ಸ್ಮಾಲ್ ಕಿಕ್ಕರ್
--
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ। ರಕ್ತದಾನಿಗಳಿಗೆ ಸನ್ಮಾ ನ----
ಸುರಕ್ಷಿತ ರಕ್ತದಾನವು ಎಲ್ಲ ವಯಸ್ಸಿನ ಜನರ ಜೀವಗಳನ್ನು ಉಳಿಸುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಹೇಳಿದರು.ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಯಾದಗಿರಿ ಇವರುಗಳ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ರಕ್ತದ ಅಗತ್ಯ ಹಾಗೂ ರಕ್ತದಾನದ ಪ್ರಾಮುಖ್ಯತೆಯ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 1 ರಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತದೆ. ರಕ್ತದಾನಿಗಳಿಗೆ ನಿರ್ದಿಷ್ಟ ಮಾನದಂಡಗಳಿದ್ದು, ಅವುಗಳನ್ನು ಅನುಸರಿಸುವುದು ಅವಶ್ಯಕ ಎಂದರು.ದಾನಿಯ ವಯಸ್ಸು 18 ರಿಂದ 60 ವರ್ಷಗಳ ನಡುವೆ ಇರಬೇಕು, ತೂಕ ಕನಿಷ್ಠ 45 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ಇರಬೇಕು, ನಾಡಿ ಮಿಡಿತ ನಿಮಿಷಕ್ಕೆ 60 ರಿಂದ 100 ಇರಬೇಕು. ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿರಬೇಕು. ಹಿಮೋಗ್ಲೋಬಿನ್ 12.5ಗ್ರಾಂ/100ಎಂಎಲ್ ಗಿಂತ ಕಡಿಮೆಯಿರಬಾರದು. ದೇಹದ ಉಷ್ಣಾಂಶ 37.5 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿರಬಾರದೆಂದು ತಿಳಿಸಿದರು.ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮುಬಾಶೀರ್ ಅಹ್ಮದ್ ಸಾಜಿದ್ ಮಾತನಾಡಿ, ಸ್ವಯಂಪ್ರೇರಿತ ರಕ್ತದಾನ ಆಂದೋಲನದ ಬಗ್ಗೆ ಇರುವ ಅಪಕಲ್ಪನೆಗಳನ್ನು ಹೋಗಲಾಡಿಸಲು ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಯುವಕರು ತಮ್ಮ ಸಮಯ ಹಾಗೂ ಸಂಪನ್ಮೂಲಗಳನ್ನು ಬಳಸುತ್ತಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜ್ಯೋತಿ ಕಟ್ಟಿಮನಿ ಮಾತನಾಡಿ, ಸುರಕ್ಷಿತ ಹಾಗೂ ಕಾನೂನುಬದ್ಧ ವೈದ್ಯಕೀಯ ನೆರವು ಪಡೆಯುವುದು ಪ್ರತಿಯೊಬ್ಬರ ಹಕ್ಕಾಗಿದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮಿ ಮುಂಡಾಸ ಮಾತನಾಡಿ, ದೇಹದ ಪ್ರಮುಖ ಅಂಗಾಂಶಗಳಿಗೆ ಪೋಷಣೆ ನೀಡುವ ರಕ್ತವನ್ನು ದಾನ ಮಾಡುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಬಹುದು ಎಂದರು.ಕಚೇರಿ ಅಧೀಕ್ಷಕ ಸಾಹೇಬಗೌಡ ಮಾನೇಗಾರ ಮಾತನಾಡಿ, ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ರಕ್ತದಾನವು ಮಾನವೀಯತೆಯ ಪ್ರಮುಖ ಭಾಗವಾಗಿದೆ ಎಂದರು. ರಕ್ತದಾನ ಮಾಡಿದ ದಾನಿಗಳಾದ ಡಾ. ಎಂ.ಎ. ಸಾಜಿದ್ (ಡಿಎಂಒ), ಡಾ. ಸುನೀತಾ ನಿನ್ಶೆಕರ್ ಹಾಗೂ ಮಲ್ಲಿಕಾರ್ಜುನ, ಬಾಗಪ್ಪ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಜಗನ್ನಾಥ ಕೋಟಿ, ಗಿರೀಶ್, ಮಲ್ಲೇಶಪ್ಪ, ಜ್ಯೋತಿ ಹವ್ವಳ, ಅರ್ಚನಾ, ಸಾಬಣ್ಣ, ಶ್ರೀಹರಿ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪೊಟೊ:1ವೈಡಿಆರ್3