ಗದಗ: ಸಾತ್ವಿಕ ಶಕ್ತಿಗಳು ಮರೆಯಾಗಿ, ತಾಮಸ ಶಕ್ತಿ ಬೆಳೆದು, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬರುತ್ತಿದೆ. ಇದು ಆತಂಕದ ಬೆಳವಣಿಗೆಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ಭಾನುವಾರ ಹುಲಕೋಟಿಯಲ್ಲಿ ಕೈಲಾಸ ಆಶ್ರಮದ 32ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಾಜದಲ್ಲಿ ಒಡೆದು ಆಳುವ ನೀತಿ ಹೆಚ್ಚಾಗುತ್ತಿದೆ. ಇದು ನೆಮ್ಮದಿಯ ದೇಶ ಕಟ್ಟುವಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ತಾರತಮ್ಯ ಮುಕ್ತವಾದ ಸಮಾಜ ನಿರ್ಮಾಣಕ್ಕೆ ಇದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ನಾವೆಲ್ಲಾ ಒಂದೇ ಎಂದು ಅರಿತು ಆಚರಿಸುವಂತಹ ಮನಸ್ಥಿತಿ ಕಡಿಮೆಯಾಗುತ್ತಿದೆ. ಹೀಗಾದರೆ ನೆಮ್ಮದಿ ಸಮಾಜ ಕಟ್ಟಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಉತ್ತಮ ಮತ್ತು ಸಮ ಸಮಾಜ ಕಟ್ಟಲು ಈಗ ಧರ್ಮದ ಮಾರ್ಗದರ್ಶನ ಪ್ರಸ್ತುತ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾಗುತ್ತದೆ. ಸಮಾಜದಲ್ಲಿ ಸದ್ಭಾವನೆ ಗಟ್ಟಿಗೊಳಿಸಬೇಕಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರನ್ನು ದ್ವೇಷ, ಮತ್ಸರ, ಅಸೂಯೆಯಿಂದ ಮುಕ್ತವಾಗಿಸಬೇಕಿದೆ ಎನ್ನುವುದು ನನ್ನ ಅಭಿಪ್ರಾಯ. ಈ ಧರ್ಮಸಭೆ ಅದಕ್ಕೆ ವೇದಿಕೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದ ಅವರು, ಹುಲಕೋಟಿ ಗ್ರಾಮ ಸಮಾಜಕ್ಕೆ ಕೊಟ್ಟ ಕೊಡುಗೆ, ಅದಕ್ಕಾಗಿ ಹಿರಿಯರ ಶ್ರಮ ಅವರು ನಡೆದು ಬಂದ ಹಾದಿ ಕುರಿತು ಮೆಲುಕು ಹಾಕಿದರು. ಹುಲಕೋಟಿ ಗ್ರಾಮದಲ್ಲಿ ನೂತನವಾಗಿ ಮಣ್ಣು, ಕಲ್ಲು, ಇಟ್ಟಿಗೆ, ಕಬ್ಬಿಣ, ಸಿಮೆಂಟ್ ಇಲ್ಲದೇ ನಿರ್ಮಾಣವಾಗಿರುವ ತಿರುಚ್ಚಿ ಶ್ರೀಗಳ ಕಲ್ಯಾಣ ಮಂಟಪದ ಕುರಿತು ಮಾತನಾಡಿದರು.ಬೆಂಗಳೂರು ರಾಮಕೃಷ್ಣ ಯೋಗಾಶ್ರಮ ರಾಮೋಹಳ್ಳಿಯ ಸ್ವಾಮಿ ಯೋಗೇಶ್ವರಾನಂದಜಿ ಮಹಾರಾಜ್ ಆಶೀರ್ವನ ನೀಡಿ, ಸದ್ಭಾವನೆ ಕುರಿತು ಸುದೀರ್ಘವಾಗಿ ಮಾತನಾಡಿದರು. ನಿಡಸೋಸಿ ದುರುದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿಗಳು ಮಾತನಾಡಿ, ಪರಸ್ಪರ ಎಲ್ಲರೂ ಗೌರವ ಕೊಡುವುದನ್ನು ಕಲಿಯಬೇಕು, ಇದರಿಂದ ಸಹಜವಾಗಿ ನಾವೆಲ್ಲರೂ ಬೆಳೆಯುತ್ತೇವೆ. ನಮ್ಮ ನಮ್ಮ ಮನೋಭಾವನೆಯಂತೆ ನಮ್ಮ ದೇವರು ಇದ್ದಾರೆ. ನಾವೆಲ್ಲರೂ ಒಂದೇ ಎಂದರು.
ಸಾನ್ನಿಧ್ಯ ವಹಿಸಿದ್ದ ಗದಗ ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಮಾತನಾಡಿ, ಮಹಾತ್ಮರ ಮಾತು ಕೇಳುತ್ತಾರೆ, ಆದರೆ ಅದನ್ನು ಯಾರೂ ಪಾಲಿಸುವುದಿಲ್ಲ, ಒಂದು ಇದ್ದಂತೆ ಇನ್ನೊಂದಿಲ್ಲ, ಮನುಷ್ಯ ಶರೀರವೇ ಸಮಾಜವಿದ್ದಂತೆ ವೈವಿಧ್ಯತೆ ಇಲ್ಲ ಅಂದರೆ ಜೀವನ ಇಲ್ಲ. ಸದ್ಭಾವನೆ ಬರಬೇಕು ಅಂದರೆ, ವೈವಿಧ್ಯತೆ ಬೇಕು. ಭಾವನೆಗಳಿಗೆ ಧಕ್ಕೆ ಬರಬದಂತೆ ಬದುಕಬೇಕು, ಸತ್ಯವನ್ನು ಜೀರ್ಣಿಸಿಕೊಳ್ಳುವ ಗುಂಡಿಗೆ ಬೆಳೆಸಿಕೊಳ್ಳಿ, ಸಣ್ಣವರು ದೊಡ್ಡವರ ಬಗ್ಗೆ ಗೌರವ, ದೊಡ್ಡವರ ಸಣ್ಣವರ ಬಗ್ಗೆ ಪ್ರೀತಿ ಹೊಂದಿರಬೇಕು.3ರಿಂದ 8ನೇ ವಯಸ್ಸಿನವರೆಗೆ ಕಥೆಗಳ ಮೂಲಕ ಶಿಕ್ಷಣ ನೀಡಬೇಕು. ಮನುಷ್ಯರು ಇಂದು ಮಾಡುವ ಕೆಲಸಗಳಲ್ಲಿಯೂ ಶುದ್ಧಿ ಇಲ್ಲ, ಹಾಗಾಗಿ ಸಮಾಜದಲ್ಲಿ ನೆಮ್ಮದಿ ಇಲ್ಲ, ಭಾವ ಶುದ್ಧಿಗಳಿಗೆ ಒಳಗಾಗದ ಜನರಿಂದ ಮಾತ್ರ ಸಮಾಜಕ್ಕೆ ತೊಂದರೆಯಾಗುತ್ತಿದೆ ಎಂದರು.
ಶಿರಹಟ್ಟಿ ಫಕ್ಕೀರೇಶ್ವ ಮಠದ ಫಕೀರ ಸಿದ್ದರಾಮ ಶ್ರೀಗಳು ಮಾತನಾಡಿ, ಭಾವನೆಗಳು ಮನಸ್ಸಿದ್ದಂತೆ, ಮನುಷ್ಯ, ಮನಸ್ಸು ಹೊಲಸು ಆದರೆ ಹೇಗೆ? ಎಂದು ಶ್ರೀಗಳು ನಿರ್ದೇಶನಗಳ ಮೂಲಕ ತಿಳಿಸಿದರು. ಅಭಿನವ ಶಿವಾನಂದ ಶ್ರೀಗಳು ಆಶೀರ್ವಚನ ನೀಡಿದರು.ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠ ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀಗಳು ಮಾತನಾಡಿ, ತನ್ನಂತೆಯೇ ಪರರು ಎಂದು ನಂಬುವುದೇ ಮಾನವತ್ವವಾಗಿದೆ. ಬೇರೆಯವರು ಸುಳ್ಳು ಹೇಳಿದರೆ ನಿಮಗೆ ಆಗುವುದಿಲ್ಲ ಎಂದಾದರೆ ನೀವು ಸುಳ್ಳು ಹೇಳಬೇಡಿ ಎಂದರು.ಸಾನ್ನಿಧ್ಯ ವಹಿಸಿದ್ದ ಹುಲಕೋಟಿ, ಬೆಂಗಳೂರು ಕೈಲಾಸ ಆಶ್ರಮದ ಜಯೇಂದ್ರಪುರಿ ಮಹಾಸ್ವಾಮಿಗಳು ಮಾತನಾಡಿ, ಒಬ್ಬೊಬ್ಬರ ದೃಷ್ಟಿಕೋನವೂ ಬೇರೆ ಬೇರೆಯಾಗಿವೆ. ಎಲ್ಲರಲ್ಲಿಯೂ ಐಕ್ಯತೆ ತರುವುದು ಹೇಗೆ ಎನ್ನುವುದು ಭಾವನೆ ಎಲ್ಲರಲ್ಲಿಯೂ ಇದೆ, ಆದರೆ ಅದು ಸದ್ಭಾವನೆಯಾಗಿ ಬದಲಾಗಬೇಕಿದೆ ಎಂದರು. ಡಿ.ಆರ್. ಪಾಟೀಲ, ಮಂಜುನಾಥ ಕುನ್ನೂರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರವಿ ಮೂಲಿಮನಿ, ಎ.ಎಂ. ಹಿಂಡಸಗೇರಿ, ಎಫ್.ಎನ್. ಜಕ್ಕಪ್ಪನವರ, ಐ.ಜಿ. ಸನದಿ, ಎಂ.ಡಿ. ದುರಗಣ್ಣವರ, ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ, ಬಸವರಾಜ ಕಡೇಮನಿ ಹಾಗೂ ಅನೇಕ ಮುಖಂಡರು ಸಾರ್ವಜನಿಕರು ಹಾಜರಿದ್ದರು. ಗೀತಾಂಜಲಿ ಮೆಣಸಿನಕಾಯಿ ಪ್ರಾರ್ಥಿಸಿದರು. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.