್ಮನ ದೇವಸ್ಥಾನದ ಬಳಿ ನಡೆಯುತ್ತಿರುವ ಸಂತೆ ಪಟ್ಟಣಕ್ಕೆ ಸಾಕಷ್ಟು ದೂರವಾಗುತ್ತದೆ. 1 ಕಿಲೋ ಮೀಟರ್‌ನಿಂದ ಹಿಡಿದು 3 ಕಿಲೋ ಮೀಟರ್ ವರೆಗೂ ಸಾರ್ವಜನಿಕರಿಗೆ ದೂರವಾಗುತ್ತದೆ. ಸಂತೆಗೆ ಹೋಗಿ ತರಕಾರಿ ತೆಗೆದುಕೊಂಡು ನಡೆದುಕೊಂಡಬರಲು ಸಾಧ್ಯವಿಲ್ಲ. ₹50 ಕೊಟ್ಟು ಆಟೋದಲ್ಲಿಯೇ ಬರಬೇಕು. ಇಂತಹ ಪರಿಸ್ಥಿತಿ 9 ತಿಂಗಳಿನಿಂದ ಇದೆ.