ಕುಮಟಾ: ನಮ್ಮ ಪರಂಪರೆ, ಸಂಪ್ರದಾಯಗಳನ್ನು ಕಿರಿಯರಿಗೆ ಕಲಿಸದಿದ್ದರೆ ಆಚಾರ, ವಿಚಾರ ವ್ಯವಹಾರದಲ್ಲಿ ನಮ್ಮ ಅಸ್ಮಿತೆ ಉಳಿಯುವುದಿಲ್ಲ ಎಂದು ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಶೇಖರ ಉಪಾಧ್ಯಾಯ ತಿಳಿಸಿದರು.ಪಟ್ಟಣದ ಹವ್ಯಕ ಸಭಾಮಂಟಪದಲ್ಲಿ ಆಯೋಜಿಸಿದ್ದ ಹವ್ಯಕ ವಿದ್ಯಾವರ್ಧಕ ಸಂಘದ ೩೦ನೇ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ರಕರ್ತ ಜಿ.ಯು. ಭಟ್ ಹೊನ್ನಾವರ ಮಾತನಾಡಿ, ಹವ್ಯಕರು ಕ್ಷಮಾಗುಣ ಹಾಗೂ ಅತಿಥಿ ಸತ್ಕಾರಕ್ಕೆ ಹೆಸರಾದವರು. ಅದನ್ನು ಉಳಿಸಿಕೊಳ್ಳಬೇಕು ಎಂದರು. ಸನಾತನ ಸಂಸ್ಕಾರಗಳು ಎಂಬ ವಿಷಯದ ಕುರಿತು ಗೋಕರ್ಣ ಸಂಸ್ಕೃತ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಭಟ್ಟ ಉಪನ್ಯಾಸ ಮಾಡಿ, ಗರ್ಭದಿಂದ ದರ್ಭೆಗೆ ಹೋಗುವವರೆಗೆ ಮನುಷ್ಯನಿಗೆ ೪೦ ಸಂಸ್ಕಾರಗಳಿವೆ. ಅದರಲ್ಲಿ ೧೬ ಸಂಸ್ಕಾರಗಳು ಮುಖ್ಯ. ಅದು ಸಾಮಾನ್ಯ ಮಾನವನನ್ನು ಸಂಸ್ಕರಿಸಿ ವಿಶೇಷ ಮಾನವೀಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದರು. ಭದ್ರಾವತಿಯ ಸ್ತ್ರೀರೋಗ ತಜ್ಞೆ ಡಾ. ವೀಣಾ ಭಟ್ಟ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿ ಕುರಿತು ಮಾತನಾಡಿ, ದೇಹದ ಆರೋಗ್ಯಕ್ಕೆ ಪೌಷ್ಟಿಕ ಆಹಾರಕ್ಕಿಂತ ಶುದ್ಧ ನೀರು, ಶುದ್ಧ ಗಾಳಿ ಹಾಗೂ ಪ್ರಾಣಾಯಾಮ ಮುಖ್ಯ. ಪ್ರಕೃತಿದತ್ತ ಆಹಾರವೇ ಶ್ರೇಷ್ಠ ಎಂದರು.ಹವ್ಯಕ ಮಹಿಳಾ ವಿಭಾಗ ಸಂಘಟಿಸಿದ ಸ್ಪರ್ಧೆಗಳ ವಿಜೇತರಿಗೆ ಸಂಯೋಜಕರಾದ ವಸುಧಾ ಶಾಸ್ತ್ರಿ, ವಿದ್ಯಾ ಭಟ್ಟ, ಸಾವಿತ್ರಿ ಭಟ್ಟ ಇತರರು ಬಹುಮಾನ ವಿತರಿಸಿದರು.
ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತ ವಿದ್ಯಾಧರ ಅಡಿ, ಸಾಧಕ ವಿದ್ಯಾರ್ಥಿನಿಯರಾದ ಕೃತಿಕಾ ಭಟ್, ಸಿಂಚನಾ ಭಟ್, ದೀಪ್ತಿ ಪಂಡಿತ ಅವರನ್ನು ಸನ್ಮಾನಿಸಲಾಯಿತು.ಗೌರೀಶ ಯಾಜಿ ಮಾರ್ಗದರ್ಶನದಲ್ಲಿ ಗಂಧರ್ವ ಕಲಾ ಕೇಂದ್ರದಿಂದ ಭಜನ ಸಂಧ್ಯಾ ಹಾಗೂ ಕಲ್ಲಬ್ಬೆಯ ಶ್ರೀನಂದಿಕೇಶ್ವರ ಕಲಾ ಬಳಗದಿಂದ ಕಂಸವಧೆ ಯಕ್ಷಗಾನ ಆಖ್ಯಾನ ಪ್ರದರ್ಶನಗೊಂಡಿತು.ಸಂಘದ ಉಪಾಧ್ಯಕ್ಷ ಎಂ.ಎನ್. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಕಾಂತ ಭಟ್ಟ ತರಂಗ ಧನ್ಯವಾದ ಸಮರ್ಪಿಸಿದರು. ಸದಸ್ಯ ಮಧು ಹೆಗಡೆ, ಡಾ. ಪ್ರತಿಭಾ ಹೆಗಡೆ ನಿರೂಪಿಸಿದರು.ಇಂದು ವರಸಿದ್ಧಿ ಗಣಪತಿ ವರ್ಧಂತಿ ಉತ್ಸವ
ಹೊನ್ನಾವರ: ತಾಲೂಕಿನ ಅಳ್ಳಂಕಿಯ ವರಸಿದ್ಧಿ ಗಣಪತಿ ದೇವರ ತಾಂತ್ರಿಕ ವರ್ಧಂತಿ ಉತ್ಸವ ಫೆ. 12ರಂದು ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಟ್ಟೆ ಶಂಕರ ಭಟ್ಟ ಅವರ ಆಚಾರ್ಯತ್ವದಲ್ಲಿ ಬೆಳಗ್ಗೆ ದೇವತಾ ಪ್ರಾರ್ಥನೆ, ಶುದ್ಧಿಕರ್ಮ, ಪುಣ್ಯಾಹ, ಶಕ್ತಿಹೋಮ, ಶ್ರೀವಿದ್ಯಾ ಶಾಂತಿ, ಆವರಣ ದೇವತಾ ಪರಿವಾರ ಹೋಮ, ಮಧ್ಯಾಹ್ನ ಸಾಮೂಹಿಕ ಸತ್ಯನಾರಾಯಣ ವ್ರತ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ರಂಗಪೂಜೆ, ಮಹಾಬಲಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ಇತ್ಯಾದಿ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಶ್ರೀನಿಧಿ ಹೆಗಡೆ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಮತ್ತು ರಾತ್ರಿ 10ರಿಂದ ಶ್ರೀ ವರಸಿದ್ಧಿ ಸಾಂಸ್ಕೃತಿಕ ಯುವ ವೇದಿಕೆಯ ಆಶ್ರಯದಲ್ಲಿ ಶ್ರೀ ಮಾರ್ಕಂಡೇಶ್ವರ ನಾಟ್ಯ ಮಂಡಳಿಯವರಿಂದ ಹೆತ್ತವರ ಹಾಲು ವಿಷವಾಯಿತು ಎಂಬ ಸಾಮಾಜಿಕ ನಾಟಕದ ಪ್ರದರ್ಶನವಿದೆ ಎಂದು ತಿಳಿಸಿದ್ದಾರೆ.