ಗವಿಸಿದ್ಧೇಶ್ವರ ಜಾತ್ರೆ ನಿಮಿತ್ತ ಜ. 12ರಿಂದ 18ವರಗೆ ಕ್ರೀಡಾ ಉತ್ಸವ: ಸಂಸದ ರಾಜಶೇಖರ ಹಿಟ್ನಾಳ

KannadaprabhaNewsNetwork |  
Published : Jan 06, 2025, 01:04 AM IST
5ಕೆಪಿಎಲ್24 ಕೊಪ್ಪಳ ಗವಿ ಕ್ರಿಡೋತ್ಸವದ ಲೋಗೋ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧಿಯಾದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 2025ರ ಗವಿಶ್ರೀ ಕ್ರೀಡಾ ಉತ್ಸವವು ಜ. 12ರಿಂದ 18 ರವರೆಗೆ ನಗರದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧಿಯಾದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 2025ರ ಗವಿಶ್ರೀ ಕ್ರೀಡಾ ಉತ್ಸವವು ಜ. 12ರಿಂದ 18 ರವರೆಗೆ ನಗರದಲ್ಲಿ ನಡೆಯಲಿದೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ತಿಳಿಸಿದರು.

ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಸಹಭಾಗಿತ್ವದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉತ್ಸವದಲ್ಲಿ 19 ರೀತಿಯ ವಿವಿಧ ಸಾಂಪ್ರದಾಯಿಕ ಹಾಗೂ ದೇಶಿಯ ಕ್ರೀಡೆಗಳು ಮತ್ತು ಪ್ರದರ್ಶನ ಪಂದ್ಯಾವಳಿ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಆಹ್ವಾನಿತ ತಂಡಗಳಿಂದ ಕ್ರಿಕೆಟ್ ಪಂದ್ಯಾವಳಿಯು ನಗರದ ತಾಲೂಕು ಕ್ರೀಡಾಂಗಣದಲ್ಲಿ ಜ. 12 ಮತ್ತು 13ರಂದು ಬೆಳಗ್ಗೆ 11 ಗಂಟೆಗೆ ಹಾಗೂ ಫೈನಲ್ ಪಂದ್ಯಾವಳಿ ಜ. 14ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಜ. 14ರಂದು ಬೆಳಗ್ಗೆ 6.30ಕ್ಕೆ ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್, ಅಶೋಕ ಸರ್ಕಲ್, ಕಿನ್ನಾಳ ರೋಡ್, ಭಾಗ್ಯನಗರ ಕ್ರಾಸ್, ಭಾಗ್ಯನಗರ, ಲೇಬರ್ ಸರ್ಕಲ್, ಸಿಂಪಿ ಲಿಂಗಣ್ಣ ರಸ್ತೆ ಮೂಲಕ ಗಡಿಯಾರ ಕಂಬದ ಮಾರ್ಗವಾಗಿ ಗವಿಮಠ ಆವರಣದವರೆಗೆ ಪುರುಷ ಮತ್ತು ಮಹಿಳೆಯರಿಗೆ 12 ಕಿಮೀ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಪ್ರಥಮ ₹20,000, ದ್ವಿತೀಯ ₹15,000, ತೃತೀಯ ₹12,000 ಹಾಗೂ ಒಟ್ಟು ಎಂಟು ಹಂತಗಳಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಜ. 14ಕ್ಕೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಜ. 15ರಂದು ಬೆಳಗ್ಗೆ 9.30ಕ್ಕೆ ಗವಿಮಠ ಆವರಣದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶ್ವಾನ ಪ್ರದರ್ಶನ, ಬೆಳಗ್ಗೆ 10 ಗಂಟೆಗೆ ಆಕರ್ಷಕ ಮಲ್ಲಕಂಬ ಪ್ರದರ್ಶನ, ಬೆಳಗ್ಗೆ 11 ಗಂಟೆಗೆ ಯುವಕರ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಜ. 16ರಂದು ಬೆಳಗ್ಗೆ 10 ಗಂಟೆಗೆ ಕರಾಟೆ ಪ್ರದರ್ಶನ, ಯುವಕರಿಂದ ಎತ್ತಿನ ಬಂಡಿ ಜಗ್ಗುವ ಸ್ಪರ್ಧೆ ಜರುಗಲಿದೆ. ಬೆಳಗ್ಗೆ 11 ಗಂಟೆಗೆ ಆಹ್ವಾನಿತ ರಾಷ್ಟ್ರ ಹಾಗೂ ರಾಜ್ಯ ಮಟ್ಟದ, ಪುರುಷ ಮತ್ತು ಮಹಿಳಾ ಕುಸ್ತಿ ಪಟುಗಳಿಂದ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಛದ್ಮವೇಷ/ ಫ್ಯಾಷನ್, ಪುರುಷ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ. ಜ. 17ರಂದು ಸಂಜೆ 5 ಗಂಟೆಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಹ್ವಾನಿತ ಪುರುಷರ ದೇಹದಾರ್ಡ್ಯತೆ (Body Building) ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಜ. 17ರ ಬೆಳಗ್ಗೆ 10 ಗಂಟೆಗೆ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಂಡಿದ್ದು, ಫೈನಲ್‌ ಜ. 18ರ ಮಧ್ಯಾಹ್ನ 3 ಗಂಟೆಗೆ ಗವಿಮಠ ಆವರಣದಲ್ಲಿ ಜರುಗಲಿದೆ. ಜ. 17ರ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಮಠದ ಆವರಣದಲ್ಲಿ ಸಾರ್ವಜನಿಕರಿಗೆ ಮುಕ್ತ ಗಾಳಿಪಟ ಹಾರಾಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸಿದ ಎಲ್ಲರಿಗೂ ಆಕರ್ಷಕ ಉಡುಗೊರೆ ಸಿಗಲಿದೆ. ಅಲ್ಲದೇ ಅಂದು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆಯವರೆಗೆ ದೇಶದ ಪ್ರಸಿದ್ಧ 5 ತಂಡಗಳಿಂದ ಬೃಹತ್ ಗಾತ್ರದ ಗಾಳಿಪಟ ಪ್ರದರ್ಶನ ಮತ್ತು ರಾತ್ರಿ 10ರಿಂದ 12 ಗಂಟೆವರೆಗೆ ಎಲ್.ಇ.ಡಿ ಗಾಳಿಪಟ ಪ್ರದರ್ಶನ ಜರುಗಲಿದೆ. ಜ. 17 ಬೆಳಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಗವಿಮಠದ ವರೆಗೆ ಎತ್ತಿನ ಬಂಡಿ ಶೃಂಗಾರ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಮುಖಂಡರಾದ ಸಿ.ವಿ. ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಕೊಪ್ಪಳ ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಅಜೀಂ ಅತ್ತರ್, ಅರುಣ್ ಅಪ್ಪು ಶೆಟ್ಟಿ ಸೇರಿದಂತೆ ಅಧಿಕಾರಿಗಳು ಹಾಗೂ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್