ಪುತ್ತಿಗೆ ಶ್ರೀಗಳಿಗೆ ಅದಮಾರು ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ

KannadaprabhaNewsNetwork |  
Published : Jan 19, 2024, 01:50 AM IST
ಅದಮಾರು ಶ್ರೀಗಳು ಪುತ್ತಿಗೆ ಶ್ರೀಗಳ ಕೈಹಿಡಿದು ಪರ್ಯಾಯ ಪೀಠದ ಮೇಲೆ ಕುಳ್ಳಿರಿಸಿದರು. | Kannada Prabha

ಸಾರಾಂಶ

ಪುತ್ತಿಗೆ ಶ್ರೀಗಳು ವಿದೇಶ ಪ್ರಯಾಣ, ಸಮುದ್ರೋಲ್ಲಂಘನೆ ಮಾಡಿದ್ದು ಶಾಸ್ತ್ರ ಉಲ್ಲಂಘನೆ ಎಂಬ ಕಾರಣಕ್ಕೆ ಅವರ 3ನೇ ಪರ್ಯಾಯೋತ್ಸವ, ಮೆರವಣಿಗೆ, ದರ್ಬಾರ್ ನಲ್ಲಿ ಇತರ ಸ್ವಾಮೀಜಿಗಳು ಭಾಗವಹಿಸಿರಲಿಲ್ಲ. ಕಳೆದ ಬಾರಿ ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯ ತೀರ್ಥರು ಪುತ್ತಿಗೆ ಶ್ರೀಗಳಿಗೆ ಪೀಠಾರೋಹಣಕ್ಕೆ ಸಹಕರಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯಲ್ಲಿ ಗುರುವಾರ ಮುಂಜಾನೆ ನಡೆದ ಪುತ್ತಿಗೆ ಮಠದ 4ನೇ ಪರ್ಯಾಯೋತ್ಸವು ಅಪೂರ್ವ ಘಟನೆಗಳಿಗೆ ಸಾಕ್ಷಿಯಾಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಕೈಹಿಡಿದು ಸರ್ವಜ್ಞ ಪೀಠಾರೋಹಣ ಮಾಡಿಸಿ, ಕೃಷ್ಣನ ಪೂಜೆಯ ಅಧಿಕಾರ ಒಪ್ಪಿಸಿದರು.

ಪುತ್ತಿಗೆ ಶ್ರೀಗಳು ವಿದೇಶ ಪ್ರಯಾಣ, ಸಮುದ್ರೋಲ್ಲಂಘನೆ ಮಾಡಿದ್ದು ಶಾಸ್ತ್ರ ಉಲ್ಲಂಘನೆ ಎಂಬ ಕಾರಣಕ್ಕೆ ಅವರ 3ನೇ ಪರ್ಯಾಯೋತ್ಸವ, ಮೆರವಣಿಗೆ, ದರ್ಬಾರ್ ನಲ್ಲಿ ಇತರ ಸ್ವಾಮೀಜಿಗಳು ಭಾಗವಹಿಸಿರಲಿಲ್ಲ. ಕಳೆದ ಬಾರಿ ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯ ತೀರ್ಥರು ಪುತ್ತಿಗೆ ಶ್ರೀಗಳಿಗೆ ಪೀಠಾರೋಹಣಕ್ಕೆ ಸಹಕರಿಸಿದ್ದರು.

ಈ ಬಾರಿಯೂ ಇತರ ಮಠಾಧೀಶರು ಪರ್ಯಾಯೋತ್ಸವದಲ್ಲಿ ಭಾಗವಹಿಸದೇ ಇರುವುದರಿಂದ ಪುತ್ತಿಗೆ ಶ್ರೀಗಳಿಗೆ ಪರ್ಯಾಯ ಅಧಿಕಾರ ಹಸ್ತಾಂತರ ಯಾರು ಮಾಡುತ್ತಾರೆ ಎಂಬ ಬಗ್ಗೆ ಭಕ್ತರಲ್ಲಿ ಆತಂಕ ಉಂಟಾಗಿತ್ತು. ಈ ಆತಂಕವನ್ನು ಅದಮಾರು ಶ್ರೀಗಳು ನಿರಾತಂಕಗೊಳಿಸಿದ್ದಾರೆ.

ಈ ಬಾರಿಯೂ ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವದ ಮೆರವಣಿಗೆಯಲ್ಲಿ, ದರ್ಬಾರಿನಲ್ಲಿ ಇತರ ಮಠಾಧೀಶರು ಭಾಗವಹಿಸಿರಲಿಲ್ಲ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪಟ್ಟ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಆಗಮಿಸಿದ್ದರು.

ಕಳೆದ 2 ವರ್ಷಗಳಿಂದ ಕೃಷ್ಣ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ನಡೆಸಿದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ತಮ್ಮ ಕೊನೆಯ ಪೂಜೆ ಮುಗಿಸಿ ತಮ್ಮ ಮಠಕ್ಕೆ ಹಿಂತಿರುಗಿದ್ದರು.

ನಿರ್ಗಮನ ಪೀಠಾಧೀಶರು ಅಕ್ಷಯಪಾತ್ರೆ, ಕೃಷ್ಣಮಠದ ಕೀಲಿಕೈಗಳನ್ನು ನಿಯೋಜಿತ ಪೀಠಾದೀಶರಿಗೆ ಹಸ್ತಾಂತರಿಸಿ, ಸರ್ವಜ್ಞ ಪೀಠಾರೋಹಣ ಮಾಡಿಸಿ, ಕೃಷ್ಣನ ಪೂಜೆಯ ಅಧಿಕಾರ ಬಿಟ್ಟುಕೊಡುವುದು ಪದ್ಧತಿಯಾಗಿದೆ.

ಗುರುವಾರ ಮುಂಜಾನೆ ಪುತ್ತಿಗೆ ಶ್ರೀಗಳಿಗೆ ಅದಮಾರು ಶ್ರೀಗಳು ಅಕ್ಷಯಪಾತ್ರೆ ಹಸ್ತಾಂತರಿಸಿ, ಸರ್ವಜ್ಞ ಪೀಠಾರೋಹಣ ಮಾಡಿಸಿ, ಅಷ್ಟ ಮಠಗಳ ನಡುವೆ ಒಗ್ಗಟ್ಟಿನ ಹೊಸ ಭರವಸೆ ಮೂಡಿಸಿದ್ದಾರೆ.ಈ ಘಟನೆ ಕೃಷ್ಣನ ಇಚ್ಛೆ: ಪುತ್ತಿಗೆ ಶ್ರೀ

ಅದಮಾರು ಶ್ರೀಗಳು ಬಂದು ಪರ್ಯಾಯ ಪೀಠದಲ್ಲಿ ಕುಳ್ಳಿರಿಸಿದ್ದು ನಮಗೆ ಅಚ್ಚರಿಯಾಗಿದೆ, ಇದು ಕೃಷ್ಣನ ಇಚ್ಛೆಯೇ ಆಗಿದೆ ಎಂದು ಪುತ್ತಿಗೆ ಶ್ರೀಗಳು ಸರ್ವಜ್ಞಪೀಠದಲ್ಲಿ ಕುಳಿತು ಹೇಳಿದರು.

ನಮ್ಮ ಪರ್ಯಾಯವನ್ನು ನಾವು ವಿಶ್ವ ಪರ್ಯಾಯ ಎಂದು ಘೋಷಿಸಿದ್ದೇವೆ. ಅದಕ್ಕೆ ಪೂರಕವಾಗಿ ವಿಶ್ವ ಎಂಬ ಹೆಸರನ್ನು ಹೊತ್ತಿರುವ ಶ್ರೀ ವಿಶ್ವಪ್ರಿಯ ತೀರ್ಥರೇ ಬಂದು ನಮ್ಮನ್ನು ಸರ್ವಜ್ಞ ಪೀಠಕ್ಕೇರಿಸಿದ್ದಾರೆ. ಕೃಷ್ಣನೇ ಈ ವಾತಾವರಣವನ್ನು ನಿರ್ಮಾಣ ಮಾಡಿದ್ದಾನೆ, ತಮ್ಮ ಪರ್ಯಾಯ ವಿಶ್ವಕ್ಕೆ ಪ್ರಿಯವಾಗುವ ಸಂದೇಶ ಇದು ಎಂದು ಹೇಳಿದರು.

ಈ ಪರ್ಯಾಯದಿಂದ ವಿಶ್ವಕ್ಕೆ ಕ್ಷೇಮಾವಾಗಲಿ, ಭಾರತ ವಿಶ್ವ ಗುರುವಾಗಲಿ ಎಂದು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ