ಸತೀಶ ಜಾರಕಿಹೊಳಿ ಹೈಕಮಾಂಡ್ ಭೇಟಿಯಲ್ಲಿ ವಿಶೇಷವಿಲ್ಲ

KannadaprabhaNewsNetwork |  
Published : Sep 05, 2024, 12:35 AM IST
5456 | Kannada Prabha

ಸಾರಾಂಶ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದೆ. ೫ ವರ್ಷ ಕಾಯಂ ಆಗಿ ಅವರೇ ಮುಂದುವರಿಯುತ್ತಾರೆ.

ಹಾವೇರಿ:

ನಾವೆಲ್ಲ ಇಲಾಖೆ ಕೆಲಸಗಳಿಗೆ ದೆಹಲಿಗೆ ಹೋದಾಗ ಕೇಂದ್ರದ ಸಚಿವರು, ಅಧಿಕಾರಿಗಳನ್ನು ಭೇಟಿ ಆಗುವುದು, ಹಾಗೆ ಪಕ್ಷದ ಹೈಕಮಾಂಡ್ ಭೇಟಿ ಮಾಡುವುದು ಸಹಜ. ಅದರಂತೆ ಸಚಿವ ಸತೀಶ ಜಾರಕಿಹೊಳಿ ತಮ್ಮ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ ಅಷ್ಟೇ. ಭೇಟಿಯಲ್ಲಿ ವಿಶೇಷ ಏನಿಲ್ಲ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರು ಒಪ್ಪಿದರೆ ನಾನು ಸಿಎಂ ಆಗುತ್ತೇನೆ ಎಂಬ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ದೇಶಪಾಂಡೆ ಅವರು ೯ ಬಾರಿ ಶಾಸಕ, ಸಚಿವರಾದವರು. ಮೈಸೂರಿಗೆ ಕೆಲಸಕ್ಕೆ ಹೋದಾಗ ಮಾಧ್ಯಮದವರು ಕೇಳಿದ್ದಕ್ಕೆ ಈಗಾಗಲೇ ಸಚಿವನಾಗಿದೀನಿ. ಮುಂದೆ ಸಿದ್ದರಾಮಯ್ಯ ಒಪ್ಪಿದರೆ ಸಿಎಂ ಆಗಬಹುದು ಎಂದು ಜನರಲ್ ಆಗಿ ಹೇಳಿದ್ದಾರೆ ಅಷ್ಟೆ ಎಂದರು.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಪರ ನಿಂತಿದೆ. ೫ ವರ್ಷ ಕಾಯಂ ಆಗಿ ಅವರೇ ಮುಂದುವರಿಯುತ್ತಾರೆ. ಕಾಂಗ್ರೆಸ್ ಪಕ್ಷದವರಿಂದಲೇ ಸಿದ್ದರಾಮಯ್ಯ ಕೆಳಗಿಳಿಸೋ ವಿಚಾರ ನಮ್ಮವರಲ್ಲಿ ಇಲ್ಲ. ನೂರು ಸುಳ್ಳು ಹೇಳಿ ಬಿಜೆಪಿಯವರು ನಿಜ ಮಾಡೋಕೆ ಹೋಗುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ೧ ಸ್ಥಾನದಿಂದ ೯ಕ್ಕೆ ಏರಿದ್ದೇವೆ. ಹೀಗಾಗಿ ನರೇಂದ್ರ ಮೋದಿ-ಅಮಿತ್ ಶಾಗೆ ಆತಂಕ ಶುರುವಾಗಿದೆ. ೪೦೦ಸೀಟು ಗೆಲ್ತೀವಿ ಅಂತಿದ್ರು. ಆದರೆ ಬಿಜೆಪಿಯವರಿಗೆ ೨40 ಸೀಟು ಬಂದವು. ಮೋದಿಯವರ ಪ್ರಭಾವ ಶೇ. ೮ರಷ್ಟು ಇಳಿದಿದೆ. ರಾಹುಲ್ ಪ್ರಭಾವ ಶೇ.೨೨ರಷ್ಟು ಹೆಚ್ಚಿದೆ ಎಂದರು.

ನಮ್ಮ ಸರ್ಕಾರ ಆಡಳಿತ ಮಾಡಬಾರದು ಎಂದು ಬಿಜೆಪಿಯವರು ಅಲ್ಲಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸಾಧ್ಯವೇ ಇಲ್ಲ, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಆಮೇಲೆ ೬ ತಿಂಗಳೊಳಗೆ ಸಿದ್ದರಾಮಯ್ಯ ಸರ್ಕಾರ ತೆಗೆದುಹಾಕುತ್ತೇವೆ. ಅದು ನಮ್ ಜವಾಬ್ದಾರಿ. ನಮಗೆಲ್ಲ ರಾಜಕಾರಣ ಗೊತ್ತಿದೆ ಎಂದು ಎಚ್‌.ಡಿ. ದೇವೆಗೌಡರು, ಕುಮಾರಸ್ವಾಮಿ ಅವರು ಅಮಿತ್ ಶಾ ಜತೆ ಮೊದಲೇ ಮಾತಾಡಿಕೊಂಡು ಬಂದಿದ್ದರು. ಈಗ ಬಿಜೆಪಿಯವರು ಆಪರೇಶನ್ ಶುರು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಮ್ಮದೇ ೯ ಶಾಸಕರು ಸಿಎಂ, ಡಿಸಿಎಂ ಬಳಿ ಬಂದು ಬಿಜೆಪಿಯವರು ನಮ್ಮನ್ನು ಟಚ್ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಆದರೆ ಅದು ಆಗಲಿಲ್ಲ, ಹೀಗಾಗಿ ಸಿಬಿಐ ಪ್ರಯೋಗ ಮಾಡಿದರು. ಇಡಿ ಪ್ರಯೋಗ ಮಾಡಿ ಸಿಎಂ ಹಾಗೂ ಡಿ.ಕೆ. ಶಿವಕುಮಾರ ಹೆಸರು ಸೇರಿಸುವುದಕ್ಕೆ ಪ್ರಯತ್ನ ಮಾಡಿದರು. ಅದೂ ಆಗದೇ ಇದ್ದಾಗ ರಾಜಭವನ ದುರುಪಯೋಗ ಮಾಡಿಕೊಂಡು ಸರ್ಕಾರಕ್ಕೆ ಮಸಿ ಬಳಿಯೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ
ಅವಕಾಶ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ