- ಬಸ್ತಿಮಠದ ಮಹಾವೀರ ಭವನದಲ್ಲಿ ಧ.ಗ್ರಾ.ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ,ಧಾರ್ಮಿಕ ಉಪನ್ಯಾಸ
ಸತ್ಯನಾರಾಯಣ ಪೂಜೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಜೀವನದಲ್ಲಿ ಅನುಸರಿಸಬೇಕಾದ ಮೌಲ್ಯಗಳ ಸಂಕೇತವಾಗಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.
ಗುರುವಾರ ಬಸ್ತಿಮಠದ ಮಹಾ ವೀರಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಸಿಂಹರಾಜಪುರ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಸಾಮಾಹಿಕ ಸತ್ಯನಾರಾಯಣ ಪೂಜೆ ಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಸಾಮೂಹಿಕ ಸತ್ಯನಾರಾಯಣ ಪೂಜೆ ಸತ್ಯ, ಸೇವೆ ಮತ್ತು ಸೌಹಾರ್ದತೆ ಸಂದೇಶ. ಮನಸ್ಸಿನಲ್ಲಿ ಶುದ್ಧತೆ, ನಡೆನುಡಿಯಲ್ಲಿ ಏಕತೆ ಹಾಗೂ ಸಂಬಂಧಗಳಲ್ಲಿ ನಂಬಿಕೆ ಕಲಿಸುವುದೇ ಇಂತಹ ಸಾಮೂಹಿಕ ಆಚರಣೆಗಳು ಎಂದರು.ಮುಖ್ಯ ಅತಿಥಿಯಾಗಿದ್ದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕ ಗುಣಪಾಲ್ ಜೈನ್ ಉದ್ಘಾಟಿಸಿ ಮಾತನಾಡಿ, ಧರ್ಮ ಎಂದರೆ ವಸ್ತುವಿನ, ವ್ಯಕ್ತಿ, ವ್ಯವಸ್ಥೆಯ ಸಹಜ ಗುಣವೇ ಧರ್ಮವಾಗಿದೆ. ಇಂದಿನ ಧಾವಂತದ ಯುಗದಲ್ಲಿ ಬದುಕಿನ ಜಂಜಾಟದಲ್ಲಿ ನಾವು ಧರ್ಮ ಸೇರಿದಂತೆ ಎಲ್ಲವನ್ನು ಮರೆತಿದ್ದೇವೆ. ಈ ದೇಹ ನಶ್ವರ. ನಮ್ಮೊಳಗಿನ ಆತ್ಮಶಕ್ತಿ ಯಾವತ್ತಿಗೂ ದೀಪದಂತೆ ಪ್ರಜ್ವಲಿಸುತ್ತಿರುತ್ತದೆ ಎಂದರು.
ಧ.ಗ್ರಾ.ಯೋಜನೆ ಕೊಪ್ಪ ತಾಲೂಕು ಯೋಜನಾಧಿಕಾರಿ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 43 ವರ್ಷ ಗಳಿಂದ ಧ.ಗ್ರಾ.ಯೋಜನೆ ಕಾರ್ಯಕ್ರಮಗಳು ಹಲವು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ಭಾಗದಲ್ಲಿ 2007 ರಿಂದ ಪ್ರಾರಂಭ ವಾಗಿದೆ. ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ 2244 ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘ ಗಳಿವೆ.15,800 ಸದಸ್ಯರಿದ್ದಾರೆ.ಧ.ಗ್ರಾ.ಯೋಜನೆಗೆ ವರ್ಷಕ್ಕೆ 4 ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಅವಕಾಶವಿದ್ದು ಸದಸ್ಯರಲ್ಲಿ ಶ್ರದ್ದೆ, ನಂಬಿಕೆ, ಭಕ್ತಿ ಉಳಿಯಬೇಕು ಎಂಬ ಉದ್ದೇಶದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೋಜನೆ ಮಾಡಲಾಗಿದೆ ಎಂದರು. ಧ.ಗ್ರಾ.ಯೋಜನೆ ನರಸಿಂಹರಾಜಪುರ ವಲಯ ಮೇಲ್ವೀಚಾರಕಿ ಸುಸೀಲ ವರದಿ ವಾಚನ ಮಾಡಿದರು.
ಸಭೆ ಅಧ್ಯಕ್ಷತೆಯನ್ನು ಸತ್ಯನಾರಾಯಣ ಪೂಜೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿವಹಿಸಿದ್ದರು. ವಿವಿಧ ಒಕ್ಟೂಟದ ಅಧ್ಯಕ್ಷರಾದ ಪುಷ್ಪಾ, ವೀರಭದ್ರ, ವರ್ಕಾಟೆ ರಮೇಶ್, ರತ್ನಮ್ಮ, ರಾಜೇಶ್, ಸತೀಶ್, ಹೊನ್ನೇಕೊಡಿಗೆ ರಮೇಶ್, ಗಿರೀಶ, ರಮೇಶ್ ಶೆಟ್ಟಿ, ವಿಮಲಾ, ಸುಧಿ, ಸುನೀತಾ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಸೇವಾ ಪ್ರತಿನಿಧಿಗಳು ಇದ್ದರು.