ಸಿಗಂದೂರು ಸೇತುವೆ ನಿರ್ಮಾಣದ ಬಗ್ಗೆ ಸಂತೃಪ್ತಿ ಇದೆ

KannadaprabhaNewsNetwork | Published : Jul 2, 2025 12:25 AM
01ಬ್ಯಾಕೋಡು01ಸಾಗರ ತಾಲೂಕಿನಲ್ಲಿರುವ ಸಿಗಂದೂರಿನ ಸೇತುವೆಯ ಪೂರ್ಣ ಹಂತದ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಪರಿಶೀಲಿಸಿದರು. ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತಿತರರಿದ್ದರು. | Kannada Prabha

ಶರಾವತಿ ಹಿನ್ನೀರು ಪ್ರದೇಶದ ದಶಕಗಳ ಸಂಕೋಲೆ ಬಿಡಿಸುವ ಭಾಗ್ಯದ ಕೆಲಸ ನಮ್ಮ ಕಾಲದಲ್ಲಿ ಆಯಿತೆನ್ನುವ ಸಂತೃಪ್ತ ಭಾವ ನಮಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.

ಶಿವಮೊಗ್ಗ: ಶರಾವತಿ ಹಿನ್ನೀರು ಪ್ರದೇಶದ ದಶಕಗಳ ಸಂಕೋಲೆ ಬಿಡಿಸುವ ಭಾಗ್ಯದ ಕೆಲಸ ನಮ್ಮ ಕಾಲದಲ್ಲಿ ಆಯಿತೆನ್ನುವ ಸಂತೃಪ್ತ ಭಾವ ನಮಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.

ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸಿಗಂದೂರು ಸೇತುವೆಯ ಪೂರ್ಣ ಹಂತದ ಕಾಮಗಾರಿ ವೀಕ್ಷಿಸಿ ಹಾಗೂ ಉದ್ಘಾಟನೆಯ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಇದೊಂದು ಐತಿಹಾಸಿಕ ಸೇತುವೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಹಕಾರದಿಂದ ಈ ಸೇತುವೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ನಂತರ ಆರೋಗ್ಯ, ಶಿಕ್ಷಣ ಇನ್ನಿತರೆ ತುರ್ತು ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರಿಗೆ ನಗರವನ್ನು ಸಂಪರ್ಕಿಸಲು ಒಂದು ಲಾಂಚ್ ಇದ್ದರೂ ಸಂಜೆ ಆಗುತ್ತಿದ್ದಂತೆ ಕೊನೆಯಾಗುತ್ತಿದ ಪರಿಣಾಮ ಹಿನ್ನೀರಿನ ಜನರ ನರಕಯಾತೆಯನ್ನು ಬಿಡಿಸಲು ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ಬಿ.ಎಸ್.ಯಡಿಯೂರಪ್ಪನವರ ಇಚ್ಛಾಶಕ್ತಿಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವಿಕೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಸಮೀಪದ ಹಸಿರು ಮಕ್ಕಿ ಸೇತುವೆ ಕಾಮಗಾರಿಯೂ ಶೀಘ್ರವೇ ಆಗಬೇಕಿದೆ. ಅದು ರಾಜ್ಯ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಯಾಗಿದೆ. ಅದೂ ಆದಷ್ಟು ಬೇಗ ಪೂರ್ಣಗೊಳ್ಳಬೇಕಿದೆ. ಬೆಕ್ಕೋಡು, ಸುತ್ತಾ, ಸೇತುವೆ ಕಾಮಗಾರಿಗಳೂ ಸಾಗುತ್ತಿವೆ. ಸಿಗಂದೂರು ಸೇರಿದಂತೆ ಈ ಭಾಗದ ಎಲ್ಲ ಸೇತುವೆಗಳು ಪೂರ್ಣಗೊಂಡರೆ ಶರಾವತಿ ಹಿನ್ನೀರು ಪ್ರದೇಶದ ಅಭಿವೃದ್ಧಿ ವೇಗ ಪಡೆಯಲಿದೆ ಎಂದರು.

ಈ ಸೇತುವೆಯು ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಬಹುಮುಖ್ಯ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹೀಸುವುದಲ್ಲದೆ ಪ್ರಮುಖ ದೇವಸ್ಥಾಗಳಾದ ಕೊಲ್ಲೂರು, ಮುರುಡೇಶ್ವರ, ಹೊರನಾಡು ಸೇರಿದಂತೆ ಇನ್ನಿತರ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಹಲವು ರೀತಿಯಲ್ಲಿ ಅನುಕೂಲವಾಗಿದ್ದು, ಮಲೆನಾಡಿನ ಪ್ರವಾಸೋದ್ಯಮಕ್ಕೆ ಆರ್ಥಿಕವಾಗಿ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಪ್ರಧಾನ ಮಂತ್ರಿಗಳೇ ಈ ಸೇತುವೆಯ ಉದ್ಘಾಟನೆ ಮಾಡಬೇಕು ಎನ್ನುವ ಮಾತುಗಳು ತುಮರಿ ಭಾಗದಲ್ಲಿ ಜೋರಾಗಿ ಕೇಳಿ ಬಂದಿದ್ದು ಆದರಿಂದ ಅವರೇ ಉದ್ಘಾಟನೆ ಮಡುವ ವಿಶ್ವಾಸ ಇದೆ. ಹಾಲಪ್ಪ ಸೇರಿದಂತೆ ಈ ಭಾಗದ ಮುಖಂಡರೊಂದಿಗೆ ಪೂರ್ವ ಭಾವಿ ಸಭೆ ನಡೆಸಲಾಗಿದೆ. ದೇಶದ ಅಗ್ರಗಣ್ಯರು ಬರುವ ಕಾರಣ ಹೆಲಿಕಾಪ್ಟರ್‌ಗಳು ಬರಲು ಪೂರಕ ಅಗತ್ಯವಿದೆ. ಮಳೆಗಾಲವಾಗಿರುವ ಕಾರಣ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಒಂದು ದಿನ ನಿಗದಿ ಮಾಡಲಾಗುವುದು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ದಿನಾಂಕ ಹಾಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ಎಸ್‌.ಗುರುಮೂರ್ತಿ, ಟಿ.ಡಿ.ಮೇಘರಾಜ್, ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಪ್ರಸನ್ನ ಕೆರೆಕೈ, ಮಲ್ಲಿಕಾರ್ಜುನ ಹಕ್ರೆ, ನಾಗರಾಜ್ ಬೊಬ್ಬಿಗೆ, ಸುಧೀಂದ್ರ ಹೊಸಕೊಪ್ಪ ಮತ್ತಿತರರಿದ್ದರು.