ಈ ಯೋಜನೆಗೆ ಕಾವೇರಿ ನದಿಯಿಂದ 3.30 ಟಿಎಂಸಿ ನೀರು ಬಳಕೆ । ಹಳ್ಳಿಗಳು ಮಾತ್ರವಲ್ಲ ಬಿಡದಿ, ಕುಂಬಳಗೂಡಿಗೆ ಶುದ್ಧೀಕರಿಸಿದ ನೀರು
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಬಯಲು ಸೀಮೆ ಜಿಲ್ಲೆ ರಾಮನಗರಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಸತ್ತೇಗಾಲ ನೀರಾವರಿ ಯೋಜನೆಯಲ್ಲಿ ಜಲಾಶಯಗಳನ್ನು ತುಂಬಿಸುವುದು ಮಾತ್ರವಲ್ಲದೆ ಕೆರೆಗಳನ್ನೂ ಭರ್ತಿ ಮಾಡಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನರ ನೀರಿನ ದಾಹ ನೀಗಿಸುವ ಉದ್ದೇಶ ಹೊಂದಲಾಗಿದೆ.
ರಾಮನಗರ ಜಿಲ್ಲೆಯ 5 ತಾಲೂಕುಗಳಲ್ಲಿ 10.82 ಲಕ್ಷ ಜನಸಂಖ್ಯೆ ಹಾಗೂ 9.03 ಲಕ್ಷ ಜಾನವಾರುಗಳಿವೆ. ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಬ್ಬರಿಗೆ 85 ಲೀಟರ್ ದಿನಕ್ಕೆ ಲೆಕ್ಕ ಮಾಡಿದಾಗ ಒಟ್ಟು 2.2 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ, ಮಳೆಯ ಅಭಾವದ ಕಾರಣ ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿಗಳಲ್ಲಿ ದೊರೆಯುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಸತ್ತೇಗಾಲ ನೀರಾವರಿ ಯೋಜನೆ ರೂಪುಗೊಂಡಿತು.
ಯಾವ್ಯಾವ ಜಲಾಶಯಕ್ಕೆ ಎಷ್ಟು ನೀರು?
ಎಚ್ .ಡಿ.ದೇವೇಗೌಡ ಬ್ಯಾರೇಜಿನ ಹಿನ್ನೀರಿನಿಂದ ಹಾಲಿ ಇರುವ ಕಣ್ವ ಕುಡಿಯುವ ನೀರಿನ ಯೋಜನೆ ಮೂಲಕ 2.2 ಟಿಎಂಸಿ ನೀರನ್ನು ಎತ್ತಿ ಚನ್ನಪಟ್ಟಣ ತಾಲೂಕಿಗೆ ಕುಡಿಯುವ ನೀರನ್ನು ಒದಗಿಸುವ ಜೊತೆಗೆ ಕಣ್ವ ಜಲಾಶಯ ತುಂಬಿಸಲಾಗುವುದು.
ಈ ರೀತಿ ಸಂಗ್ರಹಿಸಿದ ನೀರನ್ನು ಜಲಧಾರೆ ಯೋಜನೆ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಶುದ್ಧೀಕರಿಸಿ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.
ಬಾಕ್ಸ್ ...
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸತ್ತೇಗಾಲ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದರೆ, ಬಿಜೆಪಿ ಸರ್ಕಾರ ಅಗತ್ಯ ಆರ್ಥಿಕ ನೆರವು ಕಲ್ಪಿಸಿ ಕಾಮಗಾರಿಗೆ ವೇಗ ನೀಡಿತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕಾಮಗಾರಿಗಿದ್ದ ಅಡ್ಡಿಯನ್ನು ಬಗೆಹರಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಿತು.
ಜೆಡಿಎಸ್ ವರಿಷ್ಠ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ , ಡಿ.ಕೆ.ಸುರೇಶ್ ಹಾಗೂ ಬಿಜೆಪಿ ನಾಯಕರಾದ ಅಶ್ವತ್ಥ ನಾರಾಯಣ, ಸಿ.ಪಿ.ಯೋಗೇಶ್ವರ್ ರವರು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಸತ್ತೇಗಾಲ ಯೋಜನೆ ಪರಿಪೂರ್ಣಗೊಳ್ಳಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಮೂರು ಪಕ್ಷಗಳ ನಾಯಕರಿಗೂ ಯೋಜನೆಯ ಕ್ರೆಡಿಟ್ ಸಲ್ಲುತ್ತದೆ.-----
ಬಾಕ್ಸ್ ...ಸತ್ತೇಗಾಲ ನೀರಾವರಿ ಯೋಜನೆಗೆ 3.30 ಟಿಎಂಸಿ ನೀರು ಬಳಕೆ
ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸತ್ತೇಗಾಲ ನೀರಾವರಿ ಯೋಜನೆಗಾಗಿ ಕಾವೇರಿ ನದಿಯಿಂದ 3.30 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಜಲ ನೀತಿಯ ಅನ್ವಯ ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾವೇರಿ ಜಲ ವಿವಾದ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಹಂಚಿಕೆಯಾಗಿರುವ ನೀರಿನಲ್ಲಿ 3.30 ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.-----