ಕುಡಿದು ತೂರಾಡುತ್ತಿದ್ದ ತಂದೆಯಿಂದ ಹಸುಗೂಸು ರಕ್ಷಣೆ

KannadaprabhaNewsNetwork |  
Published : Nov 18, 2023, 01:00 AM IST
ಪೊಟೋ-ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಸುಗೂಸಿಗೆ ಸೂಕ್ತ ಚಿಕಿತ್ಸೆ ನೀಡಿ ಮಗುವನ್ನು ಗದಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು  | Kannada Prabha

ಸಾರಾಂಶ

ತಂದೆಯೇ ಕುಡಿದ ಅಮಲಿನಲ್ಲಿ ತನ್ನ 7-8 ದಿನದ ಹಸುಗೂಸನ್ನು ಹೊತ್ತು ತಂದು ಲಕ್ಷ್ಮೇಶ್ವರ ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಮತ್ತೆ ಮದ್ಯಪಾನ ಮಾಡಲು ತೆರಳಿದ್ದಲ್ಲದೇ, ಕೂಸು ಹಸಿವಿನಿಂದ ನರಳಾಡುತ್ತಿದ್ದರೂ ಅದರ ಪರಿವೆ ಇಲ್ಲವೆಂಬಂತೆ ಅಮಾನವೀಯವಾಗಿ ವರ್ತಿಸಿದ ಘಟನೆ ಕಳೆದ ಬುಧವಾರ ತಡ ರಾತ್ರಿ ಸಂಭವಿಸಿದೆ.

ಲಕ್ಷ್ಮೇಶ್ವರ: ತಂದೆಯೇ ಕುಡಿದ ಅಮಲಿನಲ್ಲಿ ತನ್ನ 7-8 ದಿನದ ಹಸುಗೂಸನ್ನು ಹೊತ್ತು ತಂದು ಲಕ್ಷ್ಮೇಶ್ವರ ಬಸ್‌ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಮತ್ತೆ ಮದ್ಯಪಾನ ಮಾಡಲು ತೆರಳಿದ್ದಲ್ಲದೇ, ಕೂಸು ಹಸಿವಿನಿಂದ ನರಳಾಡುತ್ತಿದ್ದರೂ ಅದರ ಪರಿವೆ ಇಲ್ಲವೆಂಬಂತೆ ಅಮಾನವೀಯವಾಗಿ ವರ್ತಿಸಿದ ಘಟನೆ ಕಳೆದ ಬುಧವಾರ ತಡ ರಾತ್ರಿ ಸಂಭವಿಸಿದೆ.

ಈ ವಿಷಯ ತಿಳಿದ ಪಟ್ಟಣದ ಪೊಲೀಸ್‌ ಸಿಬ್ಬಂದಿ ಕುಡುಕ ತಂದೆಯಿಂದ ಹಸುಗೂಸನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಿಗೆ ಹಸ್ತಾಂತರ ಮಾಡಿ ಮಗುವಿನ ಪ್ರಾಣ ರಕ್ಷಣೆ ಮಾಡಿದ್ದಾರೆ. ಘಟನೆಯ ವಿವರ: ಒಂದು ವಾರದ ಹಿಂದೆ ಗದಗ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದ್ದು, ಮಗುವಿನ ತಾಯಿ ಗದಗ ತಾಲೂಕಿನ ಡಂಬಳ ಗ್ರಾಮದವಳು. ತಂದೆ ಹಾವೇರಿ ಜಿಲ್ಲೆಯ ಕೃಷ್ಣಾಪೂರ ಗ್ರಾಮದವರೆಂದು ತಿಳಿದು ಬಂದಿದೆ. ಮಗುವಿನ ತಾಯಿ ಗದಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಗದಗ ನಂದೀಶ್ವರ ನಗರದಲ್ಲಿ ವಾಸವಾಗಿದ್ದಾರೆ.

ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪವಾಗಿ ತಂದೆ ಕುಡಿದ ಅಮಲಿನಲ್ಲಿ ಬಸ್ ಹತ್ತಿ ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂದು ಇಳಿದುಕೊಂಡಿದ್ದಾನೆ. ಈ ವೇಳೆ ಕೃಷ್ಣಾಪೂರಕ್ಕೆ ಬಸ್ ತಡವಾಗಿ ಇರುವುದನ್ನು ತಿಳಿದ ಆತನು ಮಗುವನ್ನು ಬಸ್ ನಿಲ್ದಾಣದಲ್ಲಿ ಇರುವ ಅಪರಿಚಿತ ಅಜ್ಜಿಯೊಬ್ಬಳ ಕೈಗೆ ಕೊಟ್ಟು ಹೊರಗಡೆ ಹೋಗಿ ಬಂದು ಬಿಡುತ್ತೇನೆ ಎಂದು ಮತ್ತೆ ಕುಡಿಯಲು ಹೋಗಿದ್ದಾನೆ, ಈ ವೇಳೆ ಅಜ್ಜಿಯ ಬಸ್ ಬಂದಿದ್ದರಿಂದ ಮಗುವನ್ನು ಬಿಟ್ಟು ಬಸ್ ಹತ್ತಿ ಹೋಗಿದ್ದಾಳೆ. ಮತ್ತೆ ವಾಪಸ್ ಬಂದ ಆತನು ತನ್ನ ಹಸುಗೂಸನ್ನು ಹೆಗಲ ಮೇಲೆ ಹೊತ್ತು ತೂರಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಯೂಸುಫ್ ಜಮೂಲಾ ಅವರು ಮಗು ಹಾಗೂ ಆತನನ್ನು ಠಾಣೆಗೆ ಕರೆ ತಂದು ಮಾಹಿತಿ ಕಲೆ ಹಾಕಿದಾಗ ಆತನೇ ಮಗುವಿನ ನಿಜವಾದ ತಂದೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಹಸಿವಿನಿಂದ ಬಳಲುತ್ತಿದ್ದ ಮಗುವಿನ ಆರೋಗ್ಯದ ಕುರಿತು ಪರೀಕ್ಷೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ.ಲಕ್ಷ್ಮೇಶ್ವರ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮೃತ್ಯುಂಜಯ ಗುಡ್ಡದಾನ್ವೇರಿ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರಲ್ಲದೇ, ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಮಾಳಗಿ ಅವರ ಜೊತೆ ಚರ್ಚಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಕಲ್ಯಾಣ ಸಮಿತಿಗೆ ಮಗುವನ್ನು ನೀಡಿದ್ದು, ಅಭಿರಕ್ಷಣಾ ದತ್ತು ಕೇಂದ್ರದಲ್ಲಿ ಮಗುವನ್ನು ಇರಿಸಲಾಗಿದೆ. ಲಕ್ಷ್ಮೇಶ್ವರ ಪಟ್ಟಣದ ಪಿಎಸ್‌ಐ ಅವರಿಗೆ ಮಗುವಿನ ನೈಜ ತಂದೆ -ತಾಯಿಗಳನ್ನು ಪತ್ತೆ ಮಾಡಿ ಸೂಕ್ತ ವರದಿ ನೀಡಿದ ನಂತರ ಮಗುವನ್ನು ನಿಜವಾದ ಪೋಷಕರಿಗೆ ಹಸ್ತಾಂತರ ಮಾಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯ ಸಿಬ್ಬಂದಿ ಮಲ್ಲಪ್ಪ ಹೊಸಳ್ಳಿ ತಿಳಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ