ಬಡ ಮಕ್ಕಳ ಭವಿಷ್ಯ ಕಿತ್ತುಕೊಳ್ಳದೆ ಸರ್ಕಾರಿ ಶಾಲೆ ಉಳಿಸಿ: ರಾ.ನಂ.ಚಂದ್ರಶೇಖರ್

KannadaprabhaNewsNetwork |  
Published : Aug 09, 2026, 01:45 AM IST
8ಕೆಎಂಎನ್ ಡಿ30 | Kannada Prabha

ಸಾರಾಂಶ

ಕನ್ನಡ ಶಾಲೆ ಉಳಿದರೆ ಮಾತ್ರ ನಾಡಿನ ಭವಿಷ್ಯ, ಬಡತನದ ಬೇಗೆ ನಿವಾರಣೆ ಸಾಧ್ಯ. ಮೆಡಿಕಲ್, ಬಿಇ ಅಂತಹ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜು ಬೇಕು ಎನ್ನುವ ಪಾಲಕರಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಕಾನ್ವೆಂಟ್ ವ್ಯಾಮೋಹ ಏಕೆ ಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಬಡಮಕ್ಕಳ ಭವಿಷ್ಯ ಸರ್ಕಾರಿ ಶಾಲೆಯಲ್ಲಿ ಅಡಗಿದೆ. ಶಾಲೆ ಮುಚ್ಚದಂತೆ ಕಾಳಜಿ ವಹಿಸಿ ಎಂದು ಕನ್ನಡಪರ ಚಿಂತಕ ಸಾಹಿತಿ ರಾ.ನಂ.ಚಂದ್ರಶೇಖರ್‌ ತಿಳಿಸಿದರು.

ಊಗಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಕನ್ನಡ ಗೆಳೆಯರ ಬಳಗ ಏರ್ಪಡಿಸಿದ್ದ ಸಾಹಿತಿ, ವಿಜ್ಞಾನಿ ಡಾ.ಎಚ್.ಎಂ.ಮರುಳಸಿದ್ದಯ್ಯ ಸ್ಮರಣಾರ್ಥ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯೋಪಕರಣ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ನೈಜ್ಯ ಪ್ರತಿಭೆಗಳಿವೆ. ಉತ್ತೇಜಿಸುವ ಮನಸ್ಸು ಮುಂದಾದರೆ ಕಮಲದಂತೆ ಭವಿಷ್ಯ ಅರಳಲಿದೆ ಎಂದರು.

ತನ್ನ ಪ್ರಕಟಿತ ಪುಸ್ತಕಗಳಿಂದ ಬರುವ ವರಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮುಂದಾಗಿರುವೆ. 40 ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ಅಕ್ಷರಸೇವೆಗೆ ರಾಜ್ಯಾದ್ಯಂತ ಅಳಿಲು ಸೇವೆ ಮಾಡಲಾಗುತ್ತಿದೆ ಎಂದರು.

ಕನ್ನಡ ಶಾಲೆ ಉಳಿದರೆ ಮಾತ್ರ ನಾಡಿನ ಭವಿಷ್ಯ, ಬಡತನದ ಬೇಗೆ ನಿವಾರಣೆ ಸಾಧ್ಯ. ಮೆಡಿಕಲ್, ಬಿಇ ಅಂತಹ ಉನ್ನತ ಶಿಕ್ಷಣಕ್ಕೆ ಸರ್ಕಾರಿ ಕಾಲೇಜು ಬೇಕು ಎನ್ನುವ ಪಾಲಕರಿಗೆ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಕಾನ್ವೆಂಟ್ ವ್ಯಾಮೋಹ ಏಕೆ ಬೇಕು ಎಂದು ಪ್ರಶ್ನಿಸಿದರು.

ಸಾಹಿತಿ ಜೇನುಗೂಡು ಮಹೇಶ್ ಮಾತನಾಡಿ, ಪರಿಸರ, ಶಿಕ್ಷಣ ಎರಡುಕಣ್ಣಿನಂತಿವೆ. ಇದು ವ್ಯಾಪಾರೀಕರಣ ಸರಕು ಆಗಬಾರದು. ಹಳ್ಳಿಗಾಡಿನ ಮಕ್ಕಳ ಬದುಕು ಸರ್ಕಾರಿ ಶಾಲೆಯಲ್ಲಿದೆ ಎಂಬುದನ್ನು ಪಾಲಕರು ಮರೆಯಬಾರದು ಎಂದು ವಿನಂತಿಸಿದರು.

ಸಾಹಿತಿ ನಾಗೇಂದ್ರಪ್ಪ ಕಲಬುರ್ಗಿ ಶಿಕ್ಷಣದ ಮಹತ್ವ ಕುರಿತು ಮಾಹಿತಿ ನೀಡಿದರು. ಸ್ವಾಮಿ ವಿವೇಕಾನಂದ ಸ್ವಯಂ ಸೇವಾ ಪ್ರತಿಷ್ಠಾನ ಹಾಗೂ ಸ್ಪಂದನಾ ಫೌಂಡೇಷನ್ ವತಿಯಿಂದ ಗಣ್ಯರಿಗೆ ಗಿಡ ವಿತರಿಸಿ ಗೌರವಿಸಿ ಪರಿಸರ ಜಾಗೃತಿ ಮೂಡಿಸಲಾಯಿತು.

ಮಕ್ಕಳಿಗೆ ಸ್ಕೂಲ್ ಬ್ಯಾಗ್, ಪೆನ್ನು, ಜಾಮಿಟ್ರಿ ಬಾಕ್ಸ್, ಸಿಹಿ ವಿತರಿಸಲಾಯಿತು. ಕನ್ನಡ ಗೆಳೆಯರ ಬಳಗದ ಸಂಚಾಲಕರಾದ ಮ.ಚಂದ್ರಶೇಖರ್, ನಾಗೇಂದ್ರಪ್ಪ ಕಲಬುರ್ಗಿ, ಪರಿಸರ ಪ್ರೇಮಿ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಶೆಟ್ಟಿ, ಅಂಬರೀಷ್, ಪುಟ್ಟಸ್ವಾಮಿ, ಬಸವರಾಜು, ಭೀಮಣ್ಣ, ಸೋಮಣ್ಣ, ಮುಖ್ಯಶಿಕ್ಷಕ ಪುಟ್ಟೇಗೌಡ, ನಾರಾಯಣಶೆಟ್ಟಿ, ಕುಮಾರಸ್ವಾಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಜಮೀನಿಗೆ ಭೇಟಿ ನೀಡಿ ಕಷ್ಟ ಆಲಿಸಿದ ಸಚಿವ ಚಲುವರಾಯಸ್ವಾಮಿ
ಉಸಿರು ಇರುವವರೆಗೂ ಕಾಂಗ್ರೆಸ್‌ಗೆ ಋಣಿ, ಜನ ಸೇವೆಗೆ ಜೀವನ ತ್ಯಾಗ