ಎಷ್ಟು ವರ್ಷ ಜನರ ಪ್ರಾಣ ತೆಗಿತೀರಿ: ಬೆಸ್ಕಾಂ ಅಧಿಕಾರಿಗಳ ವಿರುದ್ಧ ಹೈ ಕೋರ್ಟ್ ಕಿಡಿ

ಸಾರಾಂಶ

ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯದಿಂದ ಜನರ ಜೀವ ತೆಗೆಯುತ್ತಾರೆ. ಅವರ ನಿರ್ಲಕ್ಷ್ಯದಿಂದ ನಾಗರಿಕರು ಸತ್ತರೂ ಯಾವೊಬ್ಬ ಅಧಿಕಾರಿಯೂ ಹೊಣೆ ಹೊತ್ತುಕೊಳ್ಳುವುದಿಲ್ಲ.  

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯದಿಂದ ಜನರ ಜೀವ ತೆಗೆಯುತ್ತಾರೆ. ಅವರ ನಿರ್ಲಕ್ಷ್ಯದಿಂದ ನಾಗರಿಕರು ಸತ್ತರೂ ಯಾವೊಬ್ಬ ಅಧಿಕಾರಿಯೂ ಹೊಣೆ ಹೊತ್ತುಕೊಳ್ಳುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ಪ್ರಾಸಿಕ್ಯೂಷನ್‌ಗೆ ಮೇಲಾಧಿಕಾರಿಗಳು ಪೂರ್ವಾನುಮತಿಯೇ ನೀಡಲ್ಲ. ಮೇಲಿಂದ ಕೆಳಗಿನವರೆಗೆ ಎಲ್ಲ ಶ್ರೇಣಿಯ ಸಿಬ್ಬಂದಿ-ಅಧಿಕಾರಿಗಳು ನಿರ್ಲಕ್ಷ್ಯಗಾರರೇ. ಎಷ್ಟು ವರ್ಷ ನಿರ್ಲಕ್ಷ್ಯ ವಹಿಸುತ್ತಾ ಸಾರ್ವಜನಿಕರ ಪ್ರಾಣ ತೆಗೆಯುತ್ತೀರಿ’..!

ವಿದ್ಯುತ್‌ ಕಂಬದಲ್ಲಿ ತಂತಿ ದುರಸ್ತಿ ವೇಳೆ ವಿದ್ಯುತ್‌ ಪ್ರವಹಿಸಿ ಲೈನ್‌ಮೆನ್‌ ಸಾವನ್ನಪ್ಪಿದ ಪ್ರಕರಣದಲ್ಲಿ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಚಿಕ್ಕಬಳ್ಳಾಪುರದ ಕೈಗಾರಿಕಾ ಪ್ರದೇಶದ ಬೆಸ್ಕಾಂ ಕಿರಿಯ ಎಂಜಿನಿಯರ್‌ ಪಿ.ರಜನಿ ವಿರುದ್ಧ ದಾಖಲಾದ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವ್ಯಕ್ತಪಡಿಸಿದ ಆಕ್ರೋಶವಿದು.

ವಿದ್ಯುತ್ ಸರಬರಾಜು ಇಲಾಖೆ ಅಧಿಕಾರಿಗಳು ಜನರ ಪ್ರಾಣಕ್ಕೆ ಕುತ್ತುಬಾರದಂತೆ ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ತಾಕೀತು ಮಾಡಿದ ನ್ಯಾಯಮೂರ್ತಿಗಳು, ರಜನಿ ಅವರ ವಕೀಲರು ಸಾಕಷ್ಟು ಮನವಿ ಮಾಡಿದರೂ ಚಿಕ್ಕಬಳ್ಳಾಪುರ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿ ದಸರಾ ರಾಜಕಾಲದ ನಂತರಕ್ಕೆ ವಿಚಾರಣೆ ಮುಂದೂಡಿದರು.

ಲೈನ್‌ಮೆನ್ ಸಾವು:

ಸಂಗೀತಾ ಎಂಬುವರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮ ಠಾಣೆಗೆ ಅ.2ರಂದು ದೂರು ನೀಡಿ, ‘ಬೆಸ್ಕಾಂ ಲೈನ್‌ಮೆನ್‌ ಆಗಿರುವ ಪತಿ ವಿವೇಕಾನಂದ ಪಾಟೀಲ್‌, ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್‌ ಕಂಬದ ಮೇಲೆ ಹತ್ತಿ ತಂತಿ ಸರಿಪಡಿಸುತ್ತಿದ್ದರು. ಆಗ ಅಧಿಕಾರಿಗಳು ಲೈನ್‌ಗೆ ವಿದ್ಯುತ್‌ ಚಾರ್ಜ್ ಮಾಡಿದ್ದರಿಂದ ವಿದ್ಯುತ್‌ ಪ್ರವಹಿಸಿ ಕಂಬದ ಮೇಲಿಂದ ಬಿದ್ದು ನನ್ನ ಪತಿ ಸಾವನ್ನಪ್ಪಿದ್ದಾರೆ’ ಎಂದು ದೂರಿದ್ದರು.

ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ (ಐಪಿಸಿ ಸೆಕ್ಷನ್‌ 304ಎ) ಅಪರಾಧದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ಸಮನ್ಸ್‌ ಜಾರಿ ಮಾಡಿದ್ದರಿಂದ ಪ್ರಕರಣ ರದ್ದು ಕೋರಿದ್ದಲ್ಲದೇ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ರಜನಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಜನರ ಜೀವಿಸುವ ಹಕ್ಕು ಕಿತ್ತುಕೊಳ್ಳಬೇಡಿ:

ಇತ್ತೀಚೆಗೆ ಅರ್ಜಿ ವಿಚಾರಣೆಗೆ ಬಂದಿದ್ದಾಗ ರಜನಿ ಪರ ವಕೀಲರು, ಜನರಿಂದ ವಿದ್ಯುತ್‌ ಸಮಸ್ಯೆ ದೂರು ಬಂದರೆ, ಲೈನ್‌ಮೆನ್‌ ಕ್ಲಿಯರೆನ್ಸ್‌ ಸರ್ಟಿಫಿಕೇಷನ್‌ ಪಡೆದುಕೊಳ್ಳಬೇಕು. ಅದನ್ನು ಮೃತರು ಪಡೆಯದೆ ಹಾಗೂ ಅಧಿಕೃತವಾಗಿ ಮೇಲಾಧಿಕಾರಿಗಳಿಂದ ಅನುಮತಿ ಪಡೆಯದೇ ಸ್ಥಳಕ್ಕೆ ಹೋಗಿದ್ದರು ಎಂದರು.

ಆ ವಾದ ಆಕ್ಷೇಪಿಸಿದ ನ್ಯಾಯಮೂರ್ತಿಗಳು, ಜನರ ಜೀವಿಸುವ ಹಕ್ಕನ್ನು ಕಸಿದುಕೊಳ್ಳುವ ಇಂತಹ ಅಧಿಕಾರಿಗಳ ವಿರುದ್ಧ ನಾನಿದ್ದೇನೆ ಎಂದು ಕಟುವಾಗಿ ನುಡಿದರು.

ಅರ್ಜಿದಾರರ ಪರ ವಕೀಲರು, ಘಟನೆಗೂ ಅರ್ಜಿದಾರರು ಯಾವುದೇ ಸಂಬಂಧವಿಲ್ಲ. ಮೊದಲಿಗೆ ಎಫ್‌ಐಆರ್‌ನಲ್ಲಿ ಅರ್ಜಿದಾರರು ಆರೋಪಿಯಾಗಿರಲಿಲ್ಲ. ದೋಷಾರೋಪ ಪಟ್ಟಿಯಲ್ಲಿ ಅರ್ಜಿದಾರರ ಹೆಸರು ಸೇರಿಸಿ, ಮೊದಲಿದ್ದ ಆರೋಪಿಗಳನ್ನು ಕೈಬಿಡಲಾಗಿದೆ. ಅರ್ಜಿದಾರರಿಗೆ ವಿದ್ಯುತ್‌ ನಿರೀಕ್ಷಕರು ಕ್ಲೀನ್‌ಚಿಟ್‌ ನೀಡಿದ್ದು, ಆ ವರದಿ ಪರಿಶೀಲಿಸಬೇಕು ಎಂದು ಕೋರಿದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ನ್ಯಾಯಮೂರ್ತಿಗಳು,, ವಿದ್ಯುತ್‌ ನಿರೀಕ್ಷಕರ ಹೆಸರು ತೆಗೆಯಬೇಡಿ. ಅವರು ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಯಾವೊಂದು ಪ್ರಕರಣದಲ್ಲೂ ಹೇಳಿಯೇ ಇಲ್ಲ. ಎಲ್ಲ ಪ್ರಕರಣದಲ್ಲಿ ಆರೋಪಿ ಅಧಿಕಾರಿಗಳನ್ನು ದೋಷಮುಕ್ತಗೊಳಿಸುತ್ತಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದರೆ ಕೊಡುವುದಿಲ್ಲ. ಬೆಸ್ಕಾಂ ಅಧಿಕಾರಿಗಳು ತಾವು ಯಾವುದಕ್ಕೂ ಜವಾಬ್ದಾರಲ್ಲ ಎನ್ನುತ್ತಾರೆ. ಮೊದಲು ನಿಮ್ಮ ಮನೆಯನ್ನು (ಬೆಸ್ಕಾಂ. ಕೆಪಿಟಿಸಿಎಲ್‌ ಕಚೇರಿ) ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳಬೇಕು. ಈ ಪ್ರಕರಣದ ವಿಚಾರಣೆ ಮುಂದುವರಿಸಿದರೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಇತರೆ ಅಧಿಕಾರಿಗಳ ಮೇಲೂ ವಿಚಾರಣೆಗೆ ಆದೇಶಿಸಬೇಕಾಗುತ್ತದೆ. ಸದ್ಯ ಅರ್ಜಿದಾರರ ಮೇಲಿನ ವಿಚಾರಣೆಗೆ ತಡೆ ನೀಡುವುದಿಲ್ಲ ಎಂದು ತೀಕ್ಷ್ಣವಾಗಿ ನುಡಿದರು.

Share this article