ಹೆಣ್ಣುಮಕ್ಕಳಿಗೆ ಸಾವಿತ್ರಿಬಾಯಿ ಫುಲೆ ಆದರ್ಶ

KannadaprabhaNewsNetwork | Published : Jan 6, 2025 1:04 AM

ರಾಮನಗರ: ಸಮಾಜದ ಅಂಕು- ಡೊಂಕುಗಳನ್ನು ತಿದ್ದಲು ಪ್ರಮುಖ ಅಸ್ತ್ರ ಶಿಕ್ಷಣ ಎಂಬುದನ್ನು ಅರಿತಿದ್ದ ಸಾವಿತ್ರಿ ಬಾಯಿ ಫುಲೆ ಅವರು ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿಕೊಟ್ಟ ಮೊದಲ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕರು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಬಣ್ಣಿಸಿದರು.

ರಾಮನಗರ: ಸಮಾಜದ ಅಂಕು- ಡೊಂಕುಗಳನ್ನು ತಿದ್ದಲು ಪ್ರಮುಖ ಅಸ್ತ್ರ ಶಿಕ್ಷಣ ಎಂಬುದನ್ನು ಅರಿತಿದ್ದ ಸಾವಿತ್ರಿ ಬಾಯಿ ಫುಲೆ ಅವರು ಅಕ್ಷರ ಜ್ಞಾನದಿಂದ ವಂಚಿತರಾಗಿದ್ದ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿಕೊಟ್ಟ ಮೊದಲ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕರು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಬಣ್ಣಿಸಿದರು.

ನಗರದಲ್ಲಿ ತಾಲೂಕು ಶ್ರೀ ಕೈವಾರ ತಾತಯ್ಯ ಬಲಿಜ ಸಮುದಾಯ ಸೇವಾ ಸಂಘ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂಕುಚಿತ ಮನೋಭಾವಗಳನ್ನು ತೊರೆದು, ಸಮಾಜಕ್ಕೆ ಕೈವಾರ ತಾತಯ್ಯ, ಸಾವಿತ್ರಿಬಾಯಿ ಫುಲೆ, ಶ್ರೀಕೃಷ್ಣ ದೇವರಾಯರಂತಹ ಆದರ್ಶಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಆರ್.ವಿ.ಸುರೇಶ್ ಮಾತನಾಡಿ, ಸಾವಿತ್ರಿಬಾಯಿ ಫುಲೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವರು ಅಂದೇ ಭದ್ರ ಬುನಾದಿ ಹಾಕಿದವರು. ಅವರ ಶ್ರಮವೇ ಇಂದು ಹೆಣ್ಣಮಕ್ಕಳು ಉನ್ನತ ವ್ಯಾಸಂಗ ಪಡೆದು, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್ ಮಾತನಾಡಿ, ಈ ಹಿಂದೆ ಗುರುಕುಲದಲ್ಲಿ ಮೇಲ್ವರ್ಗದ ಜನರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಆ ಸಮಯದಲ್ಲಿ ಕೆಳವರ್ಗದ, ದಲಿತ, ಶೂದ್ರ, ರೈತ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಅಂತಹ ಸಮಯದಲ್ಲಿ ಒಂದು ಹೆಣ್ಣು ಮಗಳಾದ ಫುಲೆ ಹೋರಾಡಿ ವಂಚಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಮೊದಲ ಮಹಿಳಾ ಶಿಕ್ಷಕಿಯಾಗಿ ಅವಿರತ ಶ್ರಮಪಟ್ಟ ದಿಟ್ಟ ಮಹಿಳೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕಾಂಗರೋ ಕೇರ್ ಆಸ್ಪತ್ರೆಯ ವೈದ್ಯ ಡಾ.ಪ್ರಶಾಂತ್ ಮಾತನಾಡಿದರು. ಶ್ರೀ ಕೈವಾರ ತಾತಯ್ಯ ಬಲಿಜ ಸಮುದಾಯ ಸೇವಾ ಸಂಘದ ಅಧ್ಯಕ್ಷ ಹನುಮಶೆಟ್ಟಿ, ಗೌರವಾಧ್ಯಕ್ಷ ಎಂ.ರಾಮಚಂದ್ರ (ಎಂಆರ್‌ಸಿ), ಉಪಾಧ್ಯಕ್ಷ ಮೋಹನ್ ರಾಮನ್ನಾರ್, ಪದಾಧಿಕಾರಿಗಳಾದ ಲಕ್ಷ್ಮಣ್, ಪುಟ್ಟರಾಜು, ಮಾವಿನಸಸಿ ವೆಂಕಟೇಶ್, ಪದ್ಮನಾಭ, ಸುಧಾರಾಣಿ, ರೈಲ್ವೆ ಗೋಪಾಲ್, ನರಸಿಂಹಣ್ಣ, ಚನ್ನಪಟ್ಟಣ ನಾಗರಾಜು, ಡಾ.ಸಂತೋಷ್ ಇತರರು ಉಪಸ್ಥಿತರಿದ್ದರು.

4ಕೆಆರ್ ಎಂಎನ್ 4.ಜೆಪಿಜಿ

ರಾಮನಗರದಲ್ಲಿ ತಾಲೂಕು ಶ್ರೀ ಕೈವಾರ ತಾತಯ್ಯ ಬಲಿಜ ಸಮುದಾಯ ಸೇವಾ ಸಂಘ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.