ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಸರಗೂರು

KannadaprabhaNewsNetwork | Published : Jan 14, 2025 1:00 AM

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಎಚ್.ಡಿ. ಕೋಟೆ, ಸರಗೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಸಾಹಿತ್ಯ ಸಮ್ಮೇಳನಗಳು, ಕನ್ನಡ ವಿಚಾರಗೋಷ್ಠಿಗಳು, ಸಾಹಿತ್ಯ ಕಮ್ಮಟಗಳು, ತರಬೇತಿ ಶಿಬಿರಗಳು ಹೀಗೆ ತಮ್ಮದೇ ರೀತಿಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿರುವ ಹಾಗೂ ಸಾಹಿತಿಯಾಗಿಯೂ ಹಲವು ಕೃತಿಗಳನ್ನು ರಚಿಸಿರುವ ಡಾ.ವೈ.ಡಿ.ರಾಜಣ್ಣ.

ಕನ್ನಡಪ್ರಭ ವಾರ್ತೆ ಸರಗೂರು

ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸಂಬಂಧ ಸೋಮವಾರ ಸಮ್ಮೇಳನ ಅಧ್ಯಕ್ಷರಿಗೆ ಶಿಷ್ಟಾಚಾರದಂತೆ ಆಮಂತ್ರಿಸಲಾಯಿತು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಸಮ್ಮೇಳನ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅವರ ಮೈಸೂರಿನ ನಿವಾಸದಲ್ಲಿ ಭೇಟಿ ಮಾಡಿ ಆಹ್ವಾನ ನೀಡಲಾಯಿತು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನೂತನ ಸರಗೂರು ತಾಲೂಕು ರಚನೆಯಾದ ನಂತರ ನಡೆಯಲಿರುವ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಸಾಗಿವೆ. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

ಡಾ.ವೈ.ಡಿ.ರಾಜಣ್ಣ ಅವರು ಸರಗೂರು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಎಚ್.ಡಿ. ಕೋಟೆ, ಸರಗೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಸಾಹಿತ್ಯ ಸಮ್ಮೇಳನಗಳು, ಕನ್ನಡ ವಿಚಾರಗೋಷ್ಠಿಗಳು, ಸಾಹಿತ್ಯ ಕಮ್ಮಟಗಳು, ತರಬೇತಿ ಶಿಬಿರಗಳು ಹೀಗೆ ತಮ್ಮದೇ ರೀತಿಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿರುವ ಹಾಗೂ ಸಾಹಿತಿಯಾಗಿಯೂ ಹಲವು ಕೃತಿಗಳನ್ನು ರಚಿಸಿರುವ ಡಾ.ವೈ.ಡಿ. ರಾಜಣ್ಣ ಅವರನ್ನು ಸರಗೂರು ತಾಲೂಕು ಜನತೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಹಿನ್ನೆಲೆ ಅವರ ನಿವಾಸದಲ್ಲಿ ಆಹ್ವಾನಿಸಲಾಗುತ್ತಿದೆ.

ಎಲ್ಲ ರೀತಿಯಲ್ಲಿ ಅರ್ಥಪೂರ್ಣವಾಗಿಯೂ ಅದ್ದೂರಿಯಾಗಿಯೂ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಸರಗೂರು ತಾಲೂಕು ವನ ಜಲ ಸಿರಿ ಸೊಬಗಿನಿಂದ ಕೂಡಿದ್ದು ಸಾಹಿತ್ಯ ಸಮ್ಮೇಳನದ ಆಯೋಜನೆಯ ಮೂಲಕ ಕನ್ನಡದ ಸಿರಿ ಸೊಬಗು ಅನಾವರಣಗೊಳ್ಳಲಿದೆ ಎಂದರು. ತಾಲೂಕಿನ ಶಾಸಕರು ಆಸಕ್ತಿಯಿಂದ ತೊಡಗಿಸಿಕೊಂಡಿರುವುದು ಇತರೆ ಜನಪ್ರತಿನಿಧಿಗಳಿಗೆ ಮಾದರಿಯ ವಿಚಾರವಾಗಿದೆ ಎಂದರು.

ಸಮ್ಮೇಳನದ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಸಮ್ಮೇಳನವು ನೂತನ ತಾಲೂಕು ಕೇಂದ್ರವಾಗಿ ರೂಪುಗೊಂಡ ನಂತರ ಸರಗೂರಿನಲ್ಲಿ ಜರುಗುತ್ತಿರುವ ಮೊದಲ ಸಮ್ಮೇಳನ ಕಾರಣಕ್ಕೆ ಐತಿಹಾಸಿಕ ಮಹತ್ವ ಹೊಂದಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಕೆ.ಎಸ್. ಶಿವರಾಮ್, ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ. ಲತಾ ಮೋಹನ್ ಹಾಗೂ ಸರಗೂರು ತಾಲೂಕಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ, ಕಾರ್ಯದರ್ಶಿ ನಿಂಗರಾಜು, ಜಿಪಂ ಮಾಜಿ ಸದಸ್ಯರಾದ ಪಿ. ರವಿ, ಸಮ್ಮೇಳನದ ಕಾರ್ಯನಿರ್ವಾಹಕ ಸದಸ್ಯರಾದ ಎಸ್.ಎನ್. ನಾಗರಾಜು, ಜಯ ಕರ್ನಾಟಕ ಸಂಘಟನೆಯ ಸತೀಶ್ ಗೌಡ, ರಾಜನಹಳ್ಳಿ ರಾಜನಾಯಕ ಶಿವಶಂಕರ್, ಚೆನ್ನಿಪುರ ಮಲ್ಲೇಶ್, ಶಿವರಾಜ್, ಕೋಟೆ ಅಧ್ಯಕ್ಷ ಕನ್ನಡ ಪ್ರಮೋದ್, ಸುಧೀರ್, ಸಕಲೇಶ್, ರಘುರಾಮ್ ಇದ್ದರು.

Share this article