ಸ್ತ್ರೀ ಮುಕ್ತಿಗಾಗಿ ಹೊಸ್ತಿಲು ದಾಟಿದ ಸಾವಿತ್ರಿಬಾಯಿ: ರಜನಿ

KannadaprabhaNewsNetwork |  
Published : Jan 07, 2024, 01:30 AM IST
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಮಹಾಶಕ್ತಿ ಮಹಿಳಾ ಸಂಘದ ವತಿಯಿಂದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಮೌಢ್ಯ, ಕಂದಾಚಾರ, ಗೊಡ್ಡು ಸಂಪ್ರದಾಯ, ಬಾಲ್ಯವಿವಾಹ, ಅನಕ್ಷರತೆ, ಅಸಮಾನತೆ, ಶೋಷಣೆ ಹಾಗೂ ದೌರ್ಜನ್ಯಗಳ ವಿರುದ್ಧ ಸಾವಿತ್ರಿಬಾಯಿ ಫುಲೆ ಹೋರಾಡಿದ್ದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಹಿಳೆ ಗುಲಾಮಳಂತಿದ್ದ ಕಾಲದಲ್ಲಿ ಸ್ತ್ರೀ ಮುಕ್ತಿಗಾಗಿ ಹೊಸ್ತಿಲು ದಾಟಿ ಹೊರಬಂದ ದಿಟ್ಟ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಎಂದು ಮಹಿಳಾ ಚಿಂತಕಿ ರಜನಿ ಜೆ.ಪಾಟೀಲ ಹೇಳಿದರು.

ವಾಡಿ ಪಟ್ಟಣದ ನಂದೀಶ್ವರ ದೇವಸ್ಥಾನ ಆವರಣದಲ್ಲಿ ಮಹಾಶಕ್ತಿ ಮಹಿಳಾ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ೧೯೩ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮೌಢ್ಯ, ಕಂದಾಚಾರ, ಗೊಡ್ಡು ಸಂಪ್ರದಾಯ, ಬಾಲ್ಯವಿವಾಹ, ಅನಕ್ಷರತೆ, ಅಸಮಾನತೆ, ಶೋಷಣೆ ಹಾಗೂ ದೌರ್ಜನ್ಯಗಳ ವಿರುದ್ಧ ಸಾವಿತ್ರಿಬಾಯಿ ಫುಲೆ ಹೋರಾಡಿದ್ದರು. ಸಮಾಜದಲ್ಲಿ ಬದಲಾವಣೆ ಬೇಕಾದ್ರೆ ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ಅವಶ್ಯ ಎಂದು ಬಲವಾಗಿ ನಂಬುವ ಮೂಲಕ ವಿಶೇಷವಾಗಿ ಮಹಿಳೆಯರಿಗಾಗಿಯೇ ಶಾಲೆಗಳನ್ನು ತೆರೆದರು. ವಿಧವೆಯಾದ ಮಹಿಳೆಯರು ಕೇಶಮುಂಡನ ಮಾಡಿಸಿಕೊಳ್ಳಬೇಕು ಎಂಬ ಅಮಾನವೀಯ ಸಂಪ್ರದಾಯದ ವಿರುದ್ಧ ಪ್ರತಿಭಟಿಸಿದರು.

ವಿಧವಾ ವಿವಾಹ ಪ್ರೋತ್ಸಾಹಿಸಿದರು. ಇಂದು ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ ಎಂದರೆ ಅದು ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ ಹೋರಾಟದ ಪ್ರತಿಫಲ ಎಂದು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಅವರ ಪತ್ನಿ ಪ್ರೇಮಲತಾ ಪಾಟೀಲ, ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖರ ಭಾವಚಿತ್ರಗಳಿಗೆ ಪುಷ್ಪಮಾಲೆ ಅರ್ಪಿಸಿದರು. ಮಹಾಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಕುಂತಲಾ ಪದ್ದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಜಯಾರಾಣಿ ವಾಸಂತಾ, ಮಹಿಳಾ ಸಂಘದ ಅರ್ಚನಾ ಹಿರೇಮಠ, ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ, ಪುರಸಭೆ ವ್ಯವಸ್ತಾಪಕ ಮಲ್ಲಿಕಾರ್ಜುನ ಹಾರಕೂಡ, ಮುತ್ತಣ್ಣ ಭಂಡಾರಿ ಸೇರಿದಂತೆ ಸ್ಥಳೀಯ ನಲವತ್ತಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಾವಿತ್ರಿ ಎಸ್.ಎಂ ಪ್ರಾರ್ಥಿಸಿದರು. ಲಕ್ಷ್ಮೀ ಬೇಲೂರಕರ ಸ್ವಾಗತಿಸಿದರು. ರೇಣುಕಾ ಗೊಬ್ಬೂರ ನಿರೂಪಿಸಿದರು. ಪ್ರೇಮಿಣಾ ಚವ್ಹಾಣ ವಂದಿಸಿದರು. ಭಾರತೀಯ ಸಂಗೀತ ವಿದ್ಯಾಲಯದ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ