ಕ್ರೀಡಾಂಗಣ ಉಳಿಸಿ ನಿವೇಶನ ಸ್ಥಳಾಂತರ: ರಾಜೇಗೌಡ

KannadaprabhaNewsNetwork | Published : May 28, 2024 1:17 AM

ಸಾರಾಂಶ

ಬಾಳೆಹೊನ್ನೂರು, ಪಟ್ಟಣದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರ ನಗರದ ಕ್ರೀಡಾಂಗಣದ ಬಳಿ ಬನ್ನೂರು ಗ್ರಾಪಂ ವ್ಯಾಪ್ತಿಯ ಬಂಡಿ ಮಠದ ಪ್ರವಾಹ ಸಂತ್ರಸ್ತರಿಗೆ ನಿವೇಶನ ನೀಡದೆ ಬೇರೆ ಕಡೆಯಲ್ಲಿ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಬೇರೆ ಕಡೆಯಲ್ಲಿ ನಿವೇಶನ ನೀಡಲು ಕ್ರಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರ ನಗರದ ಕ್ರೀಡಾಂಗಣದ ಬಳಿ ಬನ್ನೂರು ಗ್ರಾಪಂ ವ್ಯಾಪ್ತಿಯ ಬಂಡಿ ಮಠದ ಪ್ರವಾಹ ಸಂತ್ರಸ್ತರಿಗೆ ನಿವೇಶನ ನೀಡದೆ ಬೇರೆ ಕಡೆಯಲ್ಲಿ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸಮೀಪದ ಅಕ್ಷರನಗರದ ಕ್ರೀಡಾಂಗಣಕ್ಕೆ ಭಾನುವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಿಮಠದಲ್ಲಿನ ಪ್ರವಾಹ ಸಂತ್ರಸ್ತರು ಹಾಗೂ ಭದ್ರಾ ಸೇತುವೆ ನಿರ್ಮಾಣದಿಂದ ಮನೆ ಕಳೆದುಕೊಳ್ಳುವ ಗ್ರಾಮಸ್ಥರಿಗೆ ಬಿ.ಕಣಬೂರು ಗ್ರಾಮದ ಅಕ್ಷರನಗರದ ಕ್ರೀಡಾಂಗಣದ ಬಳಿ ನಿವೇಶನ ನೀಡಲು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಆದರೆ ಸ್ಥಳೀಯ ಯುವಕರು, ಗ್ರಾಮಸ್ಥರು ಕ್ರೀಡಾಂಗಣದ ಬಳಿಯಲ್ಲಿ ನಿವೇಶನ ನೀಡಲು ವಿರೋಧ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದ್ದು ಸ್ಥಳೀಯವಾಗಿ ಯುವಕರಿಗೆ ಕ್ರೀಡಾಂಗಣದ ಕೊರತೆ ಇರುವುದು, ಯುವಕರ ವಿರೋಧದ ವಾಸ್ತವತೆ ಅರಿವಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ಉಳಿಸಿ ಇದೇ ಗ್ರಾಮದಲ್ಲಿ ಇರುವ ಕಂದಾಯ ಭೂಮಿಯನ್ನು ಸಂತ್ರಸ್ತರಿಗೆ ನಿವೇಶನಕ್ಕೆ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಕ್ರೀಡಾಂಗಣದ ಜಾಗದಲ್ಲಿ ನಿವೇಶನ ನೀಡುವುದಿಲ್ಲ. ಕ್ರೀಡಾಂಗಣ ಉಳಿಸಲು ಬದ್ಧನಿರುವುದಾಗಿ ತಿಳಿಸಿದರು.

ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್, ಬಿ.ಕೆ.ಮಧುಸೂದನ್, ಮಾಜಿ ಅಧ್ಯಕ್ಷ ಜಾನ್ ಡಿಸೋಜಾ, ಗ್ರಾಮಸ್ಥರಾದ ಸಾನಿ ಮಂಜು, ರಮೇಶ್, ನಾಗರಾಜ್ ಎಲಿಗಾರ್, ರಿಕ್ಸಾನ್, ಸಂದೀಪ್‌ಶೆಟ್ಟಿ, ಶಮೇಶ್, ಸಿದ್ದಿಕ್ ಮತ್ತಿತರರು ಇದ್ದರು.೨೭ಬಿಹೆಚ್‌ಆರ್ ೬: ಬಾಳೆಹೊನ್ನೂರು ಸಮೀಪದ ಅಕ್ಷರನಗರದ ಕ್ರೀಡಾಂಗಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಬಿ.ಸಿ.ಸಂತೋಷ್‌ಕುಮಾರ್, ಬಿ.ಕೆ.ಮಧುಸೂದನ್, ಜಾನ್ ಡಿಸೋಜಾ ಇದ್ದರು.

Share this article