ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಗಿಂತ ಮೊದಲು ವಿವಿಧ ರಾಜ್ಯಗಳಲ್ಲಿ ಹಲವು ರೀತಿಯಲ್ಲಿ ಉದ್ಯೋಗದ ಯೋಜನೆಗಳು ಜಾರಿಯಾಗುತ್ತಿದ್ದವು. ಆದರೆ ಆ ಯೋಜನೆಗಳು ನಿರ್ದಿಷ್ಟ ವ್ಯಾಪ್ತಿಯಲ್ಲಿ ಇರುತ್ತಿದ್ದವು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ 2005ರಲ್ಲಿ ಜಾರಿಯಾದಾಗ ಅದು ದೇಶಾದ್ಯಂತ ಒಂದೇ ರೀತಿಯಲ್ಲಿ ಜಾರಿಯಾಗುವಂತೆ ಉದ್ಯೋಗದ ಅವಶ್ಯಕತೆ ಇರುವವರೆಲ್ಲರಿಗೂ ಉಪಯೋಗವಾಗುವ ರೀತಿಯಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಅದಕ್ಕಾಗಿ ಹಣವನ್ನು ಕ್ರೂಢೀಕರಿಸುವ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರವೇ ವಹಿಸಿತ್ತು. ಕುಟುಂಬದ ಒಬ್ಬರಿಗೆ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಕೆಲಸ ದೊರೆಯುವ ಯೋಜನೆಯಾಗಿ ರೂಪಿಸಲಾಗಿತ್ತು ಎಂದರು.
ಒಂದು ವೇಳೆ ಸಂಬಂಧಪಟ್ಟ ಸ್ಥಳೀಯ ಪಂಚಾಯಿತಿ ಅರ್ಜಿ ಹಾಕಿರುವವರಿಗೆ ಕೆಲಸವನ್ನು ಕಲ್ಪಿಸದಿದ್ದಾಗ ಉದ್ಯೋಗ ಬೇಕೆಂದು ಅರ್ಜಿ ಹಾಕಿರುವ ವ್ಯಕ್ತಿಗೆ ಸರ್ಕಾರವೇ ನಿರುದ್ಯೋಗ ಭತ್ಯೆ ನೀಡಬೇಕು. ಕೆಲಸಬೇಕೆಂದು ಕೋರಿದವರೆಲ್ಲರಿಗೂ ಕೆಲಸ ಒಂದು ಹಕ್ಕಾಗಿ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಉದ್ಯೋಗದ ಹಕ್ಕಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಿದೆ. ಭಾರತ ಸಂವಿಧಾನವು ಆರ್ಥಿಕ ಹಕ್ಕನ್ನು ಮೂಲಭೂತ ಹಕ್ಕಾಗಿ ಅಲ್ಲದೆ ಆದೇಶ ಸೂತ್ರಗಳಲ್ಲಿ ಸೇರಿಸಿದೆ. ಅದನ್ನು ಆಚರಣೆಗೆ ತರುವ ವಿಧಾನದಲ್ಲಿ ಸರ್ಕಾರಗಳು ಮುನ್ನಡೆಯಬೇಕೆಂದು ನಿರ್ದೆಶಿಸಿದೆ.ಈ ಉದ್ಯೋಗ ಖಾತ್ರಿ ಯೋಜನೆ ಕುರಿತು ತಿಂಗಳಗಟ್ಟಲೆ ಬಹಿರಂಗ ವೇದಿಕೆಗಳಲ್ಲಿ ಚರ್ಚೆಗಳು ನಡೆದಿವೆ. ಪಾರ್ಲಿಮೆಂಟರಿ ಕಮಿಟಿ ಹಲವು ತರಗತಿಗಳ ಜನರಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದೆ. ಅಂತಿಮವಾಗಿ ಅನೇಕ ಅಂಶಗಳ ಮೇಲೆ ಏಕಾಭಿಪ್ರಾಯಕ್ಕೆ ಬಂದ ನಂತರ ಈ ಕಾಯ್ದೆ ಸರ್ವಾನುಮತದಿಂದ ಅಂಗೀಕಾರವಾಗಿದೆ. ಈ ಕಾಯ್ದೆ ನಮ್ಮ ದೇಶದ ಜನರ ದೃಢಸಂಕಲ್ಪವನ್ನು ಪ್ರತಿಬಿಂಬಿಸಿದೆ. ಸಂವಿಧಾನ ಬದ್ಧ ಹಕ್ಕನ್ನು ಜನತೆಗೆ ಕಲ್ಪಿಸಿದೆ, ಇಂತಹ ಕಾಯ್ದೆಯನ್ನು ರದ್ದು ಮಾಡುವುದೆಂದರೆ ಅದು ಸಂವಿಧಾನ ವಿರೋಧಿ ನಡೆಯಾಗುತ್ತದೆ ಎಂದು ತಿಳಿಸಿದರು.
ಈ ಸಂವಿಧಾನ ವಿರೋಧಿ ನಡೆಯನ್ನು ಸ್ವತಃ ಕೇಂದ್ರದ ಎನ್.ಡಿ.ಎ ಸರ್ಕಾರವೇ ಮಾಡಿದೆ. ಸಂಸತ್ತಿನಲ್ಲಿ ಮೇಜುಕುಟ್ಟುವ ಮೂಲಕ ಒಂದು ತೀರ್ಮಾನವನ್ನು ಅನುಮೋದಿಸಿ, ಏಕಾಏಕಿ ಜನತೆಗೆ ಕಲ್ಪಿಸಿದ್ದ ಹಕ್ಕನ್ನೇ ದಮನಗೊಳಿಸಿದೆ. ಇದು ಪೂರ್ತಿಯಾಗಿ ದೌರ್ಜನ್ಯ ಹಾಗೂ ದಾಳಿಯಾಗಿದೆ. ಕೇಂದ್ರ ಸರ್ಕಾರ ಡಿ. 15ರಂದು ಮನರೇಗಾ ಕಾಯ್ದೆ ಸ್ಥಾನದಲ್ಲಿ ಮತ್ತೊಂದು ಕಾಯ್ದೆಯನ್ನು ಪ್ರತಿಪಾದಿಸಿದೆ. 17ನೇ ತಾರೀಖು ರಾತ್ರಿ ಅದರ ಮೇಲೆ ಚರ್ಚೆ ನಡೆದಿದೆ.18ನೇ ತಾರೀಖು ಮೇಜು ಕುಟ್ಟುವ ಮೂಲಕ ಅನುಮೋದನೆಯನ್ನು ಪಡೆಯಲಾಗಿದೆ. ಕನಿಷ್ಠ ಪಾರ್ಲಿಮೆಂಟರಿ ಸಮಿತಿಗೆ ಕೂಡ ಅಭಿಪ್ರಾಯವನ್ನು ನೀಡಲು ಅಂಗೀಕರಿಸಲಿಲ್ಲ. ವಾಸ್ತವವಾಗಿ ಗ್ರಾಮೀಣ ವ್ಯವಹಾರಗಳ ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷರು ತಮ್ಮ ಅಭಿಪ್ರಾಯವನ್ನು ಬರವಣಿಗೆ ಮೂಲಕ ನೀಡಿ ಮಾತನಾಡಲು ಕೋರಿದರೂ ಸರ್ಕಾರ ಅದನ್ನು ತಿರಸ್ಕರಿಸಿದೆ. ಇಂತಹ ವಿಬಿ- ಜಿ ರಾಮ್ (ಜಿ) ಕಾಯ್ದೆ ಹಿಮ್ಮೆಟ್ಟಿಸಿ ಎಂದಿನಂತೆ ಮನರೇಗಾ ಜಾರಿಗೊಳಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಿಪಿಐಎಂ.ಜಿಲ್ಲಾ ಕಾರ್ಯದರ್ಶಿ ಜಿ.ಸಿದ್ದಗಂಗಪ್ಪ.ಜಿಲ್ಲಾ ಸಮಿತಿ ಸದಸ್ಯರಾದ ಬಿ.ಎನ್.ಮುನಿಕೃಷ್ಣಪ್ಪ, ಚನ್ನರಾಯಪ್ಪ ಇದ್ದರು.ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿದರು