ಮೂರು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ : ಅ.9ರ ವರೆಗೂ ಯಲ್ಲೋ ಅಲರ್ಟ್‌ ಪ್ರಕಟ

ಸಾರಾಂಶ

ರಾಜ್ಯದಲ್ಲಿ ಮುಂದಿನ ಮೂರು ದಿನ ಕರಾವಳಿಯ ಮೂರು ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಬೆಂಗಳೂರು : ರಾಜ್ಯದಲ್ಲಿ ಮುಂದಿನ ಮೂರು ದಿನ ಕರಾವಳಿಯ ಮೂರು ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು. ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ಅ.9ರ ವರೆಗೆ ಯಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ.

ಭಾನುವಾರ ಬೆಳಗ್ಗೆ 8.30ಕ್ಕೆ ಹವಾಮಾನ ಇಲಾಖೆಯ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಕೊಡಗಿನ ನಾಪೋಕ್ಲುದಲ್ಲಿ ಅತಿ ಹೆಚ್ಚು 9 ಸೆಂ.ಮೀ ಮಳೆಯಾಗಿದೆ. ಬಂಡೀಪುರದಲ್ಲಿ 6, ನರಗುಂದ, ರಾಮನಗರ, ಕಾರ್ಕಳದಲ್ಲಿ ತಲಾ 5, ಕನಕಪುರ, ಮಾಗಡಿ, ಎಚ್‌ಡಿ ಕೋಟಿಯಲ್ಲಿ ತಲಾ 4, ಮುಂಡಗೋಡು, ಕುಮಟಾ, ಲಕ್ಷ್ಮೇಶ್ವರ, ಶಿಗ್ಗಾಂವಿ, ಕೊಣನೂರು, ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.

ಸಿಡಿಲಬ್ಬರದ ಮಳೆಗೆ ಮೂರು ಬಲಿ :  

ಬೆಂಗಳೂರು :  ವಿಜಯನಗರ, ದಾವಣಗೆರೆ, ಉಡುಪಿ ಸೇರಿ 5 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಇಬ್ಬರು ರೈತರು ಸೇರಿ ಮೂವರು ಮೃತಪಟ್ಟಿದ್ದಾರೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದ ಬಣಕಾರ್ ನಾರಪ್ಪ (62), ಬಣಕಾರ್ ಪ್ರಶಾಂತ (42) ಸಿಡಿಲಿಗೆ ಮೃತಪಟ್ಟಿದ್ದಾರೆ. ತೋಟದಲ್ಲಿ ಮೆಕ್ಕೆಜೋಳ ತೆನೆ ಮುರಿಯಲು ಹೋದಾಗ ಮಳೆ ಬಂದಿದ್ದು, ಮರದ ಕೆಳಗೆ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಇದೇ ವೇಳೆ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರಿನಲ್ಲಿ ಮನೆಯ ಗೋಡೆ ಕುಸಿದು ಬಸವರಾಜಪ್ಪ (81) ಎಂಬ ವೃದ್ಧರು ಮೃತರಾಗಿದ್ದಾರೆ. ಸತತ ಸುರಿದ ಮಳೆಗೆ ಮನೆಯ ಗೋಡೆ ವಾಲಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಹೊರಗೆ ಓಡಿ ಹೋಗಿದ್ದು, ಬಸವರಾಜಪ್ಪ ಹೊರ ಬರುವಾಗ ಮೈ ಮೇಲೆಯೇ ಗೋಡೆ ಕುಸಿದಿದೆ. ಮಗ ಹಾಗೂ ಸೊಸೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಆರ್ಭಟದಿಂದಾಗಿ ಬಿನ್ನಿಪೇಟೆ ಪಾರ್ಕ್ ವ್ಯೂವ್ ಅಪಾರ್ಟ್ ಮೆಂಟ್‌ನ 7 ಅಡಿ ಎತ್ತರದ ಸುಮಾರು ಹತ್ತು ಅಡಿ ಉದ್ದದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ ಹಲವು ಕಾರು, 20ಕ್ಕೂ ಹೆಚ್ಚು ಬೈಕ್ ಗಳು ಜಖಂಗೊಂಡಿವೆ. ಯಲಹಂಕ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ನ 50 ಅಡಿ ಕಾಂಪೌಂಡ್ ಕುಸಿದು ಬಿದ್ದಿದೆ. 50ಕ್ಕೂ ಅಧಿಕ ಕಾರು, 150 ಬೈಕ್‌ ಗಳು ನೀರಿನಲ್ಲಿ ಮುಳುಗಡೆಯಾಗಿದ್ದವು.

ಕಾರ್ಕಳದಲ್ಲಿ ಮೇಘ ಸ್ಫೋಟ?:

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ಕೇವಲ ಎರಡೂವರೆ ಗಂಟೆಯಲ್ಲಿ ಅಂದಾಜು 18 ಸೆಂಟಿ ಮೀಟರ್‌ ಮಳೆ ಸುರಿದಿದ್ದು, ನದಿಯಲ್ಲಿ ಹಠಾತ್‌ ಆಗಿ ಕೆಸರು ಮಿಶ್ರಿತ ನೀರು ಏರಿಕೆಯಾಯಿತು. ಇದು ಮೇಘ ಸ್ಫೋಟ ಎಂಬ ಶಂಕೆ ವ್ಯಕ್ತವಾಗಿದ್ದು, ಕಬ್ಬಿನಾಲೆ ತಿಂಗಳಮಕ್ಕಿ ಪ್ರದೇಶಗಳಲ್ಲಿ ಮೇಘ ಸ್ಫೋಟವಾಗಿದೆಯೇ ಅಥವಾ ಗುಡ್ಡ ಜರಿದಿದೆಯೇ ಎಂಬ ಕುರಿತು ಖಚಿತ ಮಾಹಿತಿ ಇಲ್ಲ. ಆದರೆ, ಜೀವಮಾನದಲ್ಲಿ ಈ ಭಾಗದಲ್ಲಿ ಇಂಥ ಭೀಕರ ಪ್ರವಾಹವನ್ನು ನಾವು ನೋಡಿರಲಿಲ್ಲ ಎಂದು ಸ್ಥಳೀಯರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಬಮ್ಮಗುಂಡಿ ನದಿಯಲ್ಲಿ ಹಠಾತ್‌ ಜಲಪ್ರವಾಹದ ಪರಿಣಾಮ ಮನೆ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿದ್ದು, ಬಲ್ಲಾಡಿಯಲ್ಲಿ ಭಾರಿ ಆವಾಂತರ ಸೃಷ್ಟಿಯಾಗಿದೆ. ಹಠಾತ್‌ ಪ್ರವಾಹ ಪರಿಣಾಮ 10ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, 2 ಕಾರು ಹಾಗೂ 2 ಬೈಕ್‌ ಸೇರಿ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಬಮ್ಮಗುಂಡಿ ನದಿಯ ಸುತ್ತಮುತ್ತಲಿನಲ್ಲಿ 150 ಎಕರೆ ಕಟಾವಿಗೆ ಬಂದಿದ್ದ ಭತ್ತ, ರಬ್ಬರ್, ಅಡಕೆ, ತೆಂಗು, ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಮರಗಳು ಬಿದ್ದಿದ್ದು, 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಬ್ಬಿ ಜಲಪಾತ ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಮಳೆಯ ತೀವ್ರತೆ ಗಮನಿಸಿ ಓಟಕ್ಕಿತ್ತರು. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

Share this article