ಎಸ್‌ಸಿ, ಎಸ್‌ಟಿ ಉಪಯೋಜನೆ ಕಾರ್ಯಕ್ರಮ ಪ್ರಗತಿ ಸಾಧಿಸಿ: ಡಿಸಿ

KannadaprabhaNewsNetwork | Published : Nov 10, 2023 1:00 AM

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ

ಕನ್ನಡಪ್ರಭ ವಾರ್ತೆ ಮಡಿಕೇರಿಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾರ್ಯಕ್ರಮಗಳನ್ನು ಆದಷ್ಟು ಶೀಘ್ರ ಆದ್ಯತೆ ಮೇಲೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಇಂತಿಷ್ಟು ಹಣ ಎಂದು ನಿಗದಿ ಮಾಡಿದ್ದು, ಪ್ರಥಮ ಆದ್ಯತೆಯಲ್ಲಿ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.

ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಮಾರ್ಚ್-ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಆದ್ದರಿಂದ ಆದಷ್ಟು ಶೀಘ್ರ ಇಲಾಖೆ ಕಾರ್ಯಕ್ರಮಗಳ ಆರ್ಥಿಕ ಮತ್ತು ಭೌತಿಕ ಗುರಿಯ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಆಶಯವನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಕಚೇರಿ ಮುಖ್ಯಸ್ಥರ ಜವಾಬ್ದಾರಿ ಹೆಚ್ಚಿನದ್ದಾಗಿದೆ. ಆ ನಿಟ್ಟಿನಲ್ಲಿ ಆದ್ಯತೆ ಮೇಲೆ ಪರಿಶಿಷ್ಟರಿಗೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಕಾಲಮಿತಿಯಲ್ಲಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಎಸ್.ಹೊನ್ನೇಗೌಡ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗೌರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ನಟರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಧಿಕಾರಿ ಬಿಂದು, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಸಪ್ಪ, ಸಾರಿಗೆ ಇಲಾಖೆಯ ರೀಟಾ, ಕೌಶಲಾಭಿವೃದ್ಧಿ ಇಲಾಖೆಯ ಅಧಿಕಾರಿ ಉಮಾ, ಪಂಚಾಯತ್‌ರಾಜ್ ಎಂಜಿನಿಯರ್ ಸುರೇಶ್ ಕುಮಾರ್, ಮುತ್ತುರಾಜು, ಜಿಲ್ಲಾ ಆಯುಷ್ ಅಧಿಕಾರಿ ರೇಣುಕಾದೇವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ರಘು, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಸ್ವಾಮಿ ಅವರು ತಮ್ಮ ಇಲಾಖೆಯ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದರು.

Share this article