ಕುಮಟಾ: ತಲೆತಲಾಂತರದಿಂದ ಬಳುವಳಿಯಾಗಿ ಬಂದ ಮೇರು ಕಲೆ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಸೂಕ್ತ ಮಾರ್ಗದರ್ಶನದೊಂದಿಗೆ ದಾಟಿಸುವ ಮೂಲಕ ಕಲೆಯನ್ನು ಜೀವಂತವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೊಲನಗದ್ದೆ ಗ್ರಾಪಂ ಅಧ್ಯಕ್ಷ ಎಂ.ಎಂ. ಹೆಗಡೆ ತಿಳಿಸಿದರು.ತಾಲೂಕಿನ ಗುಡೇಅಂಗಡಿಯಲ್ಲಿ ಕಾಂಚಿಕಾಂಬಾ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಚಿಣ್ಣರ ಯಕ್ಷಗಾನ ಮಂಡಳಿ ಹಾಗೂ ಕಾಂಚಿಕಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ದಸರಾ ಉತ್ಸವದ ಪ್ರಯುಕ್ತ ಆಯೋಜಿಸಿದ್ದ ಯಕ್ಷ ಸಪ್ತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಡೇಅಂಗಡಿ ಗ್ರಾಮದ ಸಮಾನ ಮನಸ್ಕರು ತಾಪಂ ಮಾಜಿ ಸದಸ್ಯ ಜಗನ್ನಾಥ ನಾಯ್ಕ ಮುಂದಾಳತ್ವದಲ್ಲಿ ಎರಡು ದಶಕಗಳಿಂದ ಯಕ್ಷಗಾನದ ತರಬೇತಿ, ಸಂಘಟನೆ, ಸಂಯೋಜನೆ ಹಾಗೂ ಪ್ರದರ್ಶನದಲ್ಲಿ ಯಶಸ್ವಿಯಾಗಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಾಂಚಿಕಾಂಬಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಹೆಗಡೆ ಮಾತನಾಡಿ, ಇಲ್ಲಿ ಅನೇಕ ಕಿರಿಯ ಕಲಾವಿದರನ್ನು ಸೃಷ್ಟಿಸುವ ಮೂಲಕ ಯಕ್ಷಗಾನ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಇಲ್ಲಿ ತರಬೇತಿ ಪಡೆದ ಕಲಾವಿದರು ಭವಿಷ್ಯದಲ್ಲಿ ಯಕ್ಷಗಾನ ಕಲೆಗೆ ಉನ್ನತ ಕೊಡುಗೆ ನೀಡುವಂತಾಗಿ ಕೀರ್ತಿ ಸಂಪಾದಿಸಲಿ ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಗಗನ ಮಾರುತಿ ನಾಯ್ಕ, ರಕ್ಷಿತಾ ಭದ್ರು ಮಡಿವಾಳ, ಅಘನಾಶಿನಿಯ ಗಾನ ಗಂಧರ್ವ ಚಿಣ್ಣರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪುರುಷೋತ್ತಮ ನಾಯ್ಕ ಅವರನ್ನು ಗೌರವಿಸಲಾಯಿತು. ಜಗನ್ನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಡ ಗ್ರಾಪಂ ಅಧ್ಯಕ್ಷೆ ಗೀತಾ ನಾಯ್ಕ, ಯುವಕ ಮಂಡಳ ಅಧ್ಯಕ್ಷ ಲಕ್ಷ್ಮೀಷ ನಾಯ್ಕ, ಕಾಂಚಿಕಾಂಬಾ ಯಕ್ಷಗಾನ ಮಂಡಳಿಯ ಅಧ್ಯಕ್ಷ ವಿಷ್ಣು ನಾಯ್ಕ, ಕಾರ್ಯದರ್ಶಿ ನಾರಾಯಣ ಭಟ್ಟ, ನಾರಾಯಣ ಪಟಗಾರ ಇತರರು ಇದ್ದರು. ಶಿಕ್ಷಕ ಚಿದಾನಂದ ಸ್ವಾಗತಿಸಿ, ವಂದಿಸಿದರು. ಕೊಂಕಣಿ ನಾಟಕ ಕಾರ್ಯಾಗಾರ