ಮಕ್ಕಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಕನ್ನಡಪ್ರಭವು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ಅದನ್ನು ಬಳಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮಹಿಳಾ ಉದ್ಯಮಿ ಕವಿತಾ ಆನಂದ ಮಜಲೀಕರ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಕ್ಕಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಕನ್ನಡಪ್ರಭವು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಎಲ್ಲ ಮಕ್ಕಳು ಅದನ್ನು ಬಳಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮಹಿಳಾ ಉದ್ಯಮಿ ಕವಿತಾ ಆನಂದ ಮಜಲೀಕರ ಸಲಹೆ ನೀಡಿದರು.ವಿಟಿಯುನಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ತಮ್ಮ ಪ್ರತಿಭೆಯನ್ನು ತೋರಿಸಲು ಮಕ್ಕಳಿಗೆ ಇಂದು ಸಾಕಷ್ಟು ರೀತಿಯ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಚಿತ್ರಕಲೆಯೂ ಒಂದು. ಅದನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ಹೇಗೆ ತಾವು ಬದುಕು ರೂಪಿಸಿಕೊಳ್ಳಬೇಕು ಎಂಬುವುದು ಸಂಸ್ಕೃತ ಶ್ಲೋಕದ ವಿವರಣೆ ನೀಡಿದ ಅವರು, ಜ್ಞಾನ, ದುಡಿಮೆ, ದಾನ ಮತ್ತು ಆರಾಧನೆ ಕುರಿತಾದ ಮಹತ್ವವನ್ನು ಮಕ್ಕಳಿಗೆ ತಿಳಿಹೇಳಿದರು. ಇಂದಿನ ದಿನಮಾನಗಳಲ್ಲಿ ಪೋಷಕರು ಮಕ್ಕಳಿಗೆ ಆರಂಭದಲ್ಲಿಯೇ ಮೊಬೈಲ್‌ಗಳನ್ನು ನೀಡಿ ಗೀಳು ಹಚ್ಚಿಸುತ್ತಿದ್ದಾರೆ. ಆದರೆ, ಅದರ ಮಕ್ಕಳಿಗೆ ಕಲೆ, ಕ್ರೀಡೆಯಂತಹ ಆಸಕ್ತಿಕರ ವಿಷಯಗಳ ಕುರಿತಾಗಿ ಅವರಲ್ಲಿ ಅಭಿರುಚಿಗಳನ್ನು ಬೆಳೆಸಬೇಕು. ಮೊಬೈಲ್‌ಗಳನ್ನು ದುರ್ಬಳಕೆ ಮಾಡಿಕೊಂಡು ಸಾಕಷ್ಟು ಮಕ್ಕಳು ಇಂದು ದಾರಿ ತಪ್ಪುತ್ತಿದ್ದಾರೆ. ಆ ರೀತಿಯಾಗದಂತೆ ಪೋಷಕರು ಆರಂಭದಲ್ಲಿಯೇ ಮಕ್ಕಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ ಅವರನ್ನು ಸರಿದಾರಿಗೆ ಕೊಂಡೊಯ್ಯಬೇಕು. ಅವರಲ್ಲಿ ಮೊಬೈಲ್ ಗೀಳನ್ನು ತಪ್ಪಿಸಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾಜದಲ್ಲಿ ಮಹಿಳೆಯರಿಗೂ ಇಂದು ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೇವಲ ತಾಯಿ, ಸಹೋದರಿಯಾಗಿ ಮನೆಯಲ್ಲಿ ಕೂರದೇ ಉದ್ಯಮಿ, ಶಿಕ್ಷಕಿ, ಸಂಸ್ಥೆಗಳನ್ನು ಕಟ್ಟುವ ಮೂಲಕ ಹಲವರಿಗೆ ದಾರಿದೀಪವಾಗುವ ಮೂಲಕ ಸಮಾಜ ಮತ್ತು ದೇಶದ ಕೊಡುಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಪ್ರತಿಯೊಬ್ಬ ಪುರುಷನ ಹಿಂದೆ ಮಹಿಳೆ ಇದ್ದಾಳೆ ಎಂಬಂತೆ ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಪುರುಷ ಇರಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿ, ಪುರುಷರು ಕೂಡ ಅವರ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.ನನ್ನಿಂದ ಯಾವುದೇ ಸಾಧ್ಯವಿಲ್ಲ ಎಂದು ಕೈಕಟ್ಟಿ ಕೂರಬಾರದು ಎಂದು ತಮ್ಮ ಬದುಕಿನ ಘಟನೆಗಳನ್ನೇ ಹೇಳಿದ ಅವರು, ಇಂದು ನಾನು ಮಹಿಳಾ ಉದ್ಯಮಿಯಾಗಿದ್ದೇನೆ ಎಂದರೆ ದಿಢೀರನೆ ಆಗಿಲ್ಲ. ಆರಂಭದಲ್ಲಿ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನೂ ಮಾಡಿದ್ದೇನೆ. ನಂತರ ಒಂದೊಂದೆ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುವ ಮೂಲಕ, ಇಂದು ಹಲವಾರು ಜನರ ಕುಟುಂಬಗಳಿಗೆ ಹೆಗಲಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜತೆಗೆ ಒಂದು ಸಂಸ್ಥೆಯನ್ನು ಕೂಡ ನಡೆಸುವಷ್ಟು ಬೆಳೆದಿರುವೆ ಎಂದು ತಮ್ಮ ಬದುಕಿನ ಸ್ಫೂರ್ತಿ ಕಥೆಯನ್ನೇ ಮಕ್ಕಳಿಗೆ ಪ್ರೇರಣಾದಾಯಕವಾಗಿ ಹೇಳಿದರು.ಇಂದು ನಾನು ಮಹಿಳಾ ಉದ್ಯಮಿಯಾಗಿದ್ದೇನೆ ಎಂದರೆ ದಿಢೀರನೆ ಆಗಿಲ್ಲ. ಆರಂಭದಲ್ಲಿ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನೂ ಮಾಡಿದ್ದೇನೆ. ನಂತರ ಒಂದೊಂದೆ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುವ ಮೂಲಕ, ಇಂದು ಹಲವಾರು ಜನರ ಕುಟುಂಬಗಳಿಗೆ ಹೆಗಲಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜತೆಗೆ ಒಂದು ಸಂಸ್ಥೆಯನ್ನು ಕೂಡ ನಡೆಸುವಷ್ಟು ಬೆಳೆದಿರುವೆ.
- ಕವಿತಾ ಆನಂದ ಮಜಲೀಕರ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತೆ.