ಸಂತೇಮಾಳ ಸ್ಥಳ, ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಧರಣಿ

KannadaprabhaNewsNetwork |  
Published : Aug 04, 2024, 01:18 AM IST
3ಕೆಎಂಎನ್‌ಡಿ-2ಮಂಡ್ಯ ತಾಲೂಕಿನ ಹಲ್ಲೇಗೆರೆ  ಸಂತೆಮಾಳ ಸ್ಥಳ ಮತ್ತು ರಸ್ತೆ ಒತ್ತುವರಿ ತೆರವಿಗೆ ಒತ್ತಾಯಿಸಿ ಗ್ರಾಮಸ್ಥರು ರಸ್ತೆತಡೆ ನಡೆಸಿದರು. | Kannada Prabha

ಸಾರಾಂಶ

ರಸ್ತೆ ಅಭಿವೃದ್ಧಿಯಾಗಿದೆ ಎಂದು ನಮ್ಮ ಭಾಗದ ರಸ್ತೆಯ ಹಣವನ್ನು ಗುತ್ತಿಗೆದಾರ ತೆಗೆದುಕೊಂಡಿದ್ದಾನೆ, ಒಂದು ಭಾಗದ ರಸ್ತೆ ಕಡೆಯವರು ಒತ್ತುವರಿಯಾಗಿದೆ ಎಂದರೆ ಮತ್ತೊಂದು ಬದಿಯ ಜನರು ಒತ್ತುವರಿಯಾಗಿಲ್ಲ ಎನ್ನುತ್ತಾರೆ, ಇದನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಿಜವಾಗಲೂ ರಸ್ತೆ ಒತ್ತುವರಿಯಾಗಿದ್ದರೆ ಅವರಿಗೆ ಪರಿಹಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಹಲ್ಲೇಗೆರೆ ಸಂತೇಮಾಳ ಸ್ಥಳ ಮತ್ತು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಲ್ಲೆಗೆರೆ ಮತ್ತು ಚಂದಗಾಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸದಸ್ಯರು ಶನಿವಾರ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣ, ಶಿರಾ ಮತ್ತು ಮಂಡ್ಯ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದಲೂ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ರಸ್ತೆ ದುರಸ್ತಿ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ. ನಮ್ಮ ಗ್ರಾಮದ ಸಂತೇಮಾಳ ಎಂಬುದನ್ನೂ ಕಡೆಗಣಿಸಿ ಅದರ ಸ್ಥಳವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಉತ್ತಮ ರಸ್ತೆ ನಿರ್ಮಿಸುವ ಮೂಲಕ ರಾಜ್ಯ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು. ಈಗ ನಕಲಿ ಆರ್‌ಟಿಸಿ ಸೃಷ್ಟಿಸಿಕೊಂಡಿರುವ ಖಾಸಗಿ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ತಕ್ಷಣವೇ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡ ಹಲ್ಲೇಗೆರೆ ಹರೀಶ್ ಮಾತನಾಡಿ, ರಸ್ತೆ ಅಭಿವೃದ್ಧಿಯಾಗಿದೆ ಎಂದು ನಮ್ಮ ಭಾಗದ ರಸ್ತೆಯ ಹಣವನ್ನು ಗುತ್ತಿಗೆದಾರ ತೆಗೆದುಕೊಂಡಿದ್ದಾನೆ, ಒಂದು ಭಾಗದ ರಸ್ತೆ ಕಡೆಯವರು ಒತ್ತುವರಿಯಾಗಿದೆ ಎಂದರೆ ಮತ್ತೊಂದು ಬದಿಯ ಜನರು ಒತ್ತುವರಿಯಾಗಿಲ್ಲ ಎನ್ನುತ್ತಾರೆ, ಇದನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಿಜವಾಗಲೂ ರಸ್ತೆ ಒತ್ತುವರಿಯಾಗಿದ್ದರೆ ಅವರಿಗೆ ಪರಿಹಾರ ನೀಡಬೇಕು. ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮುಖಂಡ ಚಲ್ಲನಾಯಕನಹಳ್ಳಿ ಸುರೇಶ್ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆಯು 2002ರಲ್ಲಿ ಡಿಪಿಆರ್ ಆಗಿದೆ ಅದರ ಕಾಪಿ ಇದೆ, ಎಲ್ಲಿ ಒತ್ತುವರಿಯಾಗಿದೆ ಎಂಬುದನ್ನು ತಿಳಿದು ಬಿಡಿಸಬೇಕು. ಈ ಹಿಂದೆ ಭೂ ಸ್ವಾಧೀನ ಆಗಿರುವುದನ್ನು ಬಿಟ್ಟು ಬೇರೆ ಜಾಗವನ್ನು ತೆಗೆದುಕೊಂಡಿದ್ದಾರೆ, ಅದನ್ನು ಬಿಟ್ಟು ಮೂಲ ಭೂ ಸ್ವಾಧೀನವಾಗಿರುವ ಕಡೆ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.

ಕಳೆದ ವಾರದ ಹಿಂದೆ ಬಂದ ಎಸಿ ಮತ್ತು ತಹಶೀಲ್ದಾರ್, ಜಿಲ್ಲಾ ಪಂಚಾಯ್ತಿ ಸಿಇಒ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ, ಮೂಲ ರಸ್ತೆ ಎಲ್ಲಿ ಹೋಗಬೇಕು ಎನ್ನುವುದನ್ನು ತಿಳಿಸಿದ್ದಾರೆ, 2010 ರಲ್ಲಿಯೂ ಈ ಹಿಂದೆ ಆದಂತಹ ಡಿಪಿಆರ್‌ನ್ನೇ ಮುಂದುವರೆಸಿದ್ದಾರೆ. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ತಿಳಿಸಿದರೆ ನಮ್ಮ ಜನರ ಮೇಲೆಯೇ ಆರೋಪ ಮಾಡುತ್ತಾರೆ, ಅವರಿಗೆ ಚುನಾವಣೆ ವೇಳೆ ನಮ್ಮ ಮತ ಬೇಕಿತ್ತಷ್ಟೇ. ಈಗ ಅವರಿಗೆ ನಾವು ಬೇಡವಾಗಿದ್ದೇವೆ ಎಂದು ಬೇಸರದಿಂದ ನುಡಿದರು. ಶಾಸಕ ರವಿಕುಮಾರ್ ಗಣಿಗ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಧರಣಿಯಲ್ಲಿ ಗ್ರಾಪಂ ಅಧ್ಯಕ್ಷೆ ಸುಮ, ಉಪಾಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ನಿಂಗರಾಜು, ಸಿ.ಕೆ.ಪಾಪಯ್ಯ, ಕರೀಗೌಡ, ಚಲ್ಲನಾಯಕನಹಳ್ಳಿ ಶಂಕರ್, ರಾಜಣ್ಣ, ದಯಾನಂದ, ರಾಮಲಿಂಗಯ್ಯ, ಮಣಿ, ಶಶಿ, ವಿಜಯೇಂದ್ರ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ