ಅಡಕೆ ಬೆಳೆಗಾರರಿಗೆ ಪರಿಹಾರ ನೀಡಲು ಎಸ್‌ಬಿಐ ವಿಮಾ ಕಂಪನಿಗೆ ಆದೇಶ

KannadaprabhaNewsNetwork |  
Published : Apr 26, 2024, 12:56 AM ISTUpdated : Apr 26, 2024, 11:02 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ರೈತರಿಗೆ ₹ 12.78 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನದಿಂದ ಶೇ. 8ರಷ್ಟು ಬಡ್ಡಿ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎಸ್‌ಬಿಐ ವಿಮಾ ಕಂಪನಿಗೆ ನಿರ್ದೇಶಿಸಿದೆ.

ಧಾರವಾಡ: ಶಿರಸಿಯ 473 ಅಡಕೆ ಬೆಳೆಗಾರರಿಗೆ ಅಪಾರ ಮೊತ್ತದ ವಿಮಾ ಹಣ ಹಾಗೂ ನಷ್ಟ ಪರಿಹಾರ ಕೊಡಲು ಇಲ್ಲಿಯ ಜಿಲ್ಲಾ ಗ್ರಾಹಕರ ಆಯೋಗವು ಎಸ್‌ಬಿಐ ವಿಮಾ ಕಂಪನಿಗೆ ಮಹತ್ವದ ಆದೇಶ ನೀಡಿದೆ.ರೈತರಿಗೆ ₹ 12.78 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನದಿಂದ ಶೇ. 8ರಷ್ಟು ಬಡ್ಡಿ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎಸ್‌ಬಿಐ ವಿಮಾ ಕಂಪನಿಗೆ ನಿರ್ದೇಶಿಸಿದೆ.ಶಿರಸಿಯ ನೀಲಕುಂದ, ತಂಡಾಗುಡಿ ಪ್ರದೇಶದ ಅಡಕೆ ಬೆಳೆಗಾರ ರೈತರು 2017-18ರಲ್ಲಿ ಅಡಕೆ ಬೆಳೆದಿದ್ದರು. ಆ ಬೆಳೆಗೆ ರೈತರು ಕೆನರಾ ಕೋ-ಆಪ್ ರೆಟಿವ್ ಸಂಘದೊಂದಿಗೆ ಎಸ್‌ಬಿಐನ ವಿಮಾ ಕಂಪನಿಗೆ ತಮ್ಮ ಅಡಕೆ ಬೆಳೆಯನ್ನು ಅದೇ ವರ್ಷಕ್ಕೆ ವಿಮೆ ಮಾಡಿಸಿದ್ದರು.

ಮಳೆ ನಿಗದಿಗಿಂತ ಜಾಸ್ತಿಯಾಗಿ ಅತಿವೃಷ್ಟಿಯಾದರೆ ಆ ರೈತರು ವಿಮೆ ಪರಿಹಾರ ಪಡೆಯಲು ಅರ್ಹತೆ ಹೊಂದಿದ್ದರು. ಅಂತೆಯೇ, 2017ರ ಜುಲೈ ತಿಂಗಳಲ್ಲಿ ಅತಿ ಹೆಚ್ಚಿನ ಮಳೆಯಾಗಿ ಅಡಕೆ ಬೆಳೆ ನಾಶವಾಗಿ ರೈತರಿಗೆ ಆರ್ಥಿಕ ತೊಂದರೆಯಾಗಿತ್ತು. ವಿಮಾ ಪಾಲಸಿಯ ನಿಯಮದಂತೆ ತಮಗೆ ಬೆಳೆ ಹಾನಿ ಮತ್ತು ಪರಿಹಾರ ಕೊಡಲು ವಿಮಾ ಕಂಪನಿಗೆ ಮನವಿ ಮಾಡಿದ್ದರು. ಆದರೆ, ಕಂಪನಿಯವರು ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ನಷ್ಟಕ್ಕೆ ಒಳಗಾದ 473 ರೈತರು ಧಾರವಾಡದ ಜನಾದೇಶ ಗ್ರಾಹಕರ ಸ್ವಯಂ ಸೇವಾ ಸಂಘದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ವಿಚಾರಣೆ ನಡೆಸಿದರು.ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ರೈತರ ಸ್ಥಳಗಳಲ್ಲಿ 2017-19ರಲ್ಲಿ ಹೆಚ್ಚಿನ ಮಳೆಯಾಗಿಲ್ಲ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪದ ಆಧಾರದಲ್ಲಿ ವಿಮೆ ಪರಿಹಾರ ಪಡೆಯಲು ಅರ್ಹರಲ್ಲ ಎಂದು ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು. 

ಅತಿ ಹೆಚ್ಚು ಮಳೆಯಾಗಿದ್ದರೂ ಮಳೆ ಮಾಪನ ಕೇಂದ್ರಗಳು ಕಡಿಮೆ ಮಳೆ ಎಂದು ದಾಖಲಿಸಿಕೊಂಡಿದ್ದ ಪ್ರಸಂಗದಲ್ಲಿ ಅಕ್ಕಪಕ್ಕ ಮಳೆ ಮಾಪನ ಕೇಂದ್ರಗಳ ವರದಿ ಆಧರಿಸಿ ವಿಮಾ ಕಂಪನಿಯವರು ವಿಮಾ ಅರ್ಜಿ ಪರಿಶೀಲಿಸಿ ವಿಮಾ ಹಣ ಕೊಡಬೇಕು ಅನ್ನುವುದು ರಾಜ್ಯ ಸರ್ಕಾರದ ನಿಯಮವಿದೆ. ಈ ಪ್ರಕರಣದಲ್ಲಿ ಜುಲೈ 2017ರಲ್ಲಿ ದೂರುದಾರರ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಆದರೆ ತಾಂತ್ರಿಕ ದೋಷದಿಂದ ಅಲ್ಲಿಯ ಮಳೆ ಮಾಪನ ಕೇಂದ್ರದಲ್ಲಿ 6.7 ಮಿ.ಮೀ ಎಂದು ಮಳೆ ಆಗಿದೆ ಎಂದು ದಾಖಲಾಗಿದೆ.

ಮೇಲೆ ಹೇಳಿದ ರಾಜ್ಯ ಸರ್ಕಾರದ ನಿರ್ದೇಶನದಂತೆ ಪಕ್ಕದ ಮಳೆ ಮಾಪನ ಕೇಂದ್ರದಲ್ಲಿ 72 ಮಿ.ಮೀ.ಗಿಂತ ಹೆಚ್ಚು ಮಳೆಯಾದ ಬಗ್ಗೆ ದಾಖಲೆ ಇದೆ. ಅದನ್ನು ಆಧರಿಸಿ ವಿಮಾ ಕಂಪನಿಯವರು ದೂರುದಾರರಿಗೆ ಬೆಳೆ ವಿಮೆ ಪರಿಹಾರ ಕೊಡಬೇಕಾಗಿತ್ತು ಎಂದು ವಾದ ಪ್ರತಿವಾದ ನಡೆಯಿತು.ಅಂತಿಮವಾಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ವಿಮಾ ಕಂಪನಿಯು ಸೇವಾ ನ್ಯೂನತೆ ಎಸಗಿದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಒಟ್ಟು 473 ರೈತರಿಗೆ ₹ 12.78 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನದಿಂದ ಶೇ. 8ರಷ್ಟು ಬಡ್ಡಿ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎಸ್‌ಬಿಐ ವಿಮಾ ಕಂಪನಿಗೆ ನಿರ್ದೇಶಿಸಿದೆ.

ಎಲ್ಲ ರೈತರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ₹ 2000ದಂತೆ ₹ 9.46 ಲಕ್ಷ ಪರಿಹಾರ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ. ಜತೆಗೆ ಒಟ್ಟು ₹ 30 ಸಾವಿರ ಹಣವನ್ನು ಪ್ರಕರಣಗಳ ಖರ್ಚು ವೆಚ್ಚ ನೀಡಲು ಸಹ ಆಯೋಗ ವಿಮಾ ಕಂಪನಿಗೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ