1950ರಿಂದಲೂ ಭಾರತವನ್ನು ಬಡವಾಗಿಸಿದ ಹಗರಣಗಳು

KannadaprabhaNewsNetwork | Updated : Feb 28 2024, 01:25 PM IST

ಸಾರಾಂಶ

1950ನೇ ದಶಕದಿಂದ ಇಲ್ಲಿಯವರೆಗೂ ಜೀಪ್, ಬೋಪೋರ್ಸ್, ಕಾಮನ್‌ವೆಲ್ತ್‌ ಕ್ರೀಡಾಕೂಟ, ಕಲ್ಲಿದ್ದಲು ಮತ್ತು 2ಜಿ ಹಗರಣಗಳು ದೇಶವನ್ನು ಬಡವಾಗಿಸಿವೆ. ಇಂದಿಗೂ ಇದೇ ಸ್ಥಿತಿ ಮುಂದುವರಿದಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

1950ನೇ ದಶಕದಿಂದ ಇಲ್ಲಿಯವರೆಗೂ ಜೀಪ್, ಬೋಪೋರ್ಸ್, ಕಾಮನ್‌ವೆಲ್ತ್‌ ಕ್ರೀಡಾಕೂಟ, ಕಲ್ಲಿದ್ದಲು ಮತ್ತು 2ಜಿ ಹಗರಣಗಳು ದೇಶವನ್ನು ಬಡವಾಗಿಸಿವೆ. ಇಂದಿಗೂ ಇದೇ ಸ್ಥಿತಿ ಮುಂದುವರಿದಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಂಡ್ಯ ಜಿಲ್ಲಾ ಘಟಕಗಳು ಜಂಟಿ ಸಹಯೋಗದಲ್ಲಿ ಶಂಕರಘಟ್ಟದ ಕುವೆಂಪು ವಿ.ವಿ.ಯ ಬಸವ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ''''''''ವಿಶ್ವ ಸಾಮಾಜಿಕ ನ್ಯಾಯ ಮತ್ತು ಹೆಣ್ಣುಮಕ್ಕಳ ಹಕ್ಕುಗಳು: ಕಾನೂನು ಅರಿವು'''''''' ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಸ್ಯೆಗಳ ಸೃಷ್ಟಿ:  ಇಂದು ಶ್ರೀಮಂತರಾಗಲು ಎಲ್ಲರೂ ಬಯಸುತ್ತಾರೆ, ಹಣವಂತರಿಗೆ ಗೌರವ ನೀಡುತ್ತಾರೆ. ಆದರೆ, ನೈತಿಕ ಹಾದಿಯಲ್ಲಿ ಸಿರಿವಂತರಾಗಿದ್ದಾರೆಯೇ ಎಂಬ ಬಗ್ಗೆ ಯಾರಿಗೂ ಗಮನವಿಲ್ಲವಾಗಿರುವುದು, ಅನೈತಿಕರಿಗೆ ಮನ್ನಣೆ ದೊರೆಯುತ್ತಿರುವುದು ಭ್ರಷ್ಟಾಚಾರ ಸರ್ವತ್ರವಾಗಲು ಕಾರಣ. 

ಮನುಷ್ಯನ ದುರಾಸೆಯಿಂದ ಭ್ರಷ್ಟಾಚಾರ ಮಾಡಿ ಸಂಪತ್ಭರಿತರಾದವರು ಇನ್ನಷ್ಟು ಲಂಚ ಪಡೆಯುವುದು, ಸೋಮಾರಿತನ ಬೆಳೆಸುವುದು, ಅಧಿಕಾರ ಕೊಂಡುಕೊಳ್ಳುವುದು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.

ಬೆಂಗಳೂರು ನಗರ ಉಪ ಪೊಲೀಸ್‌ ಆಯುಕ್ತ ಎಸ್. ಸಿದ್ಧರಾಜು ಮಾತನಾಡಿ, ಶಿಕ್ಷಣ ಪಡೆದ ನಂತರ ಅದನ್ನು ಸಾಮಾಜಿಕ ಒಳಿತಿಗಾಗಿ ಬಳಸುವುದು ಮುಖ್ಯ. ಇಲ್ಲವಾದಲ್ಲಿ ದೇಶದಲ್ಲಿ ನೈಜ ಬದಲಾವಣೆ ಆಗುವುದಿಲ್ಲ ಎಂದರು.

ವಿ.ವಿ. ಕುಲಪತಿ ಪ್ರೊ. ಎಸ್.ವೆಂಕಟೇಶ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಮಂಜುನಾಥ್ ನಾಯಕ್, ವಿವಿ ಕುಲಸಚಿವ ಎಚ್‌.ಬಿ.ವಿಜಯಕುಮಾರ್, ಪರೀಕ್ಷಾಂಗ ಕುಲಸಚಿವ ಎಸ್.ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಬಿ.ಜಿ. ಶಿವಮೂರ್ತಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಅಧ್ಯಕ್ಷೆ ರಜನಿರಾಜ್, ಮಹಿಳಾ ಹಕ್ಕುಗಳ ಅರಿವುಕಾರ್ಯಕರ್ತೆ ಕೀರ್ತನ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಕಾನೂನಿನ ತಿಳಿವಳಿಕೆ, ಹಕ್ಕು, ಸವಲತ್ತು, ಜವಾಬ್ದಾರಿಗಳ ಕುರಿತು ಉಪ್ಯನ್ಯಾಸ ನೀಡಿದರು.

ದೌರ್ಜನ್ಯ ವಿರುದ್ಧ ರಕ್ಷಣೆ ಅರಿವು ಮುಖ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎನ್‍.ಚಂದನ್ ಮಾತನಾಡಿ, ಬಾಲಕಿಯರು, ಅಪ್ರಾಪ್ರೆಯರ ಮೇಲೆ ನೆರೆಹೊರೆಯವರಿಂದಲೇ ಅತಿ ಹೆಚ್ಚಿನ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. 

ಬಾಲ್ಯದಿಂದಲೇ ಅವರಲ್ಲಿ ದೌರ್ಜನ್ಯ ವಿರುದ್ಧ ರಕ್ಷಣೆಯ ಅರಿವು ನೀಡುವುದು ಮುಖ್ಯ. ಪೋಕ್ಸೋ ಅಪರಾಧದ ಸಮಸ್ಯೆ ಅಧಿಕವಾದ ಕಾರಣ ಅಂತಹ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಮೀಸಲಾದ ಎರಡು ವಿಶೇಷ ಕೋರ್ಟ್‌ಗಳು ಶಿವಮೊಗ್ಗದಲ್ಲಿ ಇವೆ. 

ಅಗತ್ಯವಿರುವ ಎಲ್ಲ ಮಹಿಳೆಯರಿಗೆ, ಆಸಿಡ್ ದಾಳಿಗೆ ಒಳಗಾದವರಿಗೆ ನ್ಯಾಯ ಪಡೆಯಲು ಉಚಿತ ಕಾನೂನಿನ ನೆರವು ನೀಡುವ ಕೆಲಸವನ್ನು ಪ್ರಾಧಿಕಾರ ವತಿಯಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಟಾಪ್‌ ಕೋಟ್‌ ಮಾನವನ ದುರಾಸೆಯ ಕಾರಣದಿಂದಾಗಿ ದೇಶದ ಹತ್ತಾರು ಲಕ್ಷ ಕೋಟಿಗಳ ಹಣ ಕೊಳ್ಳೆ ಹೊಡೆಯಲಾಗುತ್ತಿದೆ. ಹೀಗಾಗಿ ಹಣದುಬ್ಬರ, ದಿನಬಳಕೆ ವಸ್ತುಗಳ ದರಏರಿಕೆ, ಅನೀತಿಗಳು ಹೆಚ್ಚಾಗಿವೆ. ಯುವಸಮುಹ, ವಿದ್ಯಾರ್ಥಿಗಳು ಅನೈತಿಕ ಹಾದಿ ಹಿಡಿದವರ ಬಗ್ಗೆ ಸೂಕ್ಷ್ಮವಾಗಿರಬೇಕು

- ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ

Share this article