ತ್ರಿಪದಿ ವಚನಗಳಿಂದ ವಿಶ್ವಕ್ಕೆ ದಾರಿ ದೀಪವಾದ ಸರ್ವಜ್ಞ: ಸಿದ್ದೇಶ್

KannadaprabhaNewsNetwork | Published : Feb 21, 2024 2:09 AM

ಸಾರಾಂಶ

ವಿಶ್ವಕ್ಕೆ ದಾರಿ ದೀಪವಾಗಿರುವ ಸರ್ವಜ್ಞರ ತ್ರಿಪದಿ ವಚನಗಳು ಜೀವನದ ಮೌಲ್ಯಗಳನ್ನು ಕಲಿಸುತ್ತವೆ ಎಂದು ತುಮಕೂರು ತಾಲೂಕು ತಹಸೀಲ್ದಾರ್‌ ಸಿದ್ದೇಶ್ ಎಂ. ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಿಶ್ವಕ್ಕೆ ದಾರಿ ದೀಪವಾಗಿರುವ ಸರ್ವಜ್ಞರ ತ್ರಿಪದಿ ವಚನಗಳು ಜೀವನದ ಮೌಲ್ಯಗಳನ್ನು ಕಲಿಸುತ್ತವೆ ಎಂದು ತುಮಕೂರು ತಾಲೂಕು ತಹಸೀಲ್ದಾರ್‌ ಸಿದ್ದೇಶ್ ಎಂ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಂಬಾರರ ಸಂಘದ ವತಿಯಿಂದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಸರ್ವಜ್ಞರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅವರ ವಚನಗಳಲ್ಲಿ ಗುರು-ಶಿಷ್ಯರು, ಕಾಯಕ ಪರಂಪರೆ, ಜಾತಿ ವ್ಯವಸ್ಥೆ, ಆಹಾರ ಪದ್ಧತಿ, ರಾಜಕೀಯ, ಸಮಾಜದ ಅನಿಷ್ಟ ಪದ್ಧತಿಗಳು ಹೀಗೆ ಎಲ್ಲಾ ಕ್ಷೇತ್ರಗಳ ಬಗ್ಗೆ ತಿಳುವಳಿಕೆಯ ಸಂದೇಶವನ್ನು ನೀಡಿದ್ದಾರೆ. ಸರ್ವಜ್ಞರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಸಾಹಿತಿ ಕೃಷ್ಣತಿಪ್ಪೂರು, ಸರ್ವಜ್ಞ ಒಬ್ಬ ದಾರ್ಶನಿಕ ಕವಿ. ತನ್ನ ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದವರು. ಸರ್ವಜ್ಞ ಒಬ್ಬ ಪ್ರವಾದಿ, ಅಲೆಮಾರಿ ಸಂತ ಎಂತಲೂ ಕರೆಯಬಹುದಾಗಿದೆ ಎಂದರು.

ಸರ್ವಜ್ಞ ಒಬ್ಬ ಅಪ್ಪಟ ಕನ್ನಡದ ಕವಿ. ತನ್ನ ವಚನಗಳನ್ನು ಎಲ್ಲಿಯೂ ಸಹ ಬರವಣಿಗೆಯಲ್ಲಿ ಬರೆದಿಲ್ಲ. ಅವರ ೨೦೦೦ ವಚನಗಳನ್ನು ಸಂಶೋಧಿಸಿ, ಸಂರಕ್ಷಿಸಿದ ಕೀರ್ತಿ ಉತ್ತಂಗಿ ಚನ್ನಪ್ಪ ಅವರಿಗೆ ಸಲ್ಲುತ್ತದೆ. ಅವರು ಈ ವಚನಗಳನ್ನು ಸಂರಕ್ಷಿಸದಿದ್ದರೆ ಜೀವನದ ಮೌಲ್ಯಗಳ ಬಗ್ಗೆ ಅರಿಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್‌, ಕುಂಬಾರ ಸಂಘದ ಅಧ್ಯಕ್ಷ ಎನ್. ಶ್ರೀನಿವಾಸ್, ಕುಂಬೇಶ್ವರ ಹಿಂದುಳಿದ ವರ್ಗಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಘುರಾಮಯ್ಯ, ಕುಂಭೇಶ್ವರಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರಾಧಾ ಅಶ್ವತ್ಥಪ್ಪ, ಎಸ್.ಆರ್‌. ದೇವಪ್ರಕಾಶ್, ಅಶ್ವತ್ಥಪ್ಪ, ಸುಬ್ಬರಾಯಪ್ಪ, ಕುಂಬಾರ ಸಂಘದ ನಿರ್ದೇಶಕ ಬಿ.ಆರ್‌. ಶಿವಕುಮಾರ್‌ ಬಂಡಿಹಳ್ಳಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.QUOTE

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸರ್ವಜ್ಞರ ಕೊಡುಗೆ ಅಪಾರ. ಜಾತಿ ಪದ್ಧತಿಯ ಬಗ್ಗೆ ಬಹಳ ಸೂಕ್ಷ್ಮವಾಗಿ ತಿಳಿ ಹೇಳಿದ್ದಾರೆ. ಅವರ ವಚನಗಳ ಸತ್ವ ಮತ್ತು ಅವುಗಳ ಮಹತ್ವವನ್ನು ಎಲ್ಲರಿಗೂ ತಿಳಿಸಬೇಕು. ಸದಾ ಮಣ್ಣಿನೊಟ್ಟಿಗೆ ಜೀವನ ಕಳೆಯುವ ನಿಜವಾದ ಮಣ್ಣಿನ ಮಕ್ಕಳಾದ ಕುಂಬಾರ ಸಮುದಾಯದವರು ಆಧುನಿಕತೆಗೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಬೇಕು.

ಸಿದ್ದಲಿಂಗಪ್ಪ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ

Share this article