ಕನ್ನಡಪ್ರಭ ವಾರ್ತೆ ಮುಳಬಾಗಿಲು
ತಾಲೂಕಿನ ಗಡಿಭಾಗದ ನಂಗಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿಗೆ ಅನುಮತಿ ನೀಡಿ, ೪೦೦ ಬಡ ರೈತ, ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯ ರೂಪಿಸಬೇಕೆಂದು ರೈತಸಂಘದಿಂದ ಶಾಲಾ ಆವರಣದಲ್ಲಿ ಹೋರಾಟ ಮಾಡಿ ಉಪನಿರ್ದೇಶಕರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.ರಾಷ್ಟ್ರೀಯ ಹೆದ್ದಾರಿ ೭೫ ಬಂದ್ ಮಾಡುವ ಹೋರಾಟದ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹೋರಾಟಗಾರರನ್ನು ರಸ್ತೆಗೆ ಬಿಡದೇ ಮಧ್ಯದಲ್ಲಿಯೇ ತಡೆದ ಹಿನ್ನೆಲೆಯಲ್ಲಿ ರೈತಸಂಘದ ಕಾರ್ಯಕತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ಪ್ರೌಢಶಾಲೆಗೆ ಅನುಮತಿ ನೀಡಿ ಸರ್ಕಾರಿ ಶಾಲೆ ಉಳಿಸುವ ಹೋರಾಟಕ್ಕೆ ತಡೆ ಮಾಡುವುದೇಕೆ? ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಅವಕಾಶ ಕೊಡಿ, ಇಲ್ಲವೇ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಗೆ ಅನುಮತಿ ನೀಡಿ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪೊಲೀಸರನ್ನು ಒತ್ತಾಯಿಸಿದರು.
ಪ್ರತಿ ವರ್ಷ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತೇವೆ, ಶಿಕ್ಷಕರ ಕೊರತೆ ಇಲ್ಲದಂತೆ ನೇಮಕ ಮಾಡುತ್ತೇವೆ. ಪ್ರತಿ ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ಶಾಲೆ ತೆರೆದು ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತೇವೆಂದು ಹೇಳಿಕೆ ನೀಡುವ ಶಿಕ್ಷಣ ಸಚಿವರೇ, ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ೪೦೦ ಮಕ್ಕಳಿರುವ ನಂಗಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಹಿಂದೆ ಇದ್ದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಯ ಬಗ್ಗೆ ಪತ್ರ ವ್ಯವಹಾರ ನಡೆಸಿ ಅನುಮತಿ ನೀಡುವಂತೆ ಒತ್ತಾಯಿಸಿದ್ದರೂ ಶಾಲೆಯ ಬಗ್ಗೆ ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ? ಜನರ ದಿಕ್ಕು ತಪ್ಪಿಸಲು ನೂರೊಂದು ಹೇಳಿಕೆ ನೀಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದರು.ಯುವ ರೈತ ಮುಖಂಡ ನಂಗಲಿ ಕಿಶೋರ್, ನಾಗೇಶ್ ಮಾತನಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕ ಕೃಷ್ಣಮೂರ್ತಿ, ನಂಗಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಫ್ರೌಢಶಾಲೆಗೆ ಉನ್ನತೀಕರಿಸಲು ಅನುಮತಿಗಾಗಿ ಎಲ್ಲಾ ದಾಖಲೆಗಳನ್ನು ಅಂಕಿ ಅಂಶಗಳ ಪ್ರಕಾರ ಹಿರಿಯ ಅಧಿಕಾರಿಗಳ ಗಮನಕ್ಕೆ ನೀಡಿದ್ದೇವೆ, ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಕಡತವನ್ನು ನಾಪತ್ತೆ ಮಾಡಿರುವ ಬಗ್ಗೆ ಈಗಾಗಲೇ ಮತ್ತೊಮ್ಮೆ ಶಿಕ್ಷಣ ಸಚಿವರಿಗೆ ವರದಿ ನೀಡಿದ್ದೇವೆ. ಯಾರು ಎಷ್ಟೇ ಒತ್ತಡ ಹಾಕಿದರೂ ಅನುಮತಿ ಸಿಗುತ್ತದೆಂಬ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಫಾರೂಖ್ ಪಾಷ, ವಿಜಯ್ ಪಾಲ್, ಹೆಬ್ಬಣಿ ಆನಂದರೆಡ್ಡಿ, ಸುಪ್ರೀಂ ಚಲ, ಪದ್ಮಘಟ್ಟ ಧರ್ಮ, ಚಂದು, ಮಣಿ, ವಿನಯ್, ರಾಮಕೃಷ್ಣಪ್ಪ, ಗಣೇಶ್, ವೆಂಕಟಾಚಲಪತಿ, ಯಲುವಳ್ಳಿ ಪ್ರಭಾಕರ್, ಅಂಬ್ಲಿಕಲ್ಮಂಜುನಾಥ್, ಗಿರೀಶ್, ಕೇಶವ ಇದ್ದರು.