ಕನ್ನಡಪ್ರಭ ವಾರ್ತೆ ಹಿರಿಯೂರು
ನಗರಸಭೆ ವ್ಯಾಪ್ತಿಯಲ್ಲಿ ನಗರ ಯೋಜನೆ ಅನುಮೋದಿತ ಬಡಾವಣೆ ನಕ್ಷೆಯಲ್ಲಿರುವ ರಸ್ತೆ ಮತ್ತು ಉದ್ಯಾನವನ ಜಾಗಗಳನ್ನು ನಗರ ಯೋಜನೆ ಪ್ರಾಧಿಕಾರದಿಂದ ನಿಖರವಾಗಿ ಅಳತೆ ಮಾಡಿಸಿ ನಗರಸಭೆ ವಶಕ್ಕೆ ಪಡೆಯಬೇಕೆಂದು ನಾಗರೀಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಎಸ್.ವಿ.ರಂಗನಾಥ್ ನಗರಸಭೆ ಕಚೇರಿಗೆ ಮನವಿ ಮಾಡಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಹಲವು ಬಡಾವಣೆಗಳಲ್ಲಿ ನಗರ ಯೋಜನೆ ಅನುಮೋದಿತ ನಕ್ಷೆಗಳಲ್ಲಿ ತೋರಿಸಿದ ಉದ್ಯಾನವನ ಜಾಗಗಳನ್ನು ಹಾಗೂ ರಸ್ತೆಗಳನ್ನು ಕಣ್ಮರೆ ಮಾಡಿದ್ದಾರೆ. ಪ್ರಯುಕ್ತ ತಪ್ಪಿತಸ್ಥ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ರಸ್ತೆ ಮತ್ತು ಉದ್ಯಾನವನ ಜಾಗಗಳನ್ನು ನಗರಸಭೆ ವಶಕ್ಕೆ ಪಡೆದು ಸರ್ಕಾರಿ ಜಾಗ ಕಾಪಾಡಬೇಕು. ಆ ಮೂಲಕ ನಗರದ ನಾಗರೀಕರಿಗೆ ಸ್ವಚ್ಛ ಪ್ರಾಮಾಣಿಕ, ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿ ಮಾಡಬೇಕು.
ವೇದಾವತಿ ನಗರದ 3ನೇ ವಾರ್ಡ್‌ನಲ್ಲಿ ಬರುವ ಬಬ್ಬೂರು ಸರ್ವೇ.ನಂ.39 ಮತ್ತು 40ರ ಮಧ್ಯದಲ್ಲಿ ಬರುವ 7 ಬಡಾವಣೆ ನಕ್ಷೆಯಲ್ಲಿರುವ ರಸ್ತೆ ಮತ್ತು ಉದ್ಯಾನವನ ಜಾಗಗಳನ್ನು ಈಗಾಗಲೇ ಒತ್ತುವರಿ ಮಾಡಿದ್ದು, ಒತ್ತುವರಿ ತೆರವು ಮಾಡಿಸಿಕೊಡಬೇಕುಇ ಎಂದು ಜಿಲ್ಲಾಧಿಕಾರಿಗಳ ಆದೇಶ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಲೋಕೋಪಯೋಗಿ ಸಚಿವರು, ಮುಖ್ಯಮಂತ್ರಿಗಳು ಪತ್ರ ಬರೆದಿದ್ದರೂ ಸಹ ಇಲ್ಲಿಯತನಕ ಕಾನೂನು ಬದ್ಧ ರಸ್ತೆ ಬಿಡಿಸಿಕೊಡಲು ನಗಸಭೆ ಅಧಿಕಾರಿಗಳಿಗೆ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ನಗರಸಭೆ ಅಧಿಕಾರಿಗಳೇ ವಿವರಿಸಬೇಕು. ಕರ್ನಾಟಕ ಉಪ ಲೋಕಾಯುಕ್ತ ಅಧಿಕಾರಿಗಳು ಜ.16 ರೊಳಗೆ 3ನೇ ವಾರ್ಡ್ ಉಪ್ಪಾರ ಸಂಘದ ಕಚೇರಿ ಸಂಪರ್ಕ ರಸ್ತೆ ಒತ್ತುವರಿ ತೆರವು ಮಾಡಿಸಿ ರಸ್ತೆ ಮಾಡಿಕೊಡಲು ಅಂತಿಮ ಗಡುವು ನೀಡಿದ್ದರೂ ಕೂಡ ನಗರಸಭೆ ಅಧಿಕಾರಿಗಳು ಮಾತ್ರ ಯಾವ ಆದೇಶಕ್ಕೂ ಬೆಲೆ ಕೊಡದೆ ವಿಳಂಬ ಮಾಡುತ್ತಿದ್ದಾರೆ.ಸರ್ಕಾರಕ್ಕೆ ಜನರ ಮೂಲಭೂತ ಸೌಲಭ್ಯಗಳನ್ನು ಈಡೇರಿಸುವ ಕಾಳಜಿ ಇದ್ದದ್ದೇ ಆದರೆ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಚಂದ್ರಾ ಲೇಔಟ್, ಡಾಗ್ ಸರ್ಕಲ್ ರಸ್ತೆ ಒತ್ತುವರಿ ತೆರವು ಮಾಡಿಸಿ ರಸ್ತೆ ಮಾಡಿಸಿ ಕೊಡಬೇಕು ಎಂದು ಅವರು ಕಿಡಿಕಾರಿದ್ದಾರೆ.