ಅರಮನೆ ನಗರಿ ಈಜುಕೊಳಕ್ಕೆ ಎಸ್ಬಿಆರ್‌ ಪ್ರತಿಭೆ

KannadaprabhaNewsNetwork |  
Published : Oct 07, 2026, 01:30 AM IST
ಫೋಟೋ- ಸ್ವಿಮ್‌ 1ದಾಸೋಹ ಪೀಠದಲ್ಲಿ ಬಸವ ಪ್ರಸಾದನಿಗೆ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಅವರಿಂದ ಸನ್ಮಾನ ನಡೆದ ಸಂದರ್ಭ | Kannada Prabha

ಸಾರಾಂಶ

ಈಗಾಗಲೇ ಈಜು ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಕಲಬುರಗಿಯ ಉದಯೋನ್ಮುಖ ಈಜು ಪ್ರತಿಭೆ ಬಸವ ಪ್ರಸಾದ ಪಾಟೀಲ್‌ ಇದೀಗ ಅರಮನೆ ನಗರಿ ಮೈಸೂರಲ್ಲಿ ಅ. 11 ರಿಂದ ಆರಂಭವಾಗುತ್ತಿರುವ ದಸರಾ ಸಿಎಂ ಕಪ್‌ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾನೆ.

- ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿಈಗಾಗಲೇ ಈಜು ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಕಲಬುರಗಿಯ ಉದಯೋನ್ಮುಖ ಈಜು ಪ್ರತಿಭೆ ಬಸವ ಪ್ರಸಾದ ಪಾಟೀಲ್‌ ಇದೀಗ ಅರಮನೆ ನಗರಿ ಮೈಸೂರಲ್ಲಿ ಅ. 11 ರಿಂದ ಆರಂಭವಾಗುತ್ತಿರುವ ದಸರಾ ಸಿಎಂ ಕಪ್‌ ಈಜು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾನೆ.ಈಗಾಗಲೇ 3 ಬಾರಿ ಮೈಸೂರು ದಸರಾ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಬಸವ ಪ್ರಸಾದ್‌ 17 ವರ್ಷದೊಳಗಿನ ಈಜು ಸ್ಪರ್ಧೆಯಲ್ಲಿ ಈ ಬಾರಿ ಸಿಎಂ ಕಪ್‌ಗೆ ಗೆದ್ದು ಬೀಗುವ ಸಂಕಲ್ಪ ಮಾಡಿದ್ದಾನೆ. ಅದಕ್ಕೆ ತಕ್ಕಂತೆ ತಾಲೀಮು ಶುರು ಮಾಡಿದ್ದಾನೆ. ಆತನ ಯಶಸ್ಸಿಗೆ ಪೋಷಕರು, ಆತ ಓದುತ್ತಿರುವ ಎಸ್ಬಿಆರ್‌ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಆತನ ಗೆಳೆಯರು ಶುಭ ಕೋರಿದ್ದಾರೆ.ಇಲ್ಲಿನ ಶರಣಬಸವೇಶ್ವರ ರೆಸಿಡೆನ್ಸಿಯಲ್‌ ಪಬ್ಲಿಕ್‌ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ಬಸವ ಪ್ರಸಾದ ಪುಸ್ತಕ ವ್ಯಾಪಾರಿ ಜಗದೀಶ ಹಾಗೂ ಅತಿಥಿ ಉಪನ್ಯಾಸಕಿ ಮಹಾದೇವಿ ದಂಪತಿಯ ಪುತ್ರ. ಬಾಲ್ಯದಿಂದಲೇ ಈತನಿಗಿದ್ದ ಈಜಿನಲ್ಲಿದ್ದ ಆಸಕ್ತಿ ಇದೀಗ ಆತನನ್ನು ಈಜು ಕೊಳದ ಪ್ರತಿಭೆಯಾಗಿ ರೂಪಿಸಿದೆ. ಪೋಷಕರು ಮಗ ಬಸವ ಪ್ರಸಾದನ ಈಜು ಪ್ರತಿಭೆಗೆ ಬೆನ್ನೆಲುಬಾಗಿ ನಿಂತು ಬೆಂಬಲಿಸಿದ್ದಾರೆ.ಇತ್ತೀಚೆಗೆ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್-2026ರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಸವ ಪ್ರಸಾದ ಈಜು ಸ್ಪರ್ಧೆಗಳ ಬ್ರೆಸ್ಟ್ಸ್ಟ್ರೋಕ್ ವಿಭಾಗದ 50 ಮೀ, 100 ಮೀ, 200 ಮೀ, ಫ್ರೀಸ್ಟೈಲ್ ವಿಭಾಗದ 100 ಮೀ, 4x100 ಮೀ. ಮಿಡ್ಲೆರಿಲೇ, 4x50 ಮೀ. ಫ್ರೀಸ್ಟೈಲ್ ರಿಲೇ, 4x100 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಪ್ರಥಮ, 4x50 ಮೀಟರ ಮಿಡ್ಲ್‌ ರಿಲೇ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದು ಈಜುಕೊಳದಲ್ಲಿ ಮೀನಿನಂತೆ ಲೀಲಾಜಾಲವಾಗಿ ಈಜಾಡುವ ಮೂಲಕ ಪಾರಮ್ಯ ಮೆರೆದು ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್-2026ರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಬಸವ ಪ್ರಸಾದ್‌ ಮೈಸೂರು ದಸರಾ ಈಜು ಸ್ಪರ್ಧೆಗೆ ತಾಲೀಮು ಶುರು ಮಾಡಿದ್ದಾನೆ. ನನ್ನ ಮಗ 5 ವರ್ಷದವನಿದ್ದಾಗಲೇ ಈಜಿನಲ್ಲಿ ಆಸಕ್ತಿ ತೋರಿದ್ದ. ಅಂದಿನಿಂದ ಇಂದಿನವರೆಗೂ ಆತ ಅದನ್ನು ಪೋಷಿಸಿಕೊಂಡು ಹೊರಟಿದ್ದಾನೆ. ಗಟ್ಟಿ ಆರೋಗ್ಯಕ್ಕೆ ಈಜು ಉತ್ತಮ. ಮಗ ಪ್ರತಿಭಾವಂತನಾಗಿರುವುದು ನಮಗೆಲ್ಲ ಹೆಮ್ಮೆ. ಈಗಾಗಲೇ 3 ಬಾರಿ ದಸರಾ ಕ್ರೀಡಾಕೂಟಕ್ಕೆ ಹೋಗಿ ಬಂದರೂ ಬಹುಮಾನ ಬಂದಿಲ್ಲ. ಈ ಬಾರಿ ಸಿಎಂ ಕಪ್‌ಗೆ ಲಗ್ಗೆ ಇಡುವ ಉತ್ಸಾಹದಲ್ಲಿದ್ದಾನೆ ಎಂದು ಆತನ ಪೋಷಕರಾದ ಜಗದೀಶ, ಮಹಾದೇವಿ ಹೇಳಿದರು.ಬ್ರೆಸ್ಟ್‌ ಸ್ಟ್ರೋಕ್‌ ವಿಭಾಗದಲ್ಲಿ ಚೆನ್ನಾಗಿ ಪಳಗಿರುವ ಬಸವ ಪ್ರಸಾದ್‌ ಹೊಸ ತಂತ್ರಗಳೊಂದಿಗೆ ಈಜು ಕೊಳದಲ್ಲಿ ತನ್ನ ಪರಾಕ್ರಮ ತೋರಿಸುತ್ತಿದ್ದಾನೆಂದು ಆತನ ಕೋಚ್‌ಗಳೇ ತಿಳಿಸಿದ್ದಾರೆ.ಕಲಬುರಗಿಯ ಚಂಪಾ ಕ್ರೀಡಂಗಣದಲ್ಲಿ ಈಜು ಕೋಚ್‌ಗಳ ಲಭ್ಯತೆ ಅಷ್ಟಾಗಿಲ್ಲ. ಹೀಗಾಗಿ ಮಗನ ಸಾಧನೆಗೆ ಇದು ಬಹುದೊಡ್ಡ ಕೊರತೆಯಾಗಿದೆ ಎನ್ನುವ ಜೀಶ ಪಾಟೀಲ್‌ ಇದೀಗ ಖಾಸಗಿಯಾಗಿ ಕ್ಲಬ್‌ ಒಂದರಲ್ಲಿರುವ ಈಜು ಕೊಳ, ಖಾಸಗಿ ಕೋಚ್‌ಗಳನ್ನೇ ಬಳಸಿ ಮಗನಿಗೆ ಈಜಿನಲ್ಲಿ ತರಬೇತಿ ಕೊಡಿಸುತ್ತಿದ್ದಾರೆ.ಶರಣಬಸವೇಶ್ವರ ಶಾಲೆಯಲ್ಲಿ ಎಸ್ಸೆಸೆಲ್ಸಿಯಲ್ಲಿ ಶೇ. 96 ಅಂಕ ಪಡೆದು ಅಪ್ಪಾ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿರುವ ಬಸವಪ್ರಸಾದ ಓದಿನಲ್ಲೂ ಮುಂದಿದ್ದಾನೆ. ಈತನ ಪ್ರತಭೆಗೆ ಎಸ್‌ಬಿಆರ್‌ನ ಪ್ರಾಚಾರ್ಯ ಎನ್‌ ಎಸ್ ದೇವರಕಲ್‌, ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ, ಕಾಲೇಜಿನ ಉಪನ್ಯಾಸಕರು ಬೆಂಬಲವಾಗಿದ್ದಾರೆ ಎಂದು ಜಗದೀಶ ಪಾಟೀಲ್‌ ಹೇಳುತ್ತಾರೆ.

ಮಗ ಬಸವ ಪ್ರಸಾದ್‌ ಬಲಿ ಈಗ 60 ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈಜ ಸ್ಪರ್ಧೆಯಲ್ಲಿ ಗೆದ್ದಿರುವ, ಪಾಲ್ಗೊಂಡಿರುವ ಪ್ರಮಾಣ ಪತ್ರ, ಕಪ್‌ಗಳಿವೆ. ಬಾಲ ಗೌರವ ಪುರಸ್ಕಾರವೂ ಲಭಿಸಿದೆ. ರಾಷ್ಟ್ರೀಯ ಈಜು ಒಕ್ಕೂಟ, ಸಾಲಾ ಶಿಕ್ಷಣ ಇಲಾಖೆ, ಮಿನಿ ಓಲಂಪಿಕ್‌ನಲ್ಲೂ ಈತ ಪಾಲ್ಗೊಂಡಿದ್ದಾನೆ. ಇನ್ನೂ ಹೆಚ್ಚು ತರಬೇತಿ ಪಡೆದು ಈಜಿನಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತ ಪ್ರತಿನಿಧಿಸುವ ಆಶೆ ಇವನದ್ದಾಗಿದೆ. ಶರಣಬಸವೇಶ್ವರರ ಕೃಪೆ ಅವನಿಗೆ ಸದಾ ಇದೆ. ಎಸ್ಬಿಆರ್‌ ಶಾಲೆ, ಕಾಲೇಜಿನಲ್ಲಿ ಬಸವಪ್ರಸಾದನ ಹವ್ಯಾಸಕ್ಕೆ ಸದಾಕಾಲ ಬೆಂಬಲ ನೀಡುತ್ತ ಬಂದಿರೋದು ನಮಗೆ ಖುಷಿ ಕೊಟ್ಟಿದೆ ಎಂದು ಪಾಲಕರಾದ ಜಗದೀಶ ಪಾಟೀಲ್‌, ಮಹಾದೇವಿ ಪಾಟೀಲ್‌ ತಿಳಿಸಿದರು.ಜಗದೀಶ ಪಾಟೀಲ್‌ ಕೂಡಾ ಈಜು ಪಟುವಾಗಿದ್ದು, ಮಗನಿಗೆ ನನ್ನ ಹವ್ಯಾಸವೇ ಬಳುವಳಿಯಾಗಿ ಬಂದಿದೆ ಎಂದು ಹೇಳಿದ್ದಾರೆ. ದೆಹಲಿ, ಬೆಂಗಳೂರು, ಉಡುಪಿಯಲ್ಲಿ ನಡೆದ ಈಜು ರಾಜ್ಯ, ರಾಷ್ಟ್ರೀಯ ಸ್ಪರ್ಧೆ, ಮಿನಿ ಓಲಂಪಿಕ್‌ನಲ್ಲಿ ಪಾಲ್ಗೊಂಡು ಬೆಳ್ಳಿ ಸಹಿತ ಹಲವು ಪದಕ, ಪುರಸ್ಕಾರ ಗೆದ್ದಿರುವ ಬಸವ ಪ್ರಸಾದ ಇದೀಗ ದಸರಾ ಕ್ರೀಡಾಕೂಟದಲ್ಲಿ ತನ್ನ ಈಜು ಪ್ರತಿಭೆ ಮೆರೆದು ಸಿಎಂ ಕಪ್‌ ಗೆದ್ದು ಬೀಗುವ ಛಲದೊಂದಿಗೆ ಅರಮನೆ ನಗರಿಗೆ ಹೊರಟು ನಿಂತಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ