20+ ದೇಶದಲ್ಲಿ ಕನ್ನಡದ ಕೀರ್ತಿ ಬೆಳಗಿದ ಸತ್ತಿಗೇರಿ

KannadaprabhaNewsNetwork |  
Published : Nov 22, 2025, 02:15 AM IST

ಸಾರಾಂಶ

ಸರ್ಕಾರಿ ಉರ್ದು ಶಾಲೆಯಲ್ಲಿ ಕನ್ನಡದ ಮಾಸ್ತರ್‌ ಆಗಿರುವ ಮಹಾದೇವ ಸತ್ತಿಗೇರಿ, ತನ್ನಷ್ಟಕ್ಕೆ ತಾನು ಉರ್ದು ಮಕ್ಕಳಿಗೆ ಕನ್ನಡ ಕಲಿಸಿ ಕರ್ತವ್ಯ ಮೆರೆಯಬಹುದಿತ್ತು. ಆದರೆ, ತನ್ನಲ್ಲಿರುವ ಮಾತೃ ಭಾಷಾ ಪ್ರೇಮವನ್ನು ಹಾಸ್ಯದ ಮೂಲಕ ಜಗತ್ತಿನಾದ್ಯಂತ ವಿಸ್ತರಿಸಿ ವಿದೇಶಗಳಲ್ಲಿ ಕನ್ನಡದ ಕೀರ್ತಿ ಬೆಳೆಗುತ್ತಿದ್ದಾರೆ.

ಬಸವರಾಜ ಹಿರೇಮಠ ಕನ್ನಡಪ್ರಭ ವಾರ್ತೆ ಧಾರವಾಡಸರ್ಕಾರಿ ಉರ್ದು ಶಾಲೆಯಲ್ಲಿ ಕನ್ನಡದ ಮಾಸ್ತರ್‌ ಆಗಿರುವ ಮಹಾದೇವ ಸತ್ತಿಗೇರಿ, ತನ್ನಷ್ಟಕ್ಕೆ ತಾನು ಉರ್ದು ಮಕ್ಕಳಿಗೆ ಕನ್ನಡ ಕಲಿಸಿ ಕರ್ತವ್ಯ ಮೆರೆಯಬಹುದಿತ್ತು. ಆದರೆ, ತನ್ನಲ್ಲಿರುವ ಮಾತೃ ಭಾಷಾ ಪ್ರೇಮವನ್ನು ಹಾಸ್ಯದ ಮೂಲಕ ಜಗತ್ತಿನಾದ್ಯಂತ ವಿಸ್ತರಿಸಿ ವಿದೇಶಗಳಲ್ಲಿ ಕನ್ನಡದ ಕೀರ್ತಿ ಬೆಳೆಗುತ್ತಿದ್ದಾರೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಕನ್ನಡದ ಶಿಕ್ಷಕರಾಗಿರುವ ಮಹಾವೇವ ಸತ್ತಿಗೇರಿ, ಯುಎಇ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ, ಭೂತಾನ್‌, ಇಂಡೋನೇಷಿಯಾ, ಮಾಲ್ಡೀವ್ಸ್‌, ಶ್ರೀಲಂಕಾ ಸೇರಿದಂತೆ 20 ದೇಶಗಳಲ್ಲಿ ಹಾಸ್ಯದ ಹೊನಲು ಹರಿಸುವ ಮೂಲಕ ಅಲ್ಲಿರುವ ಕನ್ನಡಿಗರ ಮನ ಗೆದ್ದಿದ್ದಾರೆ. ಮಹಾದೇವ ಸತ್ತಿಗೇರಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳುವ ಜೋಕು, ಕನ್ನಡದ ಹಾಡು, ಒಗಟು, ಕನ್ನಡ ವಿಷಯ ಕುರಿತ ಭಾಷಣ, ಕನ್ನಡದ ಚಿತ್ರನಟರ ಅನುಕರಣೆಯು ಉದ್ಯೋಗ, ಶಿಕ್ಷಣ ಸೇರಿದಂತೆ ನಾನಾ ಕಾರಣಗಳಿಂದ ಹೊರ ದೇಶಗಳಲ್ಲಿರುವ ಕನ್ನಡಿಗರಲ್ಲಿ ಮತ್ತಷ್ಟು ಭಾಷಾ ಪ್ರೇಮ ಹೆಚ್ಚಿಸುತ್ತಿದ್ದಾರೆ. ಕರ್ನಾಟಕದ ಕಲೆ, ಸಾಹಿತ್ಯ, ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಸಹ ಸತ್ತಿಗೇರಿ ಹಾಸ್ಯದ ಮೂಲಕ ಪ್ರಸ್ತುತ ಪಡಿಸುತ್ತಿದ್ದು, ಕನ್ನಡದ ಕೀರ್ತಿಯನ್ನು ವಿದೇಶಗಳಲ್ಲಿ ಬೆಳಗಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇತ್ತೀಚಗಷ್ಟೇ ಅಮೆರಿಕದ ಫ್ಲೋರಿಡಾದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಸತ್ತಿಗೇರಿ ಅವರಿಗೆ ನಾವಿಕ ಕನ್ನಡ ರತ್ನ ಪ್ರಶಸ್ತಿ ಸಹ ಲಭಿಸಿದೆ. ಇಂಗ್ಲಿಷ್‌ ಮಾಧ್ಯಮದ ಪ್ರಭಾವದಿಂದಾಗಿ ಈಗಿನ ಪೀಳಿಗೆಗೆ ಕನ್ನಡದ ಮೇಲಿನ ಪ್ರೇಮವೇ ಅಡಗಿ ಹೋಗಿದೆ. ಯುವ ಪೀಳಿಗೆಗೆ ಮಾತೃ ಭಾಷೆಯ ಮೇಲೆ ಪ್ರೀತಿ, ಗೌರವ ಹೆಚ್ಚಿಸಲು ಹಾಸ್ಯದ ಜತೆಗೆ ಕನ್ನಡದ ಗೀತೆಗಳನ್ನು ಹಾಡುವುದು, ಕಿರು ನಾಟಕಗಳ ಪ್ರದರ್ಶನ, ಭಾಷಣದ ಮೂಲಕವೂ ಭಾಷಾ ಪ್ರೇಮ ತೋರುತ್ತಿದ್ದಾರೆ. ನಾಡಿನ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್‌, ಮಂಡ್ಯ ರಮೇಶ್‌, ರಿಚರ್ಡ್‌ ಲೂಯಿಸ್‌, ಇಂದುಮತಿ ಸಾಲಿಮಠ, ಮಿಮಿಕ್ರಿ ದಯಾನಂದ್‌ ಅವರೊಂದಿಗೂ ದೇಶ-ವಿದೇಶಗಳಲ್ಲಿ ವೇದಿಕೆ ಹಂಚಿಕೊಂಡಿರುವ ಸತ್ತಿಗೇರಿ ಅವರ ಕನ್ನಡದ ಕಾರ್ಯಕ್ಕೆ ನ.1ರಂದು ರಾಜ್ಯೋತ್ಸವ ನಿಮಿತ್ತ 138 ವರ್ಷಗಳ ಇತಿಹಾಸದ ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಗೌರವ ಸನ್ಮಾನ ಸಹ ನಡೆಯಿತು. ಕರ್ನಾಟಕದ ಕನ್ನಡಿಗರಿಗಿಂತ ಹೆಚ್ಚು ದೇಶ ಹಾಗೂ ಹೊರ ದೇಶಗಳಲ್ಲಿರುವ ಕನ್ನಡಿಗರಿಗೆ ಕನ್ನಡದ ಮೇಲಿನ ಪ್ರೀತಿ, ಗೌರವ ಜಾಸ್ತಿ. ಕನ್ನಡದ ಜೋಕು, ಹಾಡು, ಮಿಮಿಕ್ರಿಗಾಗಿ, ಭಾಷೆಯ ಮೇಲಿನ ಪ್ರೀತಿಯಾಗಿ ಸಣ್ಣ ಹಳ್ಳಿಯಲ್ಲಿ ಶಿಕ್ಷಕನಾಗಿರುವ ನನನ್ನು ಬರೋಬ್ಬರಿ 21 ದೇಶಗಳ ಕನ್ನಡಿಗರು ಕರೆಯಿಸಿಕೊಳ್ಳುತ್ತಾರೆ ಎಂದರೆ ಸಾಮಾನ್ಯವೇನಲ್ಲ. ಬರೀ ದೇಶ ಸುತ್ತುವುದು ಮಾತ್ರವಲ್ಲದೇ ಅಲ್ಲಿನ ಕನ್ನಡಿಗರಲ್ಲಿ ಮತ್ತಷ್ಟು ಭಾಷಾ ಪ್ರೀತಿ ಹೆಚ್ಚಿಸುವುದು ನನ್ನ ಗುರಿ.-ಮಹಾದೇವ ಸತ್ತಿಗೇರಿ, ಕನ್ನಡ ಶಿಕ್ಷಕ, ಹಾಸ್ಯ ಕಲಾವಿದ

PREV

Recommended Stories

ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ಶಾಸಕ ಸುಬ್ಬಾರೆಡ್ಡಿ
ಸೈಬರ್ ವಂಚನೆಗಳ ತಡೆಯಲು ಕೆನರಾ ಬ್ಯಾಂಕ್‌ ಆದ್ಯತೆ