ಮನುಕುಲದ ಉದ್ಧಾರಕ್ಕಾಗಿ ಹಿಂದೂ ಧರ್ಮ ಉಳಿಸಿ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

ಬಾಳೆಹೊನ್ನೂರು, ಜಗತ್ತಿನ ಮನುಕುಲದ ಉದ್ಧಾರಕ್ಕಾಗಿ ಸನಾತನ ಹಿಂದೂ ಧರ್ಮ ಉಳಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಹಿಂದೂ ಕೈಗೊಳ್ಳ ಬೇಕಿದೆ ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.

ದತ್ತ ಜಯಂತಿ ಧಾರ್ಮಿಕ ಸಭೆಯಲ್ಲಿ ಹಾರಿಕಾ ಮಂಜುನಾಥ್ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಜಗತ್ತಿನ ಮನುಕುಲದ ಉದ್ಧಾರಕ್ಕಾಗಿ ಸನಾತನ ಹಿಂದೂ ಧರ್ಮ ಉಳಿಸುವ ಸಂಕಲ್ಪವನ್ನು ಪ್ರತಿಯೊಬ್ಬ ಹಿಂದೂ ಕೈಗೊಳ್ಳ ಬೇಕಿದೆ ಎಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.ಪಟ್ಟಣದ ಜೇಸಿ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ದತ್ತ ಜಯಂತಿ, ದತ್ತಮಾಲಾ ಅಭಿಯಾನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ಧರ್ಮ ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ಮಕ್ಕಳು ತಯಾರಾಗಬೇಕಿದೆ. ನಮ್ಮ ಮಕ್ಕಳಿಗೆ ಧರ್ಮ ಬೋಧನೆ ಮಾಡಬೇಕಿದೆ. ಇದೇ ನಿಜವಾದ ಧರ್ಮ ಜಾಗೃತಿ ಯಾಗಿದ್ದು, ಹಿಂದೂ ಜಗತ್ತಿಗೆ ಏನು ಎಂದು ತೋರಿಸಿಕೊಡಬೇಕಿದೆ.

ಭಾರತದ ಪ್ರತಿ ಮನೆಯನ್ನೂ ಅಯೋಧ್ಯೆಯಾಗಿಸುವುದು ಸಂಘಟನೆ ಹಿರಿಯರ ಗುರಿ. ರಾಮ, ಸೀತೆ, ಲಕ್ಷ್ಮಣರ ಆದರ್ಶ ಪರಂಪರೆಗಳನ್ನು ಮನೆ ಮಂದಿಗೆ ತಿಳಿಸುವ ಗುರಿಯನ್ನು ಹೊಂದಲಾಗಿದೆ. ಧರ್ಮ ಜಾಗೃತಿ ಮನೆ ಮನೆಯಿಂದ ಆರಂಭವಾಗಬೇಕಿದ್ದು, ಮನೆಗಳಲ್ಲಿ ರಾಮರ ಭಕ್ತಿ ಹರಿದರೆ ಅವರು ನಮಗೆ ಶಕ್ತಿ ತುಂಬಲಿದ್ದಾರೆ.ಪ್ರತಿಯೊಬ್ಬ ಹಿಂದೂ ಜಾಗೃತರಾಗಬೇಕಿದೆ. ಇಲ್ಲದಿದ್ದರೆ ಬಾಂಗ್ಲಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಭಾರತ ಸುರಕ್ಷಿತ ವಾಗಿರಬೇಕು ಎಂದರೆ ಸನಾತನ ಹಿಂದೂ ಧರ್ಮದ ಸಂರಕ್ಷಣೆ ಅಗತ್ಯ. ಹಿಂದೂಗಳು ಸಂಘಟಿತರಾಗಬೇಕಿದೆ. ಜಾತಿ, ರಾಜಕೀಯ, ಆಸ್ತಿ ಅಂತಸ್ತು ತೊರೆದಾಗ ಮಾತ್ರ ಧರ್ಮ ಸಂರಕ್ಷಣೆ ಸಾಧ್ಯವಿದೆ ಎಂದರು.ಎಷ್ಟೋ ಹಿಂದೂಗಳಿಗೆ ದತ್ತಪೀಠ ಹಾಗೂ ಹಿಂದುತ್ವದ ಪರಿಕಲ್ಪನೆಯೇ ಇಲ್ಲದ ದಿನಗಳಲ್ಲಿ ಸಂಘಟನೆ ಹಿರಿಯರು ದತ್ತಪೀಠದ ಹೋರಾಟ ಆರಂಭಿಸಿದ್ದು, ಆ ಹೋರಾಟದ ಫಲವಾಗಿ ಇಂದು ದತ್ತಪೀಠದಲ್ಲಿ ಹಿಂದೂಗಳಿಗೆ ಪೂಜೆ ಅವಕಾಶ ಲಭಿಸಿದೆ. ಹಿರಿಯರ ಶ್ರಮವನ್ನು ನಾವು ನೆನೆಯಬೇಕಿದೆ ಎಂದರು.ಬಜರಂಗದಳ ಹಾಸನ ವಿಭಾಗ ಸಂಯೋಜಕ ಶಶಾಂಕ್ ಹೇರೂರು ಮಾತನಾಡಿ, ಅಯೋಧ್ಯೆ ರಾಮಮಂದಿರದ ಹೋರಾಟದ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು ಸಂಘಟನೆಯ ಹಿರಿಯರು ಆರಂಭಿಸಿದ್ದು, ಪ್ರಸ್ತುತ ವರ್ಷಕ್ಕೆ ದತ್ತಜಯಂತಿ, ದತ್ತ ಮಾಲಾ ಅಭಿಯಾನ 25ನೇ ವರ್ಷದಲ್ಲಿ ಮುನ್ನಡೆಯುತ್ತಿದೆ.ದತ್ತಪೀಠಕ್ಕಾಗಿ ಸಂಘಟನೆ ಹಿರಿಯರು ಅನೇಕ ಕೇಸುಗಳನ್ನು ತಮ್ಮ ಮೇಲೆ ಹಾಕಿಸಿಕೊಂಡು, ಲಾಠಿ ಏಟುಗಳನ್ನು ತಿಂದು ಹಿಂದೂಗಳಿಗಾಗಿ ದತ್ತಪೀಠ ಪಡೆಯಲು ಶ್ರಮಿಸಿದ್ದಾರೆ. ದತ್ತಾತ್ರೇಯರು ತಪಸ್ಸು ಮಾಡಿದ ದತ್ತಪೀಠದ ಮಹಿಮೆ ಅಪಾರ ವಾಗಿದ್ದು, ಪವಿತ್ರ ಸ್ಥಳ. ಅದು ಸಮಸ್ತ ಹಿಂದೂ ಸಮಾಜದ ಆಸ್ತಿ, ಸಂಘಟನೆ ಕೇವಲ ದತ್ತ ಪೀಠದ ಹೋರಾಟದ ನೇತೃತ್ವ ವಹಿಸಿದೆ. ಈಗಾಗಲೇ ಕಾನೂನಾತ್ಮಕವಾಗಿ ದತ್ತಪೀಠದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಪೂಜಾ ವಿಧಿಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಗೋರಿಗಳನ್ನು ತೆರವು ಗೊಳಿಸಬೇಕು. ಇಲ್ಲದಿದ್ದರೆ ಅದನ್ನು ಹಿಂದೂಗಳೇ ತೆರವುಗೊಳಿಸಲಿದ್ದಾರೆ ಎಂದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಿಂದ ರೋಟರಿ ವೃತ್ತದವರೆಗೆ ದತ್ತಾತ್ರೇಯ ವಿಗ್ರಹ ದೊಂದಿಗೆ ಬೃಹತ್ ಶೋಭಾಯಾತ್ರೆ ನಡೆಸಲಾಯಿತು. ಪಶು ವೈದ್ಯಾಧಿಕಾರಿ ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು. ಪುಟಾಣಿ ಮಕ್ಕಳಿಗೆ ಹಿಂದೂ ದೇವರುಗಳ ಛದ್ಮ ವೇಷ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.ಮಾರಿಕಾಂಬ ದೇವಸ್ಥಾನದ ದರ್ಶನಪಾತ್ರಿ ಶ್ರೀಕಾಂತ್ ದೊಡ್ಮನೆ, ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಸಿ.ಉಮೇಶ್, ಬಜರಂಗದಳ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್, ಮಾತೃಶಕ್ತಿ ಸಂಯೋಜಕಿ ಪ್ರೇಮಾ ರವೀಂದ್ರ, ದುರ್ಗಾವಾಹಿನಿ ತಾಲೂಕು ಸಂಯೋಜಕಿ ತುಳಸಿ, ಬಜರಂಗದಳ ಪ್ರಖಂಡ ಸಂಯೋಜಕ ಅಣ್ಣಪ್ಪ ಹೇರೂರು, ಸಂದೀಪ್‌ಶೆಟ್ಟಿ, ಬಿ.ಜಗದೀಶ್ಚಂದ್ರ, ಮಂಜುನಾಥಶೆಟ್ಟಿ ಮತ್ತಿತರರು ಹಾಜರಿದ್ದರು.೧೩ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಬಜರಂಗದಳ, ವಿಎಚ್‌ಪಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಟ್ಟದ ಪಶು ಆಸ್ಪತ್ರೆ ವೈದ್ಯಾಧಿಕಾರಿ ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು. ಹಾರಿಕಾ, ಶಶಾಂಕ್, ಶ್ರೀಕಾಂತ್, ಉಮೇಶ್, ಅಜಿತ್, ಪ್ರೇಮಾ ಇದ್ದರು.

Share this article