ಕ್ಷೇತ್ರದಲ್ಲಿ ಜನರು ಮೆಚ್ಚುವಂತೆ ಅಭಿವೃದ್ಧಿ ಕಾರ್ಯ ಮಾಡಿದ ತೃಪ್ತಿ

KannadaprabhaNewsNetwork |  
Published : Oct 24, 2024, 12:47 AM IST
ಕಾರ್ಯಕ್ರಮದಲ್ಲಿ ಸಿ.ಸಿ.ಪಾಟೀಲ ಹುಟ್ಟಹಬ್ಬದ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕೋವಿಡ್‌ನಲ್ಲಿ ಜೀವದ ಹಂಗು ತೊರೆದು ನಗರ ಸ್ವಚ್ಛ ಮಾಡಿದ ಪೌರ ಕಾರ್ಮಿಕರಿಗೆ ನನ್ನ ಜನ್ಮ ದಿನದಂದು ಸನ್ಮಾನಿಸಿ ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ

ಗದಗ: ನರಗುಂದ ಕ್ಷೇತ್ರದಲ್ಲಿ ಜನರು ಮೆಚ್ಚುವಂತೆ ಅಭಿವೃದ್ಧಿ ಕಾರ್ಯ ಮಾಡಿದ ತೃಪ್ತಿ ಇದೆ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಗದಗ ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಬುಧವಾರ ಬಿಜೆಪಿ ಹಾಗೂ ಸಿ.ಸಿ.ಪಾಟೀಲ ಅಭಿಮಾನಿ ಬಳಗದಿಂದ ಅವರ 66ನೇ ಜನ್ಮದಿನದ ಅಂಗವಾಗಿ ಅಂಧ-ಅನಾಥ ಮತ್ತು ಕಾಶಿಪೀಠದ ವಟುಗಳಿಗೆ ಹಾಗೂ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣಾ ಕಾರ್ಯಕ್ರಮ, ವೀರರಾಣಿ ಕಿತ್ತೂರ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

65 ವರ್ಷದ ನನ್ನ ಜೀವನದಲ್ಲಿ ಸತತ 35 ವರ್ಷಗಳ ಕಾಲ ಅಧಿಕಾರದಲ್ಲಿದ್ದೇನೆ. ಇದಕ್ಕೆ ಸಂಘ ಪರಿವಾರ ಹಾಗೂ ಬಿಜೆಪಿ ನಾಯಕರ ಆಶೀರ್ವಾದವೇ ಕಾರಣವಾಗಿದೆ. ನನಗೆ ನರಗುಂದ ಮತಕ್ಷೇತ್ರದಲ್ಲಿ ಮೊದಲು ಗುರುತಿಸಿ ಟಿಕೆಟ್ ನೀಡಿದ್ದು ದಿ. ಅನಂತಕುಮಾರ, ನಂತರ ಶಾಸಕನಾಗಿ ಆಯ್ಕೆಯಾದ ಮೇಲೆ ನನ್ನ ಕಾರ್ಯ ವೈಖರಿ ಗುರುತಿಸಿದವರು ಮಾಜಿ ಸಿ.ಎಂ ಬಿಎಸ್‌ವೈ. ಈ ಇಬ್ಬರೂ ಹಿರಿಯ ನಾಯಕರೊಂದಿಗೆ ನಮ್ಮ ಪಕ್ಷದ ಹಲವಾರು ಹಿರಿಯರ ಆಶೀರ್ವಾದಿಂದ ಸಾಧ್ಯವಾಗಿದೆ. ಅಂದಿನಿಂದ ಪಕ್ಷದ ಆತ್ಮೀಯ ಬಳಗದಲ್ಲಿ ನಾನು ಗುರುತಿಸಿಕೊಳ್ಳುವಂತಾಯಿತು. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ನೀಡಿದ್ದ ಲೋಕೋಪಯೋಗಿ ಇಲಾಖೆಗೆ ನ್ಯಾಯ ಒದಗಿಸಿದ ತೃಪ್ತಿ ಇದೆ ಎಂದರು.

ಕೋವಿಡ್‌ನಲ್ಲಿ ಜೀವದ ಹಂಗು ತೊರೆದು ನಗರ ಸ್ವಚ್ಛ ಮಾಡಿದ ಪೌರ ಕಾರ್ಮಿಕರಿಗೆ ನನ್ನ ಜನ್ಮ ದಿನದಂದು ಸನ್ಮಾನಿಸಿ ಗೌರವ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಗದಗ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿ, ಸಿ.ಸಿ. ಪಾಟೀಲ ಕೃಷಿ ಹಾಗೂ ವ್ಯಾಪಾರಸ್ಥರ ಮನೆತನದಲ್ಲಿ ಜನಿಸಿ, ಬೆಳಗಾವಿ ಜಿಲ್ಲೆಯ ಉಗರಗೋಳ ಜಿಪಂ ಕ್ಷೇತ್ರದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಬೆಳಗಾವಿಯಿಂದ ರಾಜಕೀಯ ಜೀವನವಿದ್ದರೂ ಗದಗ ಜಿಲ್ಲೆಯಲ್ಲಿ ತಮ್ಮ ಓಡನಾಟ ಮುಂದುವರಿಸಿ ನರಗುಂದದಲ್ಲಿ ಲಯನ್ಸ್ ಸ್ಕೂಲ್ ಸಂಸ್ಥೆ ಕಟ್ಟಿ ಬೆಳೆಸಿಕೊಂಡು ಹೋಗುತ್ತಿದ್ದಾರೆ. ಹಲವಾರು ವರ್ಷಗಳ ಹಿಂದೆಯೇ ಕಳಸಾ-ಬಂಡೂರಿ ಹೋರಾಟದಲ್ಲಿ ಭಾಗವಹಿಸಿ ಪಾದಯಾತ್ರೆ ಮಾಡಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಬಿಜೆಪಿ ಹಿರಿಯ ಮುಖಂಡ, ವೈದ್ಯ ಡಾ. ಶೇಖರ ಸಜ್ಜನರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ನಾಗರಾಜ ಕುಲಕರ್ಣಿ ಮುಂತಾದವರು ಮಾತನಾಡಿದರು. ನಂತರ ಪೌರಕಾರ್ಮಿಕರು ಹಾಗೂ ವಟುಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಸಿ.ಸಿ.ಪಾಟೀಲ ಅಭಿಮಾನಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಪ್ರಶಾಂತ ನಾಯ್ಕರ, ಮಹೇಶ ದಾಸರ, ಜಗನ್ನಾಥಸಾ ಬಾಂಡಗೆ, ಎಂ.ಎಂ.ಹಿರೇಮಠ, ತೋಟಸಾ ಬಾಂಡಗೆ, ವೆಂಕಣ್ಣ ಜೋಶಿ, ವಿನಾಯಕ ಮಾನ್ವಿ, ಪ್ರಕಾಶ ಅಂಗಡಿ, ಶಿವರಾಜಗೌಡ ಹಿರೇಮನಿಪಾಟೀಲ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ವಿಜಯಲಕ್ಷ್ಮೀ ದಿಂಡೂರ, ವಿಜಯಲಕ್ಷ್ಮೀ ಮಾನ್ವಿ, ಶಾರದಾ ಸಜ್ಜನರ, ಕಿಶನ್ ಮೆರವಾಡೆ, ಮಂಜುನಾಥ ಮುಳಗುಂದ, ಭೀಮಸಿಂಗ್ ರಾಥೋಡ, ನಾಗರಾಜ ತಳವಾರ, ಲಕ್ಷ್ಮಿ ಶಂಕರ್ ಖಾಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಗರ ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ನಮ್ಮ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಿ.ಸಿ ಪಾಟೀಲರು ತಮ್ಮ ಜೀವನ ಜನರ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಕೈಗೊಂಡ ನಿರ್ಧಾರ ರಾಜ್ಯದ ಜನತೆ ಮೆಚ್ಚಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ಬೆಳೆಸುವ ಗುಣ ಹೊಂದಿದ್ದು, ಮುಂದೆ ಅವರು ರಾಜ್ಯದ ಉಪಮುಖ್ಯಮಂತ್ರಿ ಆಗಲಿ ಎಂದು ಮಾಜಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಪ್ರಿಮ್‌ ಶಾಲೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಸಂಭ್ರಮೋತ್ಸವ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ