ವೃತ್ತಿ ರಂಗಭೂಮಿಯನ್ನು ಉಳಿಸಿ, ಬೆಳೆಸಿ: ಡಾ.ಲಕ್ಷ್ಮಣದಾಸ್

KannadaprabhaNewsNetwork |  
Published : Mar 28, 2024, 12:45 AM IST
ಡಾ. ಲಕ್ಷ್ಮಣದಾಸ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಓರೆ, ಕೋರೆಗಳನ್ನು ತಿದ್ದಿ, ತೀಡುವ ನಿಟ್ಟಿನಲ್ಲಿ ಪ್ರಬಲ ಮಾಧ್ಯಮವಾಗಿರುವ ವೃತ್ತಿ ರಂಗಭೂಮಿಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಕಲಾವಿದರಾದ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಹರಿಕಥಾ ವಿದ್ವಾನ್, ಕಲಾಶ್ರೀ ಡಾ.ಲಕ್ಷ್ಮಣದಾಸ್ ತಿಳಿಸಿದ್ದಾರೆ.

ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸ್ವಾಂದೇನಹಳ್ಳಿ ರಂಗಸೊಗಡು ಕಲಾಟ್ರಸ್ಟ್‌ನಿಂದ ವಿಶ್ವ ರಂಗಭೂಮಿ ದಿನಾಚರಣೆ

ಕನ್ನಡಪ್ರಭ ವಾರ್ತೆ ತುಮಕೂರು

ಸಮಾಜದ ಓರೆ, ಕೋರೆಗಳನ್ನು ತಿದ್ದಿ, ತೀಡುವ ನಿಟ್ಟಿನಲ್ಲಿ ಪ್ರಬಲ ಮಾಧ್ಯಮವಾಗಿರುವ ವೃತ್ತಿ ರಂಗಭೂಮಿಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಕಲಾವಿದರಾದ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಹರಿಕಥಾ ವಿದ್ವಾನ್, ಕಲಾಶ್ರೀ ಡಾ.ಲಕ್ಷ್ಮಣದಾಸ್ ತಿಳಿಸಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗಸೊಗಡು ಕಲಾಟ್ರಸ್ಟ್(ರಿ), ಸ್ವಾಂದೇನಹಳ್ಳಿ ವತಿಯಿಂದ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನರಂಜನೆಯ ಜೊತೆಗೆ, ಪೌರಾಣಿಕ, ಸಾಮಾಜಿಕ ನಾಟಕಗಳ ಮೂಲಕ ಉತ್ತಮ ಸಂದೇಶ ನೀಡುತಿದ್ದ ವೃತ್ತಿ ರಂಗಭೂಮಿ ಇಂದು ಕಾಣದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಲಿಲ್ಲಿ ವೃತ್ತಿ ಕಂಪನಿಗಳು ಕೆಲಸ ಮಾಡುತ್ತಿವೆ. ಕಲಾವಿದರ ಬದುಕೇ ಆಗಿದ್ದ ವೃತ್ತಿ ರಂಗಭೂಮಿಯನ್ನು ಉಳಿಸುವತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದರು.

ಇಂದು ಯುವ ಕಲಾವಿದರು, ಸಂಗೀತ ನಿರ್ದೇಶಕರುಗಳು ರಂಗಭೂಮಿಗೆ ಬರುತ್ತಿದ್ದಾರೆ. ಅವರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ. ಕುರುಕ್ಷೇತ್ರವೋ, ರಾಮಾಯಣವೋ ನಾಟಕ ಕಲಿಸಿದಾಕ್ಷಣ ಸಂಗೀತ ನಿರ್ದೇಶಕನಾಗಲು ಸಾಧ್ಯವಿಲ್ಲ. ನಮ್ಮಲ್ಲಿ ಪೌರಾಣಿಕ ನಾಟಕಗಳ ಹಾಡಿನ ದೊಡ್ಡ ಬಂಡಾರವೇ ಇದೆ. ಪ್ರತಿದಿನ ಬೆಳಗ್ಗೆ ಕನಿಷ್ಠ ೧ ಗಂಟೆ ಕಾಲ ಹಾಡುಗಳ ಕೇಳುವ ಮೂಲಕ ಹಾಡುಗಳ ಭಾವ, ಲಯ, ಗಮಕಗಳನ್ನು ಅರ್ಥ ಮಾಡಿಕೊಳ್ಳಬೇಕು.

ಹೊಸ ಹೊಸ ನಾಟಕಗಳನ್ನು ರಂಗಭೂಮಿಗೆ ಪರಿಚಯಿಸುವ ಕೆಲಸ ಆಗಬೇಕು. ಆಗ ಮಾತ್ರ ಕಲಾವಿದರ ಮನಸ್ಸಿನಲ್ಲಿ ಉಳಿಯಲು ಸಾಧ್ಯ. ರಂಗಭೂಮಿಗೆ ಒಂದು ಶಿಸ್ತು ಇದೆ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಯುವ ಕಲಾವಿದರಿಗೆ ಕಿವಿ ಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರೇಕ್ಷಕನಿಗೆ ನಾಟಕ ಯಾವಾಗ ಇಷ್ಟವಾಗುತ್ತದೆ ಎಂದರೆ ನಾಟಕ ನೋಡುತ್ತಾ ಹೋದಂತೆ ಪ್ರೇಕ್ಷಕ ನಾಟಕದ ಪಾತ್ರವಾಗಬೇಕು. ಆ ನಿಟ್ಟಿನಲ್ಲಿ ಕಲಾವಿದರ ಅಭಿನಯ ಇದ್ದಾಗ ಮಾತ್ರ ರಸಾನುಭವ ಅನುಭವಿಸಲು ಸಾಧ್ಯ. ಇಂದು ವೃತ್ತಿ ನಾಟಕ ಕಂಪನಿಗಳು ಹಾಗೂ ಕಲಾವಿದರು ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ವೃತ್ತಿ ರಂಗಭೂಮಿ ಕಲಾವಿದರನ್ನು ಮೇಲೆತ್ತುವ ಕೆಲಸ ಆಗಬೇಕೆಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಮಾತನಾಡಿ, ಪ್ರತಿ ವರ್ಷ ನಾಟಕಮನೆ ಮಹಾಲಿಂಗು ಅವರು ವಿಶ್ವ ರಂಗಭೂಮಿ ದಿನಾಚರಣೆಯನ್ನು ಆಯೋಜಿಸುತ್ತಿದ್ದರು. ಈ ಬಾರಿ ಸಿದ್ದರಾಜು ನೇತೃತ್ವದ ರಂಗಸೊಗಡು ಕಲಾಟ್ರಸ್ಟ್ ಸ್ವಾಂದೇನಹಳ್ಳಿ ಆಯೋಜಿಸಿದೆ. ಪ್ರಬಲ ಮಾಧ್ಯಮವಾಗಿರುವ ರಂಗಭೂಮಿ ನಡೆದು ಬಂದ ಹಾದಿ, ಪ್ರಸ್ತುತ ಸ್ಥಿತಿಗತಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ಹಾಸು ಹೊಕ್ಕಾಗಿರುವ ನಾಟಕಗಳ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿದರು. ರಂಗನಿರ್ದೇಶಕ ಅನುರಾಗ್ ಭೀಮಸಂದ್ರ ರಂಗಸಂದೇಶ ವಾಚಿಸಿದರು. ವೇದಿಕೆಯಲ್ಲಿ ರಂಗನಿರ್ದೇಶಕ ಕಾಂತರಾಜು ಕೌತುಮಾರನಹಳ್ಳಿ,ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶಿವಣ್ಣ, ಸುಗಮ ಸಂಗೀತ, ಜನಪದ ಗಾಯಕ ಕೆಂಕೆರೆ ಮಲ್ಲಿಕಾರ್ಜುನ್, ಯೋಗಾನಂದಕುಮಾರ್, ಕಾರ್ಯಕ್ರಮದ ಆಯೋಜಕ ಸ್ವಾಂದೇನಹಳ್ಳಿ ಸಿದ್ದರಾಜು, ಕಲಾವಿದರಾದ ಉದಯಕುಮಾರ್, ಜಗಣ್ಣ, ರಾಮಣ್ಣ, ಪುಟ್ಟರುದ್ರಯ್ಯ, ರಿಯಾಜ್, ತಬಲ ನರಸಿಂಹ ರಾಜು, ಡಿ.ಕುಮಾರ್ ಉಪಸ್ಥಿತಿದ್ದರು.ಹಿರಿಯ ಕಲಾವಿದರಿಂದ ರಂಗಗೀತೆಗಳ ಗಾಯನ ನಡೆಯಿತು.ರಂಗಸೊಗಡು ಕಲಾಟ್ರಸ್ಟ್ ಕಲಾವಿದರಿಂದ ಕಿರು ನಾಟಕ, ಗ್ರಾಮೀಣ ಕ್ರಿಯಾತ್ಮಕ ರಂಗತಂಡ(ರಿ) ತುಮಕೂರು ಅವರಿಂದ ಜಾಗೃತಿ ಗೀತೆಗಳ ಗಾಯನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!