ಒಂಭತ್ತು ವರ್ಷಗಳಿಂದ ಕೆಟ್ಟುನಿಂತ ಸ್ಕ್ಯಾನಿಂಗ್‌ ಯಂತ್ರ

KannadaprabhaNewsNetwork |  
Published : Sep 02, 2026, 02:45 AM IST
1ಎಚ್ಎಸ್ಎನ್17 :  | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆಯಲ್ಲಿ ಒಂಬತ್ತು ವರ್ಷಗಳಿಂದ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಯಂತ್ರದ ದುರಸ್ತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿದ್ದ 15 ದಿನಗಳ ಗಡುವು ಪೂರ್ಣಗೊಂಡರೂ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ಆರೋಪಿಸಿದರು. ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸದೆ, ರೋಗಿಗಳಿಗೆ ತೊಂದರೆಯಾಗದಂತೆ ಉದ್ಯಾನವನದ ಬಳಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಯಡೇಹಳ್ಳಿ ಮಂಜುನಾಥ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸರ್ಕಾರಿ ಆಸ್ಪತ್ರೆಯಲ್ಲಿ ಒಂಬತ್ತು ವರ್ಷಗಳಿಂದ ಸ್ಥಗಿತಗೊಂಡಿರುವ ಸ್ಕ್ಯಾನಿಂಗ್ ಯಂತ್ರದ ದುರಸ್ತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿದ್ದ 15 ದಿನಗಳ ಗಡುವು ಪೂರ್ಣಗೊಂಡರೂ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಯಡೇಹಳ್ಳಿ ಮಂಜುನಾಥ್ ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಸರ್ಕಾರಿ ಆಸ್ಪತ್ರೆ ಸಮೀಪದ ಉದ್ಯಾನವನದ ಬಳಿ ಸಾಮಾಜಿಕ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಹಿಂದಿನ ಪ್ರತಿಭಟನೆ ಹಿಂಪಡೆಯಲಾಗಿತ್ತು. ಆದರೆ ಗಡುವು ಮುಗಿದರೂ ಯಂತ್ರದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗಲಾಗಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸದೆ, ರೋಗಿಗಳಿಗೆ ತೊಂದರೆಯಾಗದಂತೆ ಉದ್ಯಾನವನದ ಬಳಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಯಡೇಹಳ್ಳಿ ಮಂಜುನಾಥ್ ತಿಳಿಸಿದರು.

ಸಾಮಾಜಿಕ ಹೋರಾಟಗಾರ ಯೂನಸ್ ಮಾತನಾಡಿ, ಕೇವಲ ₹4ರಿಂದ ₹5 ಲಕ್ಷದಷ್ಟು ವೆಚ್ಚದಲ್ಲಿ ದುರಸ್ತಿ ಮಾಡಬಹುದಾದ ಅಥವಾ ಬದಲಾಯಿಸಬಹುದಾದ ಸ್ಕ್ಯಾನಿಂಗ್ ಯಂತ್ರವನ್ನು ಒಂಬತ್ತು ವರ್ಷಗಳಿಂದ ಸ್ಥಗಿತದಲ್ಲಿಟ್ಟಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿಲ್ಲದ ಕಾರಣ ಬಡವರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದ್ದು, ಪ್ರತಿ ಸ್ಕ್ಯಾನಿಂಗ್‌ಗೆ 1,200 ರು ರಿಂದ 1,800 ರು. ವರೆಗೆ ಶುಲ್ಕ ಪಾವತಿಸಬೇಕಾಗಿದೆ. ಒಂದು ವೇಳೆ ಗುರುವಾರದ ಪ್ರತಿಭಟನೆಗೆ ಸ್ಪಂದನೆ ದೊರೆಯದಿದ್ದರೆ ಅನಿರ್ದಿಷ್ಟಾವಧಿ ಧರಣಿ ಸೇರಿದಂತೆ ಹೋರಾಟ ತೀವ್ರಗೊಳಿಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.

ಸ್ಕ್ಯಾನಿಂಗ್ ಯಂತ್ರವನ್ನು ದುರಸ್ತಿ ಮಾಡುವುದರ ಜತೆಗೆ ಅಗತ್ಯವಿದ್ದರೆ ಹೊಸ ಯಂತ್ರ ಅಳವಡಿಸಿ, ರೇಡಿಯಾಲಜಿಸ್ಟ್ ಸೇರಿದಂತೆ ಅಗತ್ಯ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಯಂತ್ರಕ್ಕಾಗಿ ಸೂಕ್ತ ಕೊಠಡಿ ಹಾಗೂ ನಿರ್ವಹಣಾ ವ್ಯವಸ್ಥೆ ಕಲ್ಪಿಸಬೇಕು ಎಂದು ಅರ್ಚನಾ ಜಯಂತ್ ಆಗ್ರಹಿಸಿದರು. ಸ್ಕ್ಯಾನಿಂಗ್ ಸೌಲಭ್ಯ ಕೇವಲ ಗರ್ಭಿಣಿಯರಿಗೆ ಮಾತ್ರವಲ್ಲದೆ ಅಪೆಂಡಿಕ್ಸ್, ಫೈಬ್ರಾಯ್ಡ್ಸ್, ಗರ್ಭಕೋಶದ ಸಮಸ್ಯೆಗಳು, ವಿವಿಧ ಗ್ರೋತ್‌ಗಳು ಹಾಗೂ ಪಿಸಿಒಡಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಪತ್ತೆಗೂ ಅಗತ್ಯವಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯಕ್ಕೆ ಪ್ರವೇಶ: ಚೇತನ್ ಅಹಿಂಸಾ
ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತ ಬೇಡ: ಶ್ರೀಶಿವಬಸವ ಸ್ವಾಮೀಜಿ