ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಮತದಾನ ಫೆ.16ರಂದು ನಡೆಯಲಿದ್ದು, ಫೆ.20ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣೆಗೆ ಬೇಕಾದ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆ ಮಾಡಿದ್ದು, ಜ.16ರಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಘೋಷಣೆ ಮಾಡುವಂತಿಲ್ಲ. ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆಕ್ರಮ ಕೈಗೊಳ್ಳುವಂತಿಲ್ಲ ಎಂದು ತಿಳಿಸಿದರು.
ಜ.23ರಂದು ಈ ಕುರಿತು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಕೆಗೆ ಜ.30 ಕೊನೆಯ ದಿನವಾಗಿದೆ. ಜ.31ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಫೆ.2 ನಾಮಪತ್ರ ವಾಪಾಸ್‌ಗೆ ಕೊನೆಯ ದಿನವಾಗಿದೆ. ಫೆ.16ರ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಫೆ.20ಕ್ಕೆ ಮತ ಎಣಿಕೆ ನಡೆಯಲಿದ್ದು, ಫೆ.23ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಿದೆ ಎಂದು ವಿವರಿಸಿದರು.ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿ 11,763 ಮತದಾರರಿದ್ದಾರೆ. 1,048 ಅರ್ಜಿ ಸಲ್ಲಿಕೆ ಪರಿಶೀಲನೆ ಬಾಕಿ ಇದೆ. ನಾಮಪತ್ರ ಸಲ್ಲಿಕೆ ಕೊನೆಯ ದಿನದವರೆಗೆ ಮತದಾರ ಪಟ್ಟಿಗೆ ಅರ್ಹ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರ ಅಂತಿಮ ಪಟ್ಟಿಯನ್ನು ಡಿ.30ರಂದು ಪ್ರಕಟಿಸಲಾಗಿದ್ದು, ಅದರಲ್ಲಿ ಪುನರಾರ್ವತನೆಯಾಗಿರುವ 97 ಮತದಾರರ ತೆಗೆದು ಹಾಕಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 34 ಮತಗಟ್ಟೆಯಲ್ಲಿ ಮತದಾರ ಪ್ರಕ್ರಿಯೆ ನಡೆಯಲಿದ್ದು, 400 ಅಧಿಕಾರಿ ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ಬಳಕೆ ಮಾಡಲಾಗುವುದು. ಮತಪೆಟ್ಟಿಗೆ ಸಂಗ್ರಹಿಸುವ ಸ್ಟ್ರಾಂಗ್ ರೂಂ ಬಗ್ಗೆ ಪ್ರಾದೇಶಿಕ ಆಯುಕ್ತರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್.ರಾಮಚಂದ್ರನ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ। ಹರೀಶ್ ಕುಮಾರ್, ದಯಾನಂದ್, ಸ್ನೇಹಲ್, ವಿನೋತ್ ಪ್ರಿಯಾ ಇದ್ದರು.ಎಂಎಲ್‌ಸಿ ಉಪಚುನಾವಣೆಗೆ ಮೈತ್ರಿ ಕೂಟದ ಅಭ್ಯರ್ಥಿಯಾಗಿ ರಂಗನಾಥ್‌ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಕಣಕ್ಕೆ ಇಳಿಯುತ್ತಿದ್ದಾರೆ.ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ , ಮೈತ್ರಿಕೂಟದ ಅಭ್ಯರ್ಥಿಯಾಗಿ ರಂಗನಾಥ್ ಸ್ಪರ್ಧಿಸುತ್ತಿದ್ದಾರೆ. ಅವರ ಗೆಲುವಿಗೆ ಬೆಂಗಳೂರು ಮಹಾನಗರ ಜೆಡಿಎಸ್ ಪಕ್ಷದ ಮುಖಂಡರ ಸಭೆ ನಡೆದಿದ್ದು, ಪಕ್ಷದ ಅಭ್ಯರ್ಥಿ ಗೆಲುವಿಗೆ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಮಿತ್ರಪಕ್ಷವಾದ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡಬೇಕಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧ ಶಿಕ್ಷಕರು ರೋಸಿ ಹೋಗಿದ್ದಾರೆ. ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಸರ್ಕಾರದ ಅಸಡ್ಡೆ ಬಹಳ ಅಪಾಯಕಾರಿ ಆಗಿದೆ. ಇದನ್ನು ಶಿಕ್ಷಕ ಬಂಧುಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.ಸಭೆಯಲ್ಲಿ ರಾಜ್ಯ ಮಹಿಳಾ ಜೆಡಿಎಸ್ ಅಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್, ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಹಿರಿಯ ಮುಖಂಡರಾದ ಮಂಜುನಾಥ್ ಉಪಸ್ಥಿತರಿದ್ದರು.