ಕನ್ನಡಪ್ರಭ ವಾರ್ತೆ ವಿಧಾನಸಭೆ
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಂಡಿಸಿದ ವಿಧೇಯಕದ ಪ್ರಕಾರ, 101 ಎಸ್ಸಿ ಜಾತಿಗಳ ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ 3 ಜಾತಿಗಳನ್ನು ಹೊರತುಪಡಿಸಿ 98 ಜಾತಿಗಳನ್ನು ಮೂರು ಪ್ರವರ್ಗಗಳಿಗೆ ವರ್ಗೀಕರಣ ಮಾಡಲಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಜತೆಗೆ, ಅಲೆಮಾರಿಗಳು ಹಾಗೂ ಸೂಕ್ಷ್ಮ ಸಮುದಾಯಗಳಿಗೆ ಆದ ಅನ್ಯಾಯ ತಪ್ಪಿಸಲು ಸಿ-ವರ್ಗದ ಶೇ.5 ಒಳ ಮೀಸಲಾತಿಯಲ್ಲಿ ಪ್ರತಿ ಐದು ಹುದ್ದೆ ಅಥವಾ ಸ್ಥಾನಗಳ ಪೈಕಿ ಒಂದನ್ನು ಲಂಬಾಣಿ, ಬಂಜಾರ, ಭೋವಿ, ಕೊರಚ, ಕೊರಮ ಜಾತಿಗಳನ್ನು ಹೊರತಾದ 59 ಜಾತಿಗಳಿಗೆ ಮೀಸಲಿಡಲು ಪ್ರಸ್ತಾಪಿಸಲಾಗಿದೆ.
ಆ ಮೂಲಕ ಅಲೆಮಾರಿಗಳಿಗೆ ಅನ್ಯಾಯ ತಪ್ಪಿಸಲು ಒಳ ಮೀಸಲಾತಿಯಲ್ಲೇ ಪರೋಕ್ಷ ಒಳ ಮೀಸಲು ಒದಗಿಸಲು ವಿಧೇಯಕದಲ್ಲಿ ಮಹತ್ವದ ಪ್ರಸ್ತಾಪ ಮಾಡಲಾಗಿದೆ. ಈ ಸಂಬಂಧ ಬೇಡಿಕೆ ಮುಂದಿಟ್ಟು ಅಲೆಮಾರಿ ಸಮುದಾಯ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನೂ ನಡೆಸಿತ್ತು.ಮೀಸಲಾತಿ ವರ್ಗೀಕರಣ ಹೇಗೆ?:
ಪ್ರವರ್ಗ- ಎ ಅಡಿ ಬರುವ ಮಾದಿಗ, ಚಂಬಾರ (ಮಾದರ, ಚಮ್ಮಾರ), ಚಂಡಾಲ, ಪಂಚಮ ಸೇರಿ 16 ಜಾತಿಗಳಿಗೆ ಶೇ.6 ಮೀಸಲಾತಿ ನಿಗದಿ ಮಾಡಲಾಗಿದೆ.ಉಳಿದಂತೆ ಪ್ರವರ್ಗ-ಬಿ ಅಡಿ ಬಲಗೈ, ಛಲವಾದಿ, ಮಾಲ, ಮಾಲ ಜಂಗಮ, ಮೊಗೇರ ಸೇರಿ 19 ಜಾತಿಗಳಿಗೆ ಶೇ.6 ಮೀಸಲಾತಿ ಪ್ರಸ್ತಾಪಿಸಲಾಗಿದೆ. ಉಳಿದಂತೆ ಪ್ರವರ್ಗ-ಸಿ ಅಡಿ ಆದಿಯಾ, ಅಗೇರ, ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ 63 ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನೀಡಲಾಗಿದೆ.
ಪ್ರವರ್ಗ-ಸಿ ಒಳಮೀಸಲಾತಿಯಲ್ಲೇ ಮೀಸಲು:ಈ ಪ್ರವರ್ಗ-ಸಿ ಪೈಕಿ ಭೋವಿ, ಬಂಜಾರ, ಕೊರಚ, ಕೊರಮ (ಜಾತಿ ಸಂಕೇತ- 17,23,53,54) ನಾಲ್ಕು ಜಾತಿ ಹೊರತುಪಡಿಸಿ ಉಳಿದೆಲ್ಲ 59 ಜಾತಿಗಳು ಅತಿ ಹಿಂದುಳಿದ, ಅಲೆಮಾರಿ ಸಮುದಾಯಕ್ಕೆ ಸೇರಿದವು.
ಅವುಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವ ನ್ಯಾ. ನಾಗಮೋಹನ್‌ದಾಸ್ ಆಯೋಗ ಶಿಫಾರಸು ತಿರಸ್ಕರಿಸಿ ಭೋವಿ, ಬಂಜಾರ ಸಮುದಾಯದ ಜತೆಗೆ ಸೇರಿಸಲಾಗಿತ್ತು. ಇದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಜೋರಾಗಿತ್ತು.ಅನ್ಯಾಯ ಸರಿಪಡಿಸುವ ಪ್ರಯತ್ನವಾಗಿ ಅನುಸೂಚಿತ ಜಾತಿಗಳ ಪ್ರವರ್ಗ -ಸಿ ಪಟ್ಟಿಯಲ್ಲಿ ಲಂಬಾಣಿ, ಬಂಜಾರ, ಭೋವಿ, ಕೊರಚ, ಕೊರಮ (ಜಾತಿ ಸಂಕೇತ- 17,23,53,54) ಇವುಗಳನ್ನು ಹೊರತುಪಡಿಸಿದ 59 ಜಾತಿಗಳಿಗೆ ಪ್ರತಿ ಐದು ಸರ್ಕಾರಿ ಹುದ್ದೆ ಅಥವಾ ಶೈಕ್ಷಣಿಕ ಸ್ಥಾನಗಳ ಪೈಕಿ ಕನಿಷ್ಠ ಒಂದನ್ನು ಮೀಸಲಿಡಬೇಕು.
ಒಂದು ವೇಳೆ ಪ್ರವರ್ಗ-ಸಿ ಯ 59 ಜಾತಿಗಳಡಿ ಯಾವುದೇ ಅರ್ಹ ಅಭ್ಯರ್ಥಿಗಳು ಮೀಸಲಿಟ್ಟಿರುವ ಐದರಲ್ಲಿನ ಒಂದು ಹುದ್ದೆಗೆ ಲಭ್ಯವಿದ್ದರೆ ಮಾತ್ರ ಅಂತಹ ಹುದ್ದೆಗಳು ಅಥವಾ ಸ್ಥಾನಗಳನ್ನು ಉಳಿದ ನಾಲ್ಕು (ಜಾತಿ ಸಂಕೇತ 17,23,53,54) ಜಾತಿಗಳಿಂದ ಭರ್ತಿ ಮಾಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.ಎಕೆ, ಎಡಿ, ಎಎ ಜಾತಿಗೆ ‘ಎ’ ಹಾಗೂ ‘ಬಿ’ ಒಂದರಲ್ಲಿ ಆಯ್ಕೆ:
101 ಎಸ್ಸಿ ಜಾತಿಗಳ ಪೈಕಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಜಾತಿಗಳನ್ನು ಹೊರಗಿಟ್ಟು 98 ಜಾತಿಗಳನ್ನು ಮಾತ್ರ ಪ್ರವರ್ಗ-ಎ, ಬಿ ಹಾಗೂ ಸಿ ಅಡಿ ವರ್ಗಕರಣ ಮಾಡಲಾಗಿದೆ.ಈ ಮೂರು ಜಾತಿಗಳನ್ನೂ ಯಾವ ಪ್ರವರ್ಗದಲ್ಲೂ ಉಲ್ಲೇಖಿಸಿಲ್ಲ. ಆದರೆ, ಆದರೆ ಸಂವಿಧಾನದ ಅನುಸೂಚಿತ ಜಾತಿಗಳ ಪಟ್ಟಿ-1950ರ ಅಡಿ ಎಸ್ಸಿ ಮೀಸಲಾತಿಗೆ ಅರ್ಹರಾಗಿದ್ದಾರೆ. ಹೀಗಾಗಿ 2025 ರ ಅ.9 ರಂದು ನಿರ್ದಿಷ್ಟಪಡಿಸಲಾದ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಪ್ರವರ್ಗ-ಎ ಅಥವಾ ಪ್ರವರ್ಗ-ಬಿ ಇವುಗಳಡಿ ಯಾವುದಾದರೂ ಒಂದು ಪ್ರವರ್ಗದ ಮೀಸಲಾತಿಗಾಗಿ ಆಯ್ಕೆ ಮಾಡಿಕೊಳ್ಳಲು ಎಕೆ, ಎಡಿ, ಎಎ ಜಾತಿಯವರು ಅರ್ಹರಿರುತ್ತಾರೆ ಎಂದು ವಿಧೇಯಕದಲ್ಲಿ ಹೇಳಲಾಗಿದೆ.
ಕೇಂದ್ರದ ಹುದ್ದೆಗಳಿಗೆ ಅನ್ವಯವಿಲ್ಲ:ಈ ಎಸ್ಸಿ ಒಳ ಮೀಸಲಾತಿಯು ಕೇಂದ್ರ ಸರ್ಕಾರದ ಯಾವುದೇ ಇಲಾಖೆ, ಕೇಂದ್ರದ ಒಡೆತನದ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ, ಉದ್ಯಮ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿದ, ನಿಯಂತ್ರಣದಲ್ಲಿರುವ ಯಾವುದೇ ಶಿಕ್ಷಣ ಸಂಸ್ಥೆಗಳು ಅಥವಾ ಸಂಸ್ಥೆಗಳ ಹುದ್ದೆಗಳಿಗೆ ಅನ್ವಯವಾಗುವುದಿಲ್ಲ.ದಾವೆ, ಕಾನೂನು ಕ್ರಮಕ್ಕೆ ಅವಕಾಶವಿಲ್ಲ:
ಸದ್ಭಾವನೆಯಿಂದ ಕೈಗೊಂಡ ಕ್ರಮದ ರಕ್ಷಣೆ ಒದಗಿಸಿದ್ದು, ಈ ನಿಯಮಗಳಡಿ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಕಾರ್ಯಕ್ಕಾಗಿ ಪ್ರಾಧಿಕಾರ ಅಥವಾ ವ್ಯಕ್ತಿಗಳ ವಿರುದ್ಧ ಯಾವುದೇ ದಾವೆ ಅಥವಾ ಕಾನೂನು ಕ್ರಮಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ.ಶೇಕಡಾವಾರು ಮೀಸಲಾತಿ ಸರ್ಕಾರಿ ನೇಮಕಾತಿಗಳಿಗೆ ಸಂಬಂಧಿಸಿದ ಬ್ಯಾಕ್‌ಲಾಗ್ ಖಾಲಿ ಹುದ್ದೆಗಳಿಗೂ ಅನ್ವಯವಾಗತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.