ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ರೈತರನ್ನು ಉಳಿಸಿ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Nov 29, 2025, 12:45 AM IST
28ಎಚ್‌ವಿಆರ್6- | Kannada Prabha

ಸಾರಾಂಶ

ಮುಖ್ಯಮಂತ್ರಿಗಳೇ ನಿಮ್ಮನ್ನು ಕುರ್ಚಿಯಲ್ಲಿ ಕೂಡಿಸಿದ ರೈತರ ಬದುಕು ಸಂಕಷ್ಟದಲ್ಲಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ, ₹3000 ಬೆಂಬಲ ಬೆಲೆ ನಿಗದಿ ಮಾಡಿ ರೈತರನ್ನು ಉಳಿಸುವ ಕೆಲಸ ಮಾಡಬೇಕು. ಬೇಕಾದರೆ ಕುರ್ಚಿ ವ್ಯವಹಾರ ಆ ಮೇಲೆ ಮಾಡಿಕೊಳ್ಳಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಹಾವೇರಿ: ಮುಖ್ಯಮಂತ್ರಿಗಳೇ ನಿಮ್ಮನ್ನು ಕುರ್ಚಿಯಲ್ಲಿ ಕೂಡಿಸಿದ ರೈತರ ಬದುಕು ಸಂಕಷ್ಟದಲ್ಲಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ, ₹ 3000 ಬೆಂಬಲ ಬೆಲೆ ನಿಗದಿ ಮಾಡಿ ರೈತರನ್ನು ಉಳಿಸುವ ಕೆಲಸ ಮಾಡಬೇಕು. ಬೇಕಾದರೆ ಕುರ್ಚಿ ವ್ಯವಹಾರ ಆ ಮೇಲೆ ಮಾಡಿಕೊಳ್ಳಿ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಎದುರು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ರೈತ ಮುಖಂಡರು ಕಳೆದ ಐದು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ರೈತರ ಮನವಿ ಸ್ವೀಕರಿಸಿ ಮಾತನಾಡಿದರು.

ರೈತರು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಹೋರಾಟ ನಡೆಸಿದ್ದೀರಿ, ಈ ಸರ್ಕಾರ ಚಾಟಿ ಏಟಿಗೆ ಅಷ್ಟೆ ಸ್ಪಂದನೆ ಮಾಡುತ್ತದೆ. ಮನವಿ ಕೊಟ್ಟರೆ ಸ್ಪಂದಿಸಲ್ಲ. ಕಬ್ಬಿನ ಬೆಲೆಗೆ ರೈತರು ಹೋರಾಟ ಮಾಡುವವರೆಗೂ ದರ ನೀಡಲಿಲ್ಲ. ನಾನೇ ಸಿಎಂ ಆಗಿದ್ದಾಗ ಎಸ್‌ಎಪಿ ಕಾಯಿದೆ ತಂದಿದ್ದೇನೆ. ರೈತರಿಗೆ ಎಷ್ಟು, ಕಾರ್ಖಾನೆಗಳಿಗೆ ಎಷ್ಟು ಪಾಲು ಎಂದು ಸ್ಪಷ್ಟವಾಗಿದೆ. ಅದನ್ನು ನೋಡದೇ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಿದರು. ಕೇಂದ್ರ ಸರ್ಕಾರ ದರ ಕಡಿಮೆಯಾದರೆ ಎಂಎಸ್‌ಪಿ ಮೂಲಕ ಆಗಿನ ದರ ಕೇಂದ್ರ ಸರ್ಕಾರ ಕೊಡುತ್ತದೆ. ಎಂಎಸ್‌ಪಿ ಕಾನೂನಿನಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಅದರ ಮೂಲಕ ಸಹಾಯ ಮಾಡಿ, ಕುಂಟು ನೆಪ ಯಾಕೆ ಹೇಳುತ್ತೀರಿ, ನಾನೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಸ್ಪಂದಿಸುವಂತೆ ಮನವಿ ಮಾಡುತ್ತೇನೆ. ನಾವು ಯಾವಾಗಲೂ ರೈತರ ಪರವಾಗಿ ನಿಲ್ಲುತ್ತೇವೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. 10 ಲಕ್ಷ ಮೆಟ್ರಿಕ್ ಟನ್ ಖರೀದಿಸುವುದಾಗಿ ಆದೇಶ ಮಾಡಿದ್ದಾರೆ. ನೆಪ ಹೇಳದೇ 10 ಲಕ್ಷ ಮೆಟ್ರಿಕ್ ಟನ್ ರೈತರಿಂದ ನೇರವಾಗಿ ಖರೀದಿ ಮಾಡಲಿ ಎಂದರು.

ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಸಿಎಂಗೆ ಪತ್ರ ಬರೆದಿದ್ದೇನೆ. ಅವರು ಖರೀದಿಸಲು ಆದೇಶ ಮಾಡಿದ್ದಾರೆ. ಆದರೆ, ಯಾವ ಏಜೆನ್ಸಿಯಿಂದ ಖರೀದಿ ಮಾಡುತ್ತಾರೆ ಎಂದು ತಿಳಿಸುತ್ತಿಲ್ಲ. ಮಾರ್ಕೆಟಿಂಗ್ ಫೆಡರೇಷನ್‌ಗೆ ದುಡ್ಡು ಕೊಟ್ಟು ಖರೀದಿಗೆ ಸೂಚನೆ ನೀಡಿದರೆ ಅವರು ಖರೀದಿ ಆರಂಭಿಸುತ್ತಾರೆ. ರೈತರ ಸಾಲಗಳಿಗೆ ಸಿಬಿಲ್ ಅನ್ವಯಿಸದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಸಂದನೆ ದೊರೆಯಲಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮೆಕ್ಕೆಜೋಳಕ್ಕೆ ₹3000, ದರ ನಿಗದಿ, ಖರೀದಿ ಕೇಂದ್ರ ಆರಂಭ, ಬೆಳೆ ವಿಮೆ, ಬೆಳೆ ಹಾನಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ 5 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಹಗುರವಾಗಿ ಪರಿಗಣಿಸದೇ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಲಿಂಗರಾಜ ಚಪ್ಪರದಹಳ್ಳಿ, ಎಂಎಲ್ಸಿ ಹೇಮಲತಾ ನಾಯ್ಕ, ಗಿರೀಶ ತುಪ್ಪದ, ಸಿದ್ದರಾಜ ಕಲಕೋಟಿ, ರೈತ ಮುಖಂಡರಾದ ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಶಂಕರಪ್ಪ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ, ಸುರೇಶ ಛಲವಾದಿ, ಮುತ್ತಪ್ಪ ಗುಡಗೇರಿ, ಶಿವಯೋಗಿ ಹೊಸಗೌಡ್ರ, ಅಡಿವೆಪ್ಪ ಆಲದಕಟ್ಟಿ, ರಾಜು ತರ್ಲಘಟ್ಟ, ಪ್ರಭುಗೌಡ ಪ್ಯಾಟಿ, ರುದ್ರಗೌಡ ಕಾಡನಗೌಡ್ರ, ಈರಣ್ಣ ಚಕ್ರಸಾಲಿ ಸೇರಿದಂತೆ ಇತರರು ಇದ್ದರು. ಬೇಡ್ತಿ-ವರದಾ ನದಿ ಜೋಡಣೆಗೆ ಸಕಾರಾತ್ಮಕ ಸ್ಪಂದನೆ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿಗೆ ನಾವು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡಿದ್ದೇವೆ. ಈಗ ಕೇಂದ್ರ ಸರ್ಕಾರ ಆಸಕ್ತಿ ತೆಗೆದುಕೊಂಡು ಡಿಪಿಆರ್ ಮಾಡಲು ಅನುಮತಿ ನೀಡಿದೆ. ರಾಜ್ಯ ಸರ್ಕಾರ ಡಿಪಿಆರ್ ಸಿದ್ಧತೆಗೆ ಕ್ರಮ ಕೈಗೊಳ್ಳುತ್ತಿದೆ. ಡಿಪಿಆರ್ ಕೇಂದ್ರಕ್ಕೆ ಹೋದ ತಕ್ಷಣ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾರೋ ನಾಲ್ಕು ಜನ ಬಂದು ಮನವಿ ಕೊಟ್ಟರೆ ಸಿಎಂ ಸ್ಪಂದಿಸಬಾರದು ಎಂದು ಮನವಿ ಮಾಡಿದರು. ಪೆಟ್ರೋಲ್‌ಗೆ ಎಥೆನಾಲ್‌ ಅನ್ನು ಶೇ. 20ರಷ್ಟು ಸೇರಿಸಬೇಕೆನ್ನುವುದು ಕೇಂದ್ರದ ನೀತಿ. ಇವರಿಗೆ ಎಷ್ಟು ಕಾರ್ಖಾನೆ ತೆರೆಯಬೇಕು ಎನ್ನುವುದು ಗೊತ್ತಿಲ್ಲ. ಕಾರ್ಖಾನೆ ಮಾಲಿಕರ ಪರವಾಗಿ ಮಾತನಾಡುತ್ತಾರೆ. ಏಜೆಂಟರಿಂದ ಖರೀದಿ ಮಾಡುತ್ತಿದ್ದಾರೆ. ಕರ್ನಾಟಕದ 19 ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಸಾಧ್ಯತೆ ಇದೆ. ಮೆಕ್ಕೆಜೋಳದ ಖರೀದಿ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳುವವರೆಗೂ ವಿಧಾನ ಮಂಡಲದಲ್ಲಿ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರ ಸೇವೆ ಮುಂದುವರಿಸಲು ಆಗ್ರಹಿಸಿ ಪ್ರತಿಭಟನೆ
ಪ್ರಾದೇಶಿಕತೆ-ರಾಷ್ಟ್ರೀಯತೆ ಹೆಸರಿನಲ್ಲಿ ಸಂಘರ್ಷ ಬೇಡ: ದಿವ್ಯಾ ಹೆಗಡೆ ಕಬ್ಬಿನಗದ್ದೆ