ಹೊಸಕೆರೆ ಗ್ರಾಮದ ಗೋಮಾಳ ಜಮೀನನ್ನು ರೈತರಿಗೆ ಉಳಿಸಿಕೊಡಿ

KannadaprabhaNewsNetwork |  
Published : Jul 09, 2025, 12:19 AM IST
ಚಿತ್ರ 2 | Kannada Prabha

ಸಾರಾಂಶ

ತಹಸೀಲ್ದಾರ್ ರಾಜೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಅವರ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಹಸೀಲ್ದಾರ್ ಕಚೇರಿ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಹೊಸಕೆರೆ ಗ್ರಾಮದಲ್ಲಿನ ಗೋಮಾಳ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಯಾವುದೋ ಕಂಪನಿಗೆ ನೀಡುವುದನ್ನು ರದ್ದುಪಡಿಸಬೇಕು. ತಹಸೀಲ್ದಾರ್ ರಾಜೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಅವರ ಅವಧಿಯಲ್ಲಿ ಕಂದಾಯ ಇಲಾಖೆಯಲ್ಲಿ ನಡೆದಿರುವ ಎಲ್ಲಾ ಹಗರಣಗಳ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಹಸೀಲ್ದಾರ್ ಕಚೇರಿ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಈಗಾಗಲೇ ಅಲ್ಲಿನ ಗೋಮಾಳದಲ್ಲಿ ಹತ್ತು ಎಕರೆ ಜಾಗದಲ್ಲಿ 220 ಕೆವಿ ಸ್ಟೇಷನ್ ಇದ್ದು ಇದಕ್ಕೆ ಹೊಂದಿಕೊಂಡಂತೆ ನೂರು ಎಕರೆ ಸರ್ಕಾರಿ ಗೋಮಾಳವಿದೆ. ಇದನ್ನು ಸಹ ಸರ್ಕಾರಕ್ಕೆ ವಶಪಡಿಸಿಕೊಂಡು ಸೋಲಾರ್ ಕಂಪನಿಗೆ ನೀಡುವ ಹುನ್ನಾರ ನಡೆದಿದೆ. ಅಲ್ಲಿ ವಾಸ ಮಾಡುವ ರೈತರ ದನಕರು, ಕುರಿಮೇಕೆಗಳ ಮೇವಿಗೆ ಮತ್ತು ನಿರಾಶ್ರಿತರಿಗೆ ಮನೆ ನಿರ್ಮಾಣದಂತಹ ಸರ್ಕಾರದ ಕಾರ್ಯಕ್ರಮಗಳಿಗೆ ಆ ಭೂಮಿ ಬಳಸಬೇಕಾಗಿದೆ ಎಂದು ರೈತ ಮುಖಂಡರು ಹೇಳಿದರು.

ಗ್ರಾಮಸ್ಥರು ಹಾಗೂ ರೈತ ಸಂಘಟನೆ ವತಿಯಿಂದ ಈ ಭೂಮಿಯನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಲು ಶಿಫಾರಸು ಮಾಡಬಾರದು ಎಂದು ಅರ್ಜಿ ನೀಡಿದರೂ ತಹಸೀಲ್ದಾರ್ ಅವರು ಭೂಮಿ ವಶಪಡಿಸಿಕೊಳ್ಳಲು ಶಿಫಾರಸು ಮಾಡಿದ್ದಾರೆ. ಇನ್ನೂ ಮೂರ್ನಾಲ್ಕು ಕಡೆ ಸರ್ಕಾರಿ ಭೂಮಿಯನ್ನು ಕೆಪಿಟಿಸಿಎಲ್‌ನವರಿಗೆ ಕೊಡುವ ಹುನ್ನಾರ ನಡೆದಿದೆ. ಕೂಡಲೇ ಈ ಆದೇಶವನ್ನು ವಾಪಸ್ ಪಡೆದು ಗ್ರಾಮದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಸಿದ್ದರಾಮಣ್ಣ, ಹೊಸಕೆರೆ ಗ್ರಾಮದ ಜಯಣ್ಣ, ಜಗದೀಶ್,ನಾರಾಯಣಪ್ಪ, ರಘುನಾಥ್ ಗೌಡ, ಧನಂಜಯ, ಪುಟ್ಟರಾಜ, ಲಕ್ಷ್ಮಿಪತಿ, ಶಿವಣ್ಣ, ಗಿರೀಶ್, ಸತೀಶ, ತಿಪ್ಪೇಸ್ವಾಮಿ, ಸಣ್ಣೀರಪ್ಪ, ಪುಟ್ಟಯ್ಯ, ಮಲ್ಲಿಕಾರ್ಜುನ, ಜೆಸಿಬಿ ರಘುನಾಥ್, ಶಿವಮೂರ್ತಿ, ಸುರೇಶ್, ಜಲ್ದಿರಪ್ಪ, ರಮೇಶ್, ತಿಮ್ಮಾರೆಡ್ಡಿ, ರಂಗಸ್ವಾಮಿ, ತಿಮ್ಮರಾಯ, ರಂಗಪ್ಪ ಮುಂತಾದವರು ಹಾಜರಿದ್ದರು.

ಕಂದಾಯ ಇಲಾಖೆ ಅಕ್ರಮಗಳ ತನಿಖೆಯಾಗಲಿ

ಕಂದಾಯ ಇಲಾಖೆಯಲ್ಲಿ ಬಹಳಷ್ಟು ಹಗರಣಗಳು ನಡೆದಿರುವ ಬಗ್ಗೆ ಅನೇಕ ಬಾರಿ ದೂರು ನೀಡಲಾಗಿದ್ದು ಅಧಿಕಾರಿಗಳು ಹಣ ಸ್ವೀಕರಿಸುವ ದೃಶ್ಯವನ್ನು ತಹಸೀಲ್ದಾರ್ ರವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲಾಖೆಯ ಎಲ್ಲಾ ಕಡೆಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ಲಂಚ ಕೊಡದೆ ಯಾವ ಕೆಲಸವೂ ಆಗುತ್ತಿಲ್ಲ. ಹಾಗಾಗಿ ಈ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸಸ್ಥ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು