ಮುಂಡರಗಿ: ಮಕರ ಸಂಕ್ರಾಂತಿಯ ದಿನ ಲಕ್ಷಾಂತರ ಜನ ಸಾಬೂನು ಹಾಗೂ ಶಾಂಪೂ ಬಳಸಿ ನದಿಯಲ್ಲಿ ಸ್ನಾನ ಮಾಡಿ ನೀರನ್ನು ಕಲುಷಿತಗೊಳಿಸುತ್ತಿದ್ದಾರೆ. ಅದನ್ನು ತಡೆಯಲು ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಹಾಗೂ ಮುಂಡರಗಿ ತಾಲೂಕು ಶಾಮಿಯಾನ ಸಪ್ಲಾಯರ್ ಸಂಘದ ಸಹಯೋಗದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರವಾದಿ, ಪತ್ರಕರ್ತ ಪ್ರೊ. ಸಿ.ಎಸ್. ಅರಸನಾಳ ತಿಳಿಸಿದರು.ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಮತ್ತು ಮುಂಡರಗಿ ತಾಲೂಕು ಶಾಮಿಯಾನ ಸಪ್ಲಾಯರ್ ಸಂಘದಿಂದ ಬುಧವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಸಾರ್ವಜನಿಕರಿಗೆ ಹಸಿ ಕಡಲೆ ಹಿಟ್ಟು ವಿತರಿಸಿ ಮಾತನಾಡಿದರು. ಕಡಲೆ ಹಿಟ್ಟನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ ನದಿ ನೀರು ವಿಷಯುಕ್ತವಾಗುವುದಿಲ್ಲ ಎನ್ನುವ ಉದ್ದೇಶದಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಹಿಂದೆ ಗಂಗಾ ಸ್ನಾನ, ತುಂಗಾ ಪಾನ ಎಂದು ಹೇಳಲಾಗುತ್ತಿತ್ತು. ಆದರೆ ಇಂದು ಗಂಗಾ ನದಿ ರೋಗ ಹರಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಆದರೆ ಈಗಲೂ ಎಲ್ಲರೂ ತುಂಗಭದ್ರಾ ನದಿ ನೀರನ್ನು ಕುಡಿಯುತ್ತಿರುವುದರಿಂದ ಆ ನೀರು ವಿಷಯುಕ್ತವಾಗಬಾರದೆನ್ನುವ ಉದ್ದೇಶದಿಂದ ಇದೊಂದು ಅತ್ಯುತ್ತಮ ಕಾರ್ಯವಾಗಿದೆ ಎಂದರು.ಪತ್ರಕರ್ತ ಸಿ.ಕೆ. ಗಣಪ್ಪನವರ, ಹು.ಬಾ. ವಡ್ಡಟ್ಟಿ ಮಾತನಾಡಿ, ಜನತೆ ತಪ್ಪದೇ ಹಸಿ ಕಡಲೆ ಹಿಟ್ಟನ್ನೇ ಬಳಸಿಕೊಂಡು ಸ್ನಾನ ಮಾಡುವ ಮೂಲಕ ನದಿಯಲ್ಲಿ ವಾಸಿಸುವ ಎಲ್ಲ ಜಲಚರ ಪ್ರಾಣಿಗಳನ್ನು ಸಂರಕ್ಷಿಸಬೇಕು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಶರಣು ಸೊಲಗಿ, ಸಂತೋಷಕುಮಾರ ಮುರುಡಿ, ಕವಿ ಬಂಕಾಪೂರ ಹಾಗೂ ಶಾಮಿಯಾನ ಸಪ್ಲಾಯರ್ ಸಂಘದ ತಾಲೂಕು ಅಧ್ಯಕ್ಷ ರಾಜು ಹಟ್ಟಿ, ಶಂಕರ್ ಮಗಜಿ, ರಾಜು ಚೂರಿ, ಅಶೋಕ ತಳವಾರ, ರಾಜು ಬಡಿಗೇರ, ಹನುಮಂತಪ್ಪ ನರಸಾನಾಯಕ್, ರಾಜು ಡಂಬಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.