ಹಾವೇರಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅವತರಣ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆ ಫೆ. 23ರಿಂದ ಫೆ.24ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಬಸವರಾಜ ಹರಮಗಟ್ಟಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಸಾಯಿ ಬಾಬಾರವರ ಅವತರಣ ಶತಮಾನೋತ್ಸವ ಪ್ರಯುಕ್ತ ಬಾಬಾರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯಪ್ರೇಮದ ಸಂದೇಶ ಸಾರಲು ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸಾರ್ವಜನಿಕರಿಗೆ ಬಾಬಾರವರ ದಿವ್ಯದರ್ಶನ, ಪಾದುಕಾ ನಮಸ್ಕಾರ ಮತ್ತು ವಿಭೂತಿ ಪ್ರಸಾದ ಪಡೆಯಲು ಅವಕಾಶ ಕಲ್ಪಿಸಿದೆ. ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ದೇಶಾದ್ಯಂತ 5 ದಿವ್ಯರಥಗಳು ಬೇರೆ ಬೇರೆ ರಾಜ್ಯದ 5 ಸಾವಿರ ಗ್ರಾಮಗಳಲ್ಲಿ ಸುಮಾರು 3.50 ಲಕ್ಷ ಕಿಮೀ ಯಾತ್ರೆ ನಡೆಸಿ 2026 ನ. 23ರಂದು ಮರಳಿ ಪುಟ್ಟಪರ್ತಿಯನ್ನು ತಲುಪಲಿದೆ. ಅದರಂತೆ ಯಾತ್ರೆಯ ಒಂದು ರಥವು ಫೆ. 23ರಂದು ಹಾವೇರಿ ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ ಎಂದರು.ಫೆ. 23ರಂದು ಧಾರವಾಡ ಜಿಲ್ಲೆಯಿಂದ ಬರುವ ರಥವನ್ನು ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸ್ವಾಗತಿಸಲಾಗುವುದು. ನಂತರ ಕಾರಡಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆದು, ಸಂಜೆ 3.30ಕ್ಕೆ ಬಂಕಾಪುರ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಪೂಜೆ ಅರ್ಚನೆ, ಬಳಿಕ ಬೆಳಗಾಲಪೇಟೆ ಗ್ರಾಮ ತಲುಪಿ ನಿಸ್ಸಿಮೇಶ್ವರ ದೇವಸ್ಥಾನ ತಲುಪಲಿದೆ. ಅಲ್ಲಿಂದ ಹಾನಗಲ್ಲ ನಗರ ತಲುಪಿ ಸಂಜೆ 5.30ಕ್ಕೆ ಮೆರವಣಿಗೆ ನಡೆದು, ಕುಮಾರೇಶ್ವರ ಮಠವನ್ನು ತಲುಪಿ ವಾಸ್ತವ್ಯ ಮಾಡಲಾಗುವುದು ಎಂದರು.ಫೆ. 24ರಂದು ಹಾನಗಲ್ಲನಿಂದ ಹೊರಟು ಅಕ್ಕಿಆಲೂರ ಗ್ರಾಮಕ್ಕೆ ಬಂದು ಪೂಜಾ ಅರ್ಚನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಕುಳೇನೂರ ಗ್ರಾಮದ ಬೈಲ್‌ಬಸವೇಶ್ವರ ದೇವಸ್ಥಾನ ತಲುಪಿ ಅರ್ಚನೆ, ಮಹಾಮಂಗಳಾರತಿ ನಡೆಸಿ ವಿಶ್ರಾಂತಿಸುವುದು. ಸಂಜೆ 3.30ಕ್ಕೆ ಹೊರಟು ಹಾವೇರಿಯ ಶ್ರೀ ಹುಕ್ಕೇರಿಮಠಕ್ಕೆ ತಲುಪಲಿದೆ. ಸಂಜೆ 4.30ರ ನಂತರ ಹುಕ್ಕೇರಿಮಠದಿಂದ ಪೂರ್ಣಕುಂಭ, ಕಳಸ, ವೇದಘೋಷ, ಮಂಗಳವಾದ್ಯ, ಕಲಾಮೇಳಗಳೊಂದಿಗೆ ಎಂ.ಜಿ. ರಸ್ತೆ ಮೂಲಕ ಸಾಗಿ ವೀರಭದ್ರೇಶ್ವರ ದೇವಸ್ಥಾನ ತಲುಪಲಿದೆ. ಸಂಜೆ ವೇದ ಘೋಷ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ವಾಸ್ತವ್ಯ ಮಾಡಲಾಗುವುದು ಎಂದರು.ಫೆ. 25ರಂದು ಬೆಳಗ್ಗೆ ಹಾವೇರಿಯಿಂದ ಕರ್ಜಗಿ ಗ್ರಾಮಕ್ಕೆ ತೆರಳಿ ಗಾಂಧಿ ಕಟ್ಟೆಗೆ ಪೂಜೆ, ಅರ್ಚನೆ ನಡೆಸಲಾಗುವುದು. ನಂತರ ಅಗಡಿ ಗ್ರಾಮದಲ್ಲಿ ಕಳಸ, ವೇದಘೋಷ, ಮಂಗಳ ದ್ರವ್ಯಧಾರಕರು, ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಸಿ ಗುರು ಚಿದಂಬರೇಶ್ವರ ಮಠದಲ್ಲಿ ಪೂಜೆ ಸಲ್ಲಿಸಲಾಗುವುದು. ನಂತರ ನೆಲೋಗಲ್ ಗ್ರಾಮದಲ್ಲಿ ಪೂಜೆ, ಅರ್ಚನೆ ಮಾಡಿ ಮುಖ್ಯ ರಸ್ತೆ ಮೂಲಕ ಬ್ಯಾಡಗಿ ಪಟ್ಟಣವನ್ನು ತಲುಪಲಿದೆ. ಅಲ್ಲಿ ಶ್ರೀ ವರದಾನೇಶ್ವರಿ ದೇವಸ್ಥಾನದಿಂದ ಕೆಇಬಿ ಕಲ್ಯಾಣಮಂಟಪದ ವರೆಗೆ ಮೆರವಣಿಗೆ ನಡೆಸಲಾಗುವುದು. ಸಂಜೆ 3.30ಕ್ಕೆ ರಟ್ಟೀಹಳ್ಳಿ ಮಾರ್ಗವಾಗಿ ತಿಪ್ಪಾಯಿಕೊಪ್ಪದ ಮಠ ತಲುಪಿ ಅರ್ಚನೆ, ಮಹಾ ಮಂಗಳಾರತಿ ಸಲ್ಲಿಸಲಾಗುವುದು. ಅಲ್ಲಿಂದ ಶಿವಮೊಗ್ಗ ಜಿಲ್ಲೆಗೆ ರಥ ಹೊರಡಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಂಕ್ರಯ್ಯ ವಾಟನಾಳಮಠ, ರಘುವೀರ ಚೌಹಾಣ, ರಾಜಶೇಖರ ಹುಣಸಿಕಟ್ಟಿ, ರಾಜು ಜವಳಕರ, ಜಯಕುಮಾರ ಉಳ್ಳಾಗಡ್ಡಿ ಇದ್ದರು.