ಎಸ್ಸಿ 101 ಉಪಜಾತಿ ಒಳ ಮೀಸಲಾತಿಗೆ ಒಪ್ಪಿಗೆ

KannadaprabhaNewsNetwork |  
Published : Dec 19, 2025, 02:15 AM IST
session

ಸಾರಾಂಶ

ಪರಿಶಿಷ್ಟ ಜಾತಿಗಳ 101 ಉಪಜಾತಿಗಳಿಗೆ ಮೂರು ಪ್ರವರ್ಗಗಳಾಗಿ ಒಳ ಮೀಸಲಾತಿ ನೀಡುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಯಿತು. ವಿಧೇಯಕಕ್ಕೆ ಆಡಳಿತ ಮತ್ತು ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸದೆ ಅನುಮೋದನೆ ನೀಡಿದರು.

  ಸುವರ್ಣ ವಿಧಾನಸಭೆ :  ಪರಿಶಿಷ್ಟ ಜಾತಿಗಳ 101 ಉಪಜಾತಿಗಳಿಗೆ ಮೂರು ಪ್ರವರ್ಗಗಳಾಗಿ ಒಳ ಮೀಸಲಾತಿ ನೀಡುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಯಿತು.

ಗುರುವಾರ ಸಮಾಜ ಕಲ್ಯಾಣ ಸಚಿವ ಡಾ। ಎಚ್‌.ಸಿ.ಮಹದೇವಪ್ಪ ಅನುಮೋದನೆಗಾಗಿ ಮಂಡಿಸಿದ ವಿಧೇಯಕಕ್ಕೆ ಆಡಳಿತ ಮತ್ತು ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸದೆ ಅನುಮೋದನೆ ನೀಡಿದರು.

ಅದಕ್ಕೂ ಮುನ್ನ ಚರ್ಚೆ ವೇಳೆ ಬಹುತೇಕ ಎಲ್ಲ ಶಾಸಕರು, ಪರಿಶಿಷ್ಟ ಜಾತಿಗಳಿಗೆ ನಿಗದಿ ಮಾಡಲಾಗಿರುವ ಶೇ.17 ಮೀಸಲಾತಿಯನ್ನು ಶೇ.18 ಅಥವಾ 19ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು. ಆದರೆ, ಸರ್ಕಾರದಿಂದ ಅದಕ್ಕೆ ಯಾವುದೇ ಅಧಿಕೃತ ಉತ್ತರ ಸಿಗದೆ ಈಗಾಗಲೇ ನಿಗದಿಯಾಗಿರುವ ಶೇ.17ರ ಮೀಸಲಾತಿಯನ್ನು ಮೂರು ಪ್ರವರ್ಗಗಳಿಗೆ ಹೆಚ್ಚಿಸಲು ಅವಕಾಶ ಕಲ್ಪಿಸಿರುವ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ

ವಿಧೇಯಕ ಮಂಡಿಸಿ ಮಾತನಾಡಿದ ಮಹದೇವಪ್ಪ, ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ಅದರಂತೆ ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ ಒಳಮೀಸಲಾತಿ ನೀಡುವ ಸಂಬಂಧ 2024ರ ಆ.1ರಂದು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು. ಅದರಂತೆ ನೇಮಕಾತಿಯನ್ನೂ ಸ್ಥಗಿತಗೊಳಿಸಿ, ಒಳಮೀಸಲಾತಿಗೆ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ನ್ಯಾ. ನಾಗಮೋಹನ್‌ದಾಸ್‌ ಅವರ ಏಕಸದಸ್ಯ ಆಯೋಗ ರಚಿಸಲಾಯಿತು. ಆಯೋಗವು 5 ಪ್ರವರ್ಗಗಳ ನಡುವೆ ಮೀಸಲಾತಿ ಹಂಚಿಕೆ ಮಾಡಿ ವರದಿ ನೀಡಿತ್ತು. ಅದನ್ನಾಧರಿಸಿ, 101 ಉಪಜಾತಿಗಳನ್ನು 3 ಪ್ರವರ್ಗಗಳನ್ನಾಗಿ ವಿಂಗಡಿಸಿ ಪ್ರವರ್ಗ ‘ಎ’ನಲ್ಲಿ 16 ಜಾತಿಗಳನ್ನು ಸೇರಿಸಿ ಶೇ.6, ಪ್ರವರ್ಗ ‘ಬಿ’ನಲ್ಲಿ 19 ಜಾತಿಗಳನ್ನು ಸೇರಿಸಿ ಶೇ.6 ಹಾಗೂ ಪ್ರವರ್ಗ ‘ಸಿ’ನಲ್ಲಿ 63 ಜಾತಿಗಳನ್ನು ಸೇರಿಸಿ ಶೇ.5 ಮೀಸಲಾತಿ ಹಂಚಿಕೆ ಮಾಡಲಾಗಿದೆ. ಈ ವಿಧೇಯಕದ ಮೂಲಕ ಯಾರಿಗಾದರೂ ಅನ್ಯಾಯವಾಗಿದೆ ಎಂದಾದರೆ ಅದರ ಬಗ್ಗೆ ಮನವಿ ನೀಡಿದರೆ, ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.

ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಜೆಪಿಯ ಅರವಿಂದ್‌ ಬೆಲ್ಲದ್‌, ಧುರ್ಯೋಧನ ಐಹೊಳೆ, ಚಂದ್ರು ಲಮಾಣಿ, ಬಸವರಾಜ ಮತ್ತಿಮುಡ್‌, ಕೃಷ್ಣಾ ನಾಯಕ್‌, ಜೆಡಿಎಸ್‌ನ ಎಚ್‌.ಡಿ.ರೇವಣ್ಣ, ಶಾರದಾ ಪೂರ್‍ಯಾನಾಯಕ್‌, ಕಾಂಗ್ರೆಸ್‌ನ ಬಸವರಾಜ ರಾಯರೆಡ್ಡಿ, ಶಿವಲಿಂಗೇಗೌಡ ಸೇರಿದಂತೆ ಇತರರು ವಿಧೇಯಕದ ಉದ್ದೇಶವನ್ನು ಸ್ವಾಗತಿಸಿದರು.

ಅಲ್ಲದೆ, ಈ ವಿಧೇಯಕದ ಮೂಲಕ ಮೀಸಲಾತಿ ಪ್ರಮಾಣ ಶೇ.56ಕ್ಕೆ ಹೆಚ್ಚಳವಾಗುವಂತಾಗಿದೆ. ಹಾಗಿದ್ದ ಮೇಲೆ ಇನ್ನೂ ಶೇ.1ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.18 ಅಥವಾ ಶೇ.19ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು. ಅಲ್ಲದೆ, ಬಂಜಾರ, ಕೊರಚ, ಕೊರಮ, ಬೋವಿ, ಅಲೆಮಾರಿ ಜನಾಂಗಕ್ಕೆ ಒಳಮೀಸಲಾತಿ ಪ್ರವರ್ಗ ರಚನೆ ಮತ್ತು ಒಳಮೀಸಲಾತಿ ಹಂಚಿಕೆಯಿಂದ ಅನ್ಯಾಯವಾಗುತ್ತಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ.18ರಿಂದ 19ಕ್ಕೆ ಹೆಚ್ಚಿಸಿ ಅನ್ಯಾಯಕ್ಕೆ ಒಳಗಾಗುವ ಅಲೆಮಾರಿ ಜನಾಂಗಕ್ಕೆ ಹೆಚ್ಚುವರಿ ಒಳಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು. ಅದನ್ನು, ಈಗ ಮಂಡಿಸಲಾಗಿರುವ ವಿಧೇಯಕದಲ್ಲಿಯೇ ಸೇರಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಹಠಾವೋ ಅಭಿಯಾನ:

ಬಿಜೆಪಿಯ ಚಂದ್ರು ಲಮಾಣಿ ಮಾತನಾಡಿ, ‘ಸಿ’ ಪ್ರವರ್ಗದಲ್ಲಿ ಅಲೆಮಾರಿಗಳನ್ನು ಸೇರಿಸಿರುವುದು ಅನ್ಯಾಯ ಮಾಡಿದಂತಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ನಾಲ್ಕು ಪ್ರವರ್ಗ ರೂಪಿಸಿ ಶೇ.6, ಶೇ.5.5, ಶೇ.4.5 ಮತ್ತು ಅಲೆಮಾರಿಗಳಿಗೆ ಶೇ.1ಅನ್ನು ನೀಡಲಾಗಿತ್ತು. ನಾಗಮೋಹನ್‌ ದಾಸ್‌ ವರದಿಯಲ್ಲೂ ಅದೇ ಅಂಶಗಳಿದ್ದವು. ಆದರೆ, ಈಗ ‘ಸಿ’ ಪ್ರವರ್ಗದ 63 ಜಾತಿಗಳೊಂದಿಗೆ ಅಲೆಮಾರಿಗಳನ್ನು ಸೇರಿಸಲಾಗಿದೆ. ಅದರ ಜತೆಗೆ ಬಂಜಾರ, ಕೊರಚ, ಕೊರಮ, ಬೋವಿ ಸಮಾಜದವರನ್ನೂ ಅದಕ್ಕೆ ಸೇರಿಸಲಾಗಿದೆ. ಇದು ಅಲೆಮಾರಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಅಲೆಮಾರಿಗಳಿಗೆ ಹೆಚ್ಚುವರಿಯಾಗಿ ಶೇ.1 ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆ ವೇಳೆಗೆ ‘ಕಾಂಗ್ರೆಸ್‌ ಹಠಾವೋ-ತಾಂಡಾ ಬಚಾವೋ’ ಅಭಿಯಾನ ಆರಂಭವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಚಿವರ ಉತ್ತರಕ್ಕೆ ಅವಕಾಶವಿಲ್ಲ:

ಸದಸ್ಯರ ಚರ್ಚೆ ನಂತರ ಸಚಿವ ಡಾ। ಎಚ್‌.ಸಿ.ಮಹದೇವಪ್ಪ ಉತ್ತರ ನೀಡಲು ಸ್ಪೀಕರ್‌ ಅವಕಾಶ ನೀಡುತ್ತಾರೆ ಎಂದು ಕಾಯುತ್ತಿದ್ದರು. ಶಾಸಕರೂ ಕೂಡ ಸಚಿವರು ಮೀಸಲಾತಿ ಪ್ರಮಾಣ ಹೆಚ್ಚಳದ ಕುರಿತು ಮಾತನಾಡುತ್ತಾರೆ ಎಂದು ತಿಳಿದಿದ್ದರು. ಅದಕ್ಕೆ ಅವಕಾಶ ನೀಡದ ಸ್ಪೀಕರ್‌ ಯು.ಟಿ.ಖಾದರ್‌, ವಿಧೇಯಕಕ್ಕೆ ಶಾಸಕರ ಒಪ್ಪಿಗೆ ಕೋರುವಂತೆ ಸಚಿವರಿಗೆ ಸೂಚಿಸಿದರು. ಅದರಿಂದ ಕ್ಷಣಕಾಲ ಗೊಂದಲಕ್ಕೆ ಒಳಗಾದ ಡಾ। ಎಚ್‌.ಸಿ.ಮಹದೇವಪ್ಪ, ನಂತರ ಸಾವರಿಸಿಕೊಂಡು ವಿಧೇಯಕ ಪರ್ಯಾಲೋಚಿಸಿ ಒಪ್ಪಿಗೆ ಕೋರಿದರು.

ಅನುಮೋದನೆಗೆ ಕೈ ಶಾಸಕ ವಿರೋಧ:

ವಿಧೇಯಕದ ಮೇಲೆ ಮತ್ತಷ್ಟು ಶಾಸಕರು ಚರ್ಚೆಗೆ ಕಾಯುತ್ತಿದ್ದರು ಮತ್ತು ಮೀಸಲಾತಿ ಹೆಚ್ಚಳದ ಕುರಿತು ಸಚಿವರ ಉತ್ತರದ ನಿರೀಕ್ಷೆಯಲ್ಲಿದ್ದರು. ಅಷ್ಟರೊಳಗೆ ಸ್ಪೀಕರ್‌ ಯು.ಟಿ. ಖಾದರ್‌, ವಿಧೇಯಕ ಪರ್ಯಾಲೋಚನೆಗಾಗಿ ರೂಲಿಂಗ್‌ ನೀಡಿದರು. ಹೀಗಾಗಿ ಸಿಟ್ಟಾದ ಜೆಡಿಎಸ್‌ನ ಶಾರದಾ ಪೂರ್‍ಯಾನಾಯಕ್‌, ನೇಮಿರಾಜ್‌ ನಾಯಕ್‌ ಸೇರಿ ಹಲವರು ಸದನದ ಬಾವಿಗಿಳಿದು ಸ್ಪೀಕರ್‌ ನಡೆ ಖಂಡಿಸಿದರು. ಇನ್ನು, ಕೊಳ್ಳೆಗಾಲ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೃಷ್ಣಮೂರ್ತಿ ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದಾಗ, ವಿಧೇಯಕಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಕೂಗಿದರು.

ಕೆ.ಎಚ್‌.ಮುನಿಯಪ್ಪ ಧನ್ಯವಾದ:

ವಿಧೇಯಕಕ್ಕೆ ಪಕ್ಷಾತೀತವಾಗಿ ಒಪ್ಪಿಗೆ ನೀಡಿ ಒಳಮೀಸಲಾತಿ ಜಾರಿಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷ, ಆಡಳಿತ ಮತ್ತು ವಿಪಕ್ಷ ಶಾಸಕರಿಗೆ ಸದನದಲ್ಲಿಯೇ ಧನ್ಯವಾದ ಅರ್ಪಿಸಿದರು.

ಕಾನೂನು ತೊಡಕು ನಿವಾರಣೆ:

ಒಳಮೀಸಲಾತಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದ್ದರೂ, ಅದಕ್ಕೆ ಕಾಯ್ದೆ ರೂಪ ನೀಡಿರಲಿಲ್ಲ. ಹೀಗಾಗಿ ಒಳಮೀಸಲಾತಿ ಕುರಿತಂತೆ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳಿದ್ದವು. ಇದೀಗ ಒಳಮೀಸಲಾತಿಗೆ ಕಾಯ್ದೆ ರೂಪ ನೀಡಿರುವ ಕಾರಣದಿಂದಾಗಿ ಕಾನೂನು ತೊಡಕು ನಿವಾರಣೆ ಆಗುವಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು