
ಕಾರವಾರ: ನಗರದ ಏಕೈಕ ಸಾರ್ವಜನಿಕ ಕಡಲ ತೀರವಾಗಿರುವ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಬಂದರು ಅಭಿವೃದ್ಧಿ ನಡೆಸಬಾರದು. ಈಗಿರುವಂತೆಯೇ ನಿಸರ್ಗದತ್ತವಾಗಿ ಕಡಲ ತೀರವನ್ನು ಉಳಿಸಬೇಕು ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಆಗ್ರಹಿಸಿದ್ದಾರೆ.
ಈ ಹಿಂದೆ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಅವೈಜ್ಞಾನಿಕವಾಗಿ ಬಂದರು ಅಭಿವೃದ್ಧಿಗೆ ಮುಂದಾದಾಗ, ಸಾರ್ವಜನಿಕರು ಹಾಗೂ ಮೀನುಗಾರರು ಒಗ್ಗೂಡಿ ಹೋರಾಟ ನಡೆಸಿ ಕಾಮಗಾರಿಯನ್ನು ನಿಲ್ಲಿಸಿದ್ದರು. ಆ ಸಂಬಂಧಿತ ಪ್ರಕರಣವು ಇನ್ನೂ ಉಚ್ಚ ನ್ಯಾಯಾಲಯದ ವಿಚಾರಣೆಯಲ್ಲಿದೆ. ಇಷ್ಟರಲ್ಲೇ ಮತ್ತೆ ಬಂದರು ಅಭಿವೃದ್ಧಿಗೆ ಮುಂದಾಗುತ್ತೇವೆ ಎಂಬ ಬಂದರು ಇಲಾಖೆ ಅಧಿಕಾರಿಗಳ ಹೇಳಿಕೆ ಮೀನುಗಾರ ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದು ಮಾಂಗ್ರೆ ಹೇಳಿದರು.
ಠಾಗೋರ್ ಕಡಲತೀರ ಕೇವಲ ಮೀನುಗಾರರಿಗೆ ಮಾತ್ರವಲ್ಲದೆ ಪ್ರವಾಸಿಗರಿಗೂ ಅತ್ಯಂತ ಮೆಚ್ಚಿನ ತಾಣವಾಗಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವ ಈ ಕಡಲ ತೀರಕ್ಕೆ, ಚಂಡಮಾರುತದ ಸಂದರ್ಭಗಳಲ್ಲಿ ಬೇರೆ ಭಾಗಗಳಿಂದ ಬೋಟ್‌ಗಳು ಸುರಕ್ಷಿತ ಆಶ್ರಯಕ್ಕಾಗಿ ಬರುತ್ತವೆ ಎಂದು ಅವರು ವಿವರಿಸಿದರು.ಇಂತಹ ಮಹತ್ವದ ಕಡಲತೀರವನ್ನು ಉಳಿಸುವ ಬದಲು, ₹125 ಕೋಟಿ ವೆಚ್ಚದಲ್ಲಿ ಕಲ್ಲು ಹಾಕಿ ಸಂರಕ್ಷಣೆ ಮಾಡುತ್ತೇವೆ ಎನ್ನುವುದು ಅಸಮಂಜಸ ಮತ್ತು ಅಜ್ಞಾನಪೂರ್ಣ ಹೇಳಿಕೆ ಎಂದು ಅವರು ತೀವ್ರವಾಗಿ ಟೀಕಿಸಿದರು. ಭಾವಟೆಕಟ್ಟೆಯ ಒಳಭಾಗದಲ್ಲಿ, ಬಂದರು ಇಲಾಖೆ ವ್ಯಾಪ್ತಿಯಲ್ಲಿ ಬೇಕಿದ್ದರೆ ಯಾವುದೇ ಕೆಲಸ ಮಾಡಲಿ. ಆದರೆ ಸಾರ್ವಜನಿಕರ ಕಡಲ ತೀರಕ್ಕೆ ಕೈಹಾಕುವುದನ್ನು ನಾವು ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಒಂದೊಮ್ಮೆ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಕಲ್ಲು ಹಾಕಿ ಕಾಮಗಾರಿಗೆ ಮುಂದಾದರೆ, ಇಡೀ ಜಿಲ್ಲೆಯ ಮೀನುಗಾರರನ್ನು ಒಗ್ಗೂಡಿಸಿ ಬದುಕಿನ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಗಣಪತಿ ಮಾಂಗ್ರೆ ಎಚ್ಚರಿಕೆ ನೀಡಿದರು.ಗೌರೀಶ್ ಉಳ್ವೇಕರ್, ಚೇತನ್ ಹರಿಕಂತ್ರ, ವಾಮನ್ ಹರಿಕಂತ್ರ, ಚಂದ್ರಕಾಂತ್ ಹರಿಕಂತ್ರ, ವಿಠಲ್ ಹರಿಕಂತ್ರ, ರಾಜೇಶ್ ಮಾಜಾಳಿಕರ್, ಪ್ರಕಾಶ್ ಹರಿಕಂತ್ರ, ಸೂರಜ್ ಕುರ್ಮಕರ್, ವಿಠಲ್ ಬಾನಾವಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.