ಕೇಣಿ ಬಂದರು ಯೋಜನೆ ವಿರೋಧಿಸಿ ಸತ್ಯಾಗ್ರಹಕ್ಕೆ ಚಾಲನೆ

KannadaprabhaNewsNetwork |  
Published : Nov 13, 2025, 01:00 AM IST
ವಾಣಿಜ್ಯ ಬಂದರು ವಿರೋಧಿಸಿ ವಿವಿಧ ಸಂಘಟನೆಗಳು, ಮೀನುಗಾರರು, ರೈತರು ಮತ್ತು ಯೋಜನಾ ಪ್ರದೇಶ ಒಳಪಡುವ ಭಾಗಗಳ ಗ್ರಾಮಸ್ಥರು ವಾಣಿಜ್ಯ ಬಂದರು ಯೋಜನೆಯ ಅಣುಕು ಶವಯಾತ್ರೆ ನಡೆಸಿದರು.ತಹಸೀಲ್ದಾರರ ಕಾರ್ಯಾಲಯಕ್ಕೆ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಕೇಣಿಯಲ್ಲಿ ಖಾಸಗಿ ಸಹಭಾಗಿತ್ವದ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಸ್ಥಳೀಯರ ಹೋರಾಟ ಮುಂದುವರಿದಿದ್ದು, ಅದನ್ನು ತೀವ್ರಗೊಳಿಸುವ ಹಿನ್ನೆಲೆ ಬುಧವಾರ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಕೇಣಿಯಲ್ಲಿ ಖಾಸಗಿ ಸಹಭಾಗಿತ್ವದ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಸ್ಥಳೀಯರ ಹೋರಾಟ ಮುಂದುವರಿದಿದ್ದು, ಅದನ್ನು ತೀವ್ರಗೊಳಿಸುವ ಹಿನ್ನೆಲೆ ಬುಧವಾರ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

ವಾಣಿಜ್ಯ ಬಂದರು ವಿರೋಧಿಸಿ ವಿವಿಧ ಸಂಘಟನೆಗಳು, ಮೀನುಗಾರರು, ರೈತರು ಮತ್ತು ಯೋಜನಾ ಪ್ರದೇಶ ಒಳಪಡುವ ಭಾಗಗಳ ಗ್ರಾಮಸ್ಥರು ಮೆರವಣಿಗೆ ನಡೆಸಿ ವಾಣಿಜ್ಯ ಬಂದರು ಯೋಜನೆಯ ಅಣುಕು ಶವಯಾತ್ರೆ ನಡೆಸಿದರು.

ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಆವರಣದಲ್ಲಿ ಇರುವ ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಮಾಲಾರ್ಪಣೆ ಮಾಡಿ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ತಹಸೀಲ್ದಾರ ಕಾರ್ಯಾಲಯಕ್ಕೆ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿ ತಾಲೂಕಿನ ಜನರ ತೀವ್ರ ವಿರೋಧದ ನಡುವೆಯೂ

ಮಾರಕ ವಾಣಿಜ್ಯ ಬಂದರು ನಿರ್ಮಾಣ ಯೋಜನೆಗೆ ಒಪ್ಪಂದ ಮಾಡಿಕೊಂಡಿರುವುದು ಜನವಿರೋಧಿ ಮತ್ತು ಪರಿಸರವಿರೋಧಿ ಕ್ರಮವಾಗಿದ್ದು, ಸ್ಥಳೀಯ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುವ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಕೇಣಿ ವಾಣಿಜ್ಯ ಬಂದರು ಯೋಜನೆ ಅವೈಜ್ಞಾನಿಕ ಮತ್ತು ಅವಾಸ್ತವಿಕವಾಗಿದ್ದು ಅದನ್ನು ಕೈ ಬಿಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮನವಿ ಮೂಲಕ ತಿಳಿಸಲಾಗಿದೆ.

ಹೋರಾಟ ಸಮಿತಿಯ ಪ್ರಮುಖ ಸಂಜೀವ ಬಲೆಗಾರ ಮನವಿ ಓದಿದರು, ತಹಸೀಲ್ದಾರ ಡಾ. ಚಿಕ್ಕಪ್ನ ನಾಯಕ ಮನವಿ ಸ್ವೀಕರಿಸಿದರು.

ಮೀನುಗಾರ ಮಹಿಳೆಯರು ಪ್ರತ್ಯೇಕ ಮನವಿ ಸಲ್ಲಿಸಿ ವಾಣಿಜ್ಯ ಬಂದರು ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು.

ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದ ಹನುಮಂತ ಗೌಡ ಮಾತನಾಡಿ, ಬಡ ಮೀನುಗಾರರು, ಕೃಷಿಯನ್ನು ನಂಬಿ ಬದುಕು ಸಾಗಿಸುತ್ತಿರುವ ಹಾಲಕ್ಕಿ ಒಕ್ಕಲಿಗರು ಸೇರಿದಂತೆ ಇತರ ಎಲ್ಲಾ ಜೀವನಕ್ಕೆ ಹಾಗೂ ಸುತ್ತ ಮುತ್ತಲಿನ ಪರಿಸರಕ್ಕೆ ಮಾರಕವಾಗಿರುವ ಕೇಣಿ ವಾಣಿಜ್ಯ ಬಂದರು ಯೋಜನೆ ಕೈ ಬಿಡಲೇಬೇಕು ಎಂದರು.

ಸಾಗರ ವಿಜ್ಞಾನಿ ವಿ.ಎನ್. ನಾಯಕ ಮಾತನಾಡಿ, ಸುಳ್ಳು ವರದಿ ನೀಡಿ ಜನ ವಿರೋಧವಿದ್ದರೂ ಒತ್ತಾಯಪೂರ್ವಕವಾಗಿ ಯೋಜನೆಯ ಹೇರುವಿಕೆ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದರು.

ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿದರು.

ಭಾವಿಕೇರಿ ಗ್ರಾಮ ಪಂಚಾಯಿತಿಯ ಸದಸ್ಯ ಉದಯ ನಾಯಕ, ರಾಜು ಹರಿಕಂತ್ರ ಸೇರಿದಂತೆ ಹೋರಾಟ ಸಮಿತಿಯ ಪ್ರಮುಖರು ಇದ್ದರು.

ತಹಸೀಲ್ದಾರ ಕಾರ್ಯಾಲಯದ ಹೊರ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಲಾಯಿತು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ