ಲೋಕಾ ಬಲೆಗೆ ಆರ್‌ಟಿಒ ಅಧೀಕ್ಷಕ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ನಗರದ ಎಸ್‌ಕೆಬಿ ಟ್ರಾವೆಲ್ಸ್‌ನ ಮಾಲೀಕ ಎಚ್. ಉಮೇಶ್ ಅವರು ಬಸ್‌ನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಗ್ರಾಮದ ನಿವಾಸಿ ವಸಿಕೂರ್ ರೆಹಮಾನ್ ಎಂಬವರಿಗೆ ಮಾರಾಟ ಮಾಡಿದ್ದರು. ಸದರಿ ಬಸ್‌ನ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಆರ್‌ಟಿಒ ಕಚೇರಿಯ ಅಧೀಕ್ಷಕ ಚಂದ್ರಕಾಂತ ಗುಡಿಮನಿ ಅವರು ₹೧೫ ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಖಾಸಗಿ ಬಸ್‌ನ ಕ್ಲಿಯರೆನ್ಸ್ ಸರ್ಟಿಫಿಕೇಟ್‌ ನೀಡಲು ಲಂಚ ಪಡೆಯುತ್ತಿದ್ದ ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧೀಕ್ಷಕ ಚಂದ್ರಕಾಂತ ಗುಡಿಮನಿ ಹಾಗೂ ಖಾಸಗಿ ಏಜೆಂಟ್ ಮಹಮ್ಮದ್ ರಾಜ್ ಎಂಬವರ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಎಸ್‌ಕೆಬಿ ಟ್ರಾವೆಲ್ಸ್‌ನ ಮಾಲೀಕ ಎಚ್. ಉಮೇಶ್ ಅವರು ಬಸ್‌ನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಗ್ರಾಮದ ನಿವಾಸಿ ವಸಿಕೂರ್ ರೆಹಮಾನ್ ಎಂಬವರಿಗೆ ಮಾರಾಟ ಮಾಡಿದ್ದರು. ಸದರಿ ಬಸ್‌ನ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಲು ಆರ್‌ಟಿಒ ಕಚೇರಿಯ ಅಧೀಕ್ಷಕ ಚಂದ್ರಕಾಂತ ಗುಡಿಮನಿ ಅವರು ₹೧೫ ಸಾವಿರ ಲಂಚದ ಬೇಡಿಕೆ ಇಟ್ಟಿದ್ದು, ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗುರುವಾರ ರಾತ್ರಿ 10.30ರ ಸುಮಾರಿಗೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಆರ್‌ಟಿಒ ಅಧೀಕ್ಷಕ ಚಂದ್ರಕಾಂತ ಗುಡಿಮನಿ ಅವರು ಲಂಚದ ಹಣವನ್ನು ಖಾಸಗಿ ವ್ಯಕ್ತಿಯಾದ ಮಹಮ್ಮದ್ ರಾಜ್ ಎಂಬಾತನ ಮೂಲಕ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಎಸ್ಪಿ ಶಶಿಧರ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ಆರ್‌ಟಿಒ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಲಂಚವಿಲ್ಲದೆ ಯಾವುದೇ ಕೆಲಸಗಳಾಗುವುದಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಇತ್ತೀಚೆಗಷ್ಟೇ ಆರ್‌ಟಿಒ ಕಚೇರಿಗೆ ಭೇಟಿ ನೀಡಿದ್ದರಲ್ಲದೆ, ಸ್ಥಳೀಯ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿಯೇ ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಇಲಾಖೆಯಲ್ಲಿ ಭ್ರಷ್ಟಾಚಾರದ ಹೂರಣ ಹೊರ ಬಿದ್ದಂತಾಗಿದೆ.

Share this article