ಗ್ರಾಮೀಣ ಜನರಿಗೆ ಆರೋಗ್ಯ ಬಲ ತುಂಬಿದ ಸತ್ಯಸಾಯಿ ಆಸ್ಪತ್ರೆ; ಸದ್ಗುರು ಶ್ರೀ ಮಧುಸೂದನ ಸಾಯಿ

KannadaprabhaNewsNetwork |  
Published : Oct 08, 2025, 01:00 AM IST
 ಸಿಕೆಬಿ-1 ಇಂಡೋನೇಷ್ಯಾದಲ್ಲಿ ಸಂಗೀತ ಮತ್ತು ಲಲಿತಕಲೆಗೆ ಕೊಡುಗೆ ನೀಡಿರುವ ಹಿರಿಯ ಕಲಾವಿದ ಡಾ ಜೆ.ವಯಾನ್ ದಿಬಿಯಾ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಿದರು | Kannada Prabha

ಸಾರಾಂಶ

ವಿಆರ್‌ಎಲ್ ಸಮೂಹ ಸಂಸ್ಥೆಗಳ ಮಾಲೀಕರಾದ ಪದ್ಮಶ್ರೀ ಪುರಸ್ಕೃತ ವಿಜಯ್ ಸಂಕೇಶ್ವರ ಅವರು ಭೇಟಿ ನೀಡಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸತ್ಯಸಾಯಿ ಆಸ್ಪತ್ರೆಯಲ್ಲಿ ಅತ್ಯುತ್ತಮ ಗುಣಮಟ್ಟದ ಉಚಿತ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಜಾಗೃತಿ ಕಂಡು ಬರುತ್ತಿದ್ದು, ಹೆಚ್ಚಿನ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಗ್ರಾಮೀಣ ಆರ್ಥಿಕತೆ ಸುಧಾರಿಸುವಲ್ಲಿ ನಮ್ಮ ಆಸ್ಪತ್ರೆಯು ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು, ಒಂದು ಕುಟುಂಬ, ಜಾಗತಿಕ ಸಾಂಸ್ಕೃತಿಕ ಉತ್ಸವ''''ದ 52ನೇ ದಿನದಂದು ಆಶೀರ್ವಚನ ನೀಡಿ ಮಾತನಾಡಿ, ವೈದ್ಯಕೀಯ ಆರೈಕೆಯಲ್ಲಿ ಸಮಯವು ಅತ್ಯಂತ ಮುಖ್ಯ. ರೋಗಿಗೆ ಸಕಾಲಕ್ಕೆ ಚಿಕಿತ್ಸೆ ಸಿಗಲು ನಮ್ಮ ಆಸ್ಪತ್ರೆ ಸಿಬ್ಬಂದಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದರು.

ಹೊರ ರೋಗಿಗಳ ವಿಭಾಗದಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಒಪಿಡಿಗಾಗಿ ಹೊರಗೆ ಘಟಕಗಳನ್ನು ಆರಂಭಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಥವಾ ಸಮಾಲೋಚನೆಯ ಅಗತ್ಯವಿರುವವರು ಮಾತ್ರವೇ ಆಸ್ಪತ್ರೆಯ ಒಳಗೆ ಬರುತ್ತಿದ್ದಾರೆ. ಈ ಕ್ರಮದಿಂದಾಗಿ ರೋಗಿಗಳ ದಟ್ಟಣೆ ಕಡಿಮೆಯಾಗಿದ್ದು, ತುರ್ತು ಸಂದರ್ಭದ ಚಿಕಿತ್ಸೆಗೆ ಆಗುತ್ತಿದ್ದ ಅಡೆತಡೆಗಳು ನಿವಾರಣೆಯಾಗಿವೆ ಎಂದು ಹೇಳಿದರು.

ಒಬ್ಬ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದಾಗ ಎರಡು ಬದಿಯಿಂದ ಕಷ್ಟ ಎದುರಿಸಬೇಕಾಗುತ್ತದೆ. ಒಂದೆಡೆ ತಮ್ಮ ಉಳಿತಾಯದ ಮೊತ್ತ ಕರಗಿದರೆ ಮತ್ತೊಂದು ಕಡೆ ಆದಾಯ ಗಳಿಕೆ ಸ್ಥಗಿತವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿರುವ ವೃದ್ಧರ ಚಿಕಿತ್ಸೆ ನಿಜಕ್ಕೂ ಸವಾಲಾಗಿತ್ತು. ನಮ್ಮ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುವುದು ಗ್ರಾಮೀಣ ಪ್ರದೇಶಗಳಲ್ಲಿನ ಎಷ್ಟೋ ಮನೆಗಳು ಉಳಿಯಲು ಕಾರಣವಾಗಿದೆ ಎಂದು ವಿವರಿಸಿದರು.

ಅತಿಥಿ ದೇಶವಾದ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು. ''''ಒಂದು ಜಗತ್ತು, ಒಂದು ಕುಟುಂಬ ಪ್ರತಿಷ್ಠಾನ''''ವು ಸ್ವಯಂ ಸೇವಾ ಚಟುವಟಿಕೆಗಳನ್ನು ಹಲವು ದಿನಗಳಿಂದ ನಿರ್ವಹಿಸುತ್ತಿದೆ. ಶಾಲಾ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಕಾರ್ಯಕ್ರಮಗಳು, ಬಡ ಜನರಿಗೆ ಆರೋಗ್ಯ ಸೇವೆಗಳನ್ನು ಅಲ್ಲಿನ ಸ್ವಯಂ ಸೇವಕರ ಮೂಲಕ ನೀಡಲಾಗುತ್ತಿದೆ ಎಂದರು.

ಇದೇ ವೇಳೆ ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ''''ಉಮಾ ಮಹೇಶ್ವರ ರಾವ್ ಆ್ಯಂಡ್ ಕಂಪನಿ''''ಗೆ ''''ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ'''' ನೀಡಿ ಗೌರವಿಸಲಾಯಿತು. ಕಂಪನಿಯ ವ್ಯವಸ್ಥಾಪಕ ಪಾಲುದಾರ ರವಿ ವಡ್ಲಮನಿ ಪ್ರಶಸ್ತಿ ಸ್ವೀಕರಿಸಿದರು. ಇಂಡೋನೇಷ್ಯಾದಲ್ಲಿ ಸಂಗೀತ ಮತ್ತು ಲಲಿತಕಲೆಗೆ ಕೊಡುಗೆ ನೀಡಿರುವ ಹಿರಿಯ ಕಲಾವಿದ ಡಾ. ಜೆ.ವಯಾನ್ ದಿಬಿಯಾ ಅವರಿಗೆ ''''ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ವಿಜಯ ಸಂಕೇಶ್ವರ ಭೇಟಿ:

ವಿಆರ್‌ಎಲ್ ಸಮೂಹ ಸಂಸ್ಥೆಗಳ ಮಾಲೀಕರಾದ ಪದ್ಮಶ್ರೀ ಪುರಸ್ಕೃತ ವಿಜಯ್ ಸಂಕೇಶ್ವರ ಅವರು ಭೇಟಿ ನೀಡಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಆಶೀರ್ವಾದ ಪಡೆದರು.

ಸರಕು ಸಾಗಣೆ, ದೂರ ಸಂಚಾರಿ ಬಸ್‌ಗಳು, ದಿನಪತ್ರಿಕೆಯನ್ನು ವಿಆರ್‌ಎಲ್ ಸಮೂಹವು ನಿರ್ವಹಿಸುತ್ತಿದೆ. ಈ ಹಿಂದೆ ಸಂಸದರಾಗಿದ್ದ ವಿಜಯ್ ಸಂಕೇಶ್ವರ ಅವರು ಸಮಾಜ ಸೇವಾ ಕ್ಷೇತ್ರದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಸತ್ಯ ಸಾಯಿ ಗ್ರಾಮದಲ್ಲಿ ಅವರು ''''ಒಂದು ಜಗತ್ತು, ಒಂದು ಕುಟುಂಬ, ಜಾಗತಿಕ ಮಾನವೀಯ ಸೇವಾ ಅಭಿಯಾನ'''' ಕುರಿತು ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ