ಕನ್ನಡಪ್ರಭ ವಾರ್ತೆ ಮಧುಗಿರಿ
ಬಹುಭಾಷಾ ನಟಿ ಪದ್ಮಭೂಷಣ ಬಿ.ಸರೋಜದೇವಿ ಅವರ ನಿಧನ ಚಿತ್ರರಂಗಕ್ಕೆ ತುಂಬಲಾದರ ನಷ್ಟ ಉಂಟಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.ಪಟ್ಟಣದ ಟಿವಿವಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಗಲಿದ ಬಿ.ಸರೋಜದೇವಿ ಅವರಿಗೆ ಎರಡು ನಿಮಿಷ ಮೌನ ಆಚರಿಸಿ ಮಾತನಾಡಿದ ಅವರು, ನಟಿ ಬಿ.ಸರೋಜ ದೇವಿ ಅಭಿನಯಿಸಿದ ಕಿತ್ತೂರು ರಾಣಿ ಚನ್ನಮ್ಮ ಸಿನಿನಿಮಾದಲ್ಲಿ ಬ್ರಿಟಿಷರ ವಿರುದ್ಧ ಘರ್ಜಿಸಿ ಕಪ್ಪ ಕೊಡಬೇಕೆ ಕಪ್ಪ ಎಂಬ ಸಂಭಾಷಣೆ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭಗಳಲ್ಲಿ ಪದೇ ಪದೇ ಸಾರ್ವಜನಿಕರಿಗೆ ನೆನಪು ಮಾಡಿ ಕೊಡುತ್ತಾರೆ. ಮಲ್ಲಮ್ಮನ ಪವಾಡ, ಅಮರಶಿಲ್ಪಿ ಜಕಣಚಾರಿ, ನಟಸಾರ್ವಭೌಮ, ಭಾಗ್ಯವಂತರು ಚಿತ್ರಗಳಲ್ಲಿ ನಟಿಸಿರುವ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಚಿರ ಕಾಲ ಉಳಿದಿವೆ. ಬಹು ಭಾಷೆಗಳಲ್ಲಿ ಪ್ರಮುಖ ನಟರೊಂದಿಗೆ ಅಭಿನಯದ ಮೂಲಕ ಕನ್ನಡದ ಕೀರ್ತಿ ಪಾತಾಕೆಯನ್ನು ಚಿತ್ರರಂಗದಲ್ಲಿ ತೋರಿದ್ದರು. ಅವರು ಸಾವಿನ ನಂತರ ಇತರರ ಬದುಕಿಗೆ ಬೆಳಕಾಗುವಂತೆ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು ವಿಶೇಷ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಉಪನ್ಯಾಸಕ ಮಂಜು ಪ್ರಸಾದ್ ಮಾತನಾಡಿ,ಅವರು ಅಭಿನಯಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕನ್ನಡದ ಗಿಳಿಯೆಂದೇ ತನ್ನ 17ನೇ ವಯಸ್ಸಿನಲ್ಲಿಯೇ ಕನ್ನಡದ ಮಹಿಳಾ ಸೂಪರ್ ಸ್ಟಾರ್ ಎಂದು ಒಂದು ಕಾಲದಲ್ಲಿ ಸಿನಿಮಾವನ್ನೇ ಬೆಳ್ಳಿ ತೆರೆಯನ್ನಾಗಿ ಬೆಳಸಿದವರು. ಜೊತೆಗೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯಾಗಿ ಇಂದಿನ ನಟಿಯರಿಗೆ ಸ್ಪೂರ್ತಿದಾಯಕ,ಅವರ ಸಿನಿಮಾಗಳು ಚಿತ್ರರಂಗದಲ್ಲಿ ಅಜರಾಮರವಾಗಿ ಉಳಿಯತ್ತವೆ ಎಂದು ತಿಳಿಸಿದರು.ಗ್ರಂಥಪಾಲಕ ಜಿ.ಎಸ್.ನಾಗಭೂಷಣ್ ಮಾತನಾಡಿ, 14ನೇ ವಯಸ್ಸಿಗೆ ಮುಖಕ್ಕೆ ಬಣ್ಣ ಹಚ್ಚಿಕೊಂಡು 6 ದಶಕಗಳ ಕಾಲ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹೊರ ರಾಜ್ಯಗಳಲ್ಲಿ ಕನ್ನಡದ ಅರಗಿಣಿಯಾಗಿ ಭಾರತದ ಸಿನಿಮಾರಂಗವನ್ನು ದೇಶ-ವಿದೇಶಗಳಲ್ಲಿ ನೋಡುವಂತೆ ನಟಿಸಿದ್ದು ನಮ್ಮ ಕನ್ನಡತಿ ಬಿ.ಸರೋಜದೇವಿ ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಟಿವಿವಿ ಪಿಯು ಕಾಲೇಜು ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿ, ನಟಿ ಬಿ.ಸರೋಜದೇವಿ ಅಭಿನಯಿಸಿದ ಚಿತ್ರಗಳ ಬಗ್ಗೆ ತಿಳಿಸಿದರು.