ಭೂ ದಾಖಲೆ 1.13 ಕೋಟಿ ಪುಟಗಳ ಸ್ಕ್ಯಾನಿಂಗ್‌: ಡಿಸಿ

KannadaprabhaNewsNetwork |  
Published : Jul 06, 2025, 01:48 AM IST
5ಕೆಡಿವಿಜಿ12, 13, 14-ದಾವಣಗೆರೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ 1.13 ಕೋಟಿ ಪುಟಗಳಿಗೂ ಅಧಿಕ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯ ಸಾಗಿದೆ. ಕಂದಾಯ ದಾಖಲೆಗಳನ್ನು ಇನ್ನು ಸಾರ್ವಜನಿಕರಿಗೆ ಡಿಜಿಟಲ್ ರೂಪದಲ್ಲೇ ನೀಡುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ರಾಜ್ಯದಲ್ಲೇ ದಾವಣಗೆರೆಗೆ ಪ್ರಥಮ ಸ್ಥಾನ ಗರಿ । ಜನರಿಗಿನ್ನು ಡಿಜಿಟಲ್ ರೂಪದ ದಾಖಲೆ - ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಸಚಿವ ಮಲ್ಲಿಕಾರ್ಜುನ ಸೂಚನೆ ಪಾಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ 1.13 ಕೋಟಿ ಪುಟಗಳಿಗೂ ಅಧಿಕ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯ ಸಾಗಿದೆ. ಕಂದಾಯ ದಾಖಲೆಗಳನ್ನು ಇನ್ನು ಸಾರ್ವಜನಿಕರಿಗೆ ಡಿಜಿಟಲ್ ರೂಪದಲ್ಲೇ ನೀಡುವುದಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿನ ಹಳೇ ಪಹಣಿ, ಮುಟೇಷನ್, ಲ್ಯಾಂಡ್ ಗ್ರಾಂಟ್ ರಿಜಿಸ್ಟರ್, ಬಗರ್ ಹುಕುಂ ಸೇರಿದಂತೆ ಭೂ ದಾಖಲೆ ಸೇರಿದಂತೆ ಎಲ್ಲ ಕಡತಗಳ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ನೀಡಲಾಗುವುದು ಎಂದರು.

ಜಿಲ್ಲೆಯೇ ಅಗ್ರಸ್ಥಾನ:

ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚನೆಯಂತೆ ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ದಾವಣಗೆರೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಅಭಿಲೇಖನಾಲಯದ ದಾಖಲೆಗಳ ಸ್ಕ್ಯಾನಿಂಗ್ ಮಾಡುವ ಕಾರ್ಯ ನಡೆದಿದೆ. ಈವರೆಗೆ 1.14 ಕೋಟಿ ಪುಟಗಳ ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ, ಅಪ್‌ ಲೋಡ್ ಮಾಡಲಾಗಿದೆ. ಈ ಸಾಧನೆಯಲ್ಲಿ ಇಡೀ ರಾಜ್ಯಕ್ಕೆ ದಾವಣಗೆರೆ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಮಾದರಿ ತಾಲೂಕಾಗಿ ದಾವಣಗೆರೆ:

ದಾಖಲೆಗಳ ಸ್ಕ್ಯಾನಿಂಗ್‌ಗೆ ದಾವಣಗೆರೆ ತಾಲೂಕನ್ನು ಮಾದರಿ ತಾಲೂಕಾಗಿ ಮಾಡಲಾಗಿದೆ. ಇಲ್ಲಿನ ತಾಲೂಕು ಕಚೇರಿಯ ಒಟ್ಟು 105466 ಕಡತಗಳ ಪೈಕಿ 83802 ಕಡತಗಳ 5280765 ಪುಟಗಳ ದಾಖಲೆ ಸ್ಕ್ಯಾನ್ ಮಾಡಿ, ಡಿಜಿಟಲ್ ಮಾದರಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹರಿಹರ ತಾಲೂಕಿನಲ್ಲಿ 1106372, ಜಗಳೂರು 1323129, ಹೊನ್ನಾಳಿ 1298228, ಚನ್ನಗಿರಿ 1148183 ಹಾಗೂ ನ್ಯಾಮತಿ ತಾಲೂಕು ಕಚೇರಿಯ 1151723 ಪುಟಗಳನ್ನು ಸ್ಕ್ಯಾನ್ ಮಾಡಿ, ಅಪ್ ಲೋಡ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಾಕಿ ಕಡತಗಳನ್ನು ಇನ್ನೊಂದು ವರ್ಷದಲ್ಲಿ ಸ್ಕ್ಯಾನಿಂಗ್ ಮಾಡುವ ಕಾರ್ಯ ಪೂರ್ಣಗೊಳಿಸಲಾಗುವುದು. ಈ ಸೇವೆಯಿಂದ ಕಂದಾಯ ದಾಖಲೆಗಳನ್ನು ಇನ್ನು ಮುಂದೆ ವಿಳಂಬವಿಲ್ಲದೇ, ಬೆರಳ ತುದಿಯಲ್ಲೇ ಸಾರ್ವಜನಿಕರು ಪಡೆಯಲು ಸಹಕಾರಿಯಾಗಲಿದೆ. ರೆಕಾರ್ಡ್ ರೂಂನಲ್ಲಿ ಕೆಲವರು ಕಂದಾಯ ದಾಖಲೆ ತಿದ್ದುವ ಕೆಲಸ ಮಾಡುತ್ತಿದ್ದರು. ಇದೂ ಸಹ ಇನ್ನು ಮುಂದೆ ತಪ್ಪಲಿದೆ. ಸರಳ, ಸುಲಲಿತವಾಗಿ ದಾಖಲೆಗಳನ್ನು ಪಡೆಯಲು ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ತಹಸೀಲ್ದಾರ್‌, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಇ-ಕಚೇರಿಯಲ್ಲೇ ಕಡತ ನಿರ್ವಹಣೆ ಮಾಡಲಾಗುತ್ತಿದೆ. ಈಗಾಗಲೇ ಕಂದಾಯ ದಾಖಲೆಗಳ ಸ್ಕ್ಯಾನಿಂಗ್‌ ಮಾಡುತ್ತಿದೆ. ಸಾರ್ವಜನಿಕರು ಕೇಳುವ ಎಲ್ಲ ದಾಖಲೆಗಳನ್ನು ಡಿಜಿಟಲ್ ಮೂಲಕ ಒದಗಿಸಲಾಗುತ್ತದೆ. ದಾಖಲೆ ಪಡೆಯಲು ಭೂ ಸುರಕ್ಷಾ ವೆಬ್ ಸೈಟ್‌ ನಲ್ಲಿ ಸ್ವಯಂ ಸೇವಾ ಪೋರ್ಟಲ್ ಮೂಲಕ ಲಾಗಿನ್ ಆಗಿ, ತಾವು ಬಯಸಿದ ದಾಖಲೆಗಳನ್ನು ಆಯ್ಕೆ ಮಾಡಿ, ಅದಕ್ಕೆ ಪ್ರತಿ ಪುಟಕ್ಕೆ ₹8ರಂತೆ ಪಾವತಿಸಿ, ದಾಖಲೆಗಳನ್ನು ಪಡೆಯಲು ಇನ್ನು ಮುಂದೆ ಅವಕಾಶ ಇದೆ ಎಂದು ವಿವರಿಸಿದರು.

ಅಧಿಕಾರಿ-ಸಿಬ್ಬಂದಿ ಶ್ರಮಕ್ಕೆ ಶ್ಲಾಘನೆ:

ಆನ್‌ ಲೈನ್‌ ದಾಖಲೆ ಇಲ್ಲದಿದ್ದರೆ 7 ದಿನದಲ್ಲೇ ಸ್ಕ್ಯಾನ್ ಮಾಡಿ, ನೀಡಲಾಗುವುದು. ಇದರಿಂದ ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಅಲೆಯುವುದು ತಪ್ಪಲಿದೆ. ಡಿಜಿಟಲ್ ದಾಖಲೆಗಳಿಗೆ ಮೂಲ ದಾಖಲೆಗಳ ಪ್ರತಿಗೆ ಇದ್ದ ಮೌಲ್ಯವೇ ಇರಲಿದೆ. ನ್ಯಾಯಾಲಯ ಸೇರಿದಂತೆ ಎಲ್ಲ ಅಗತ್ಯವಿರುವ ಕಡೆ ಇಂತಹ ಡಿಜಿಟಲ್ ದಾಖಲೆಗಳನ್ನು ಮಾನ್ಯ ಮಾಡಲಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದೆ. ಭೂ ಸುರಕ್ಷಾದಡಿ ಕಂದಾಯ ದಾಖಲೆ ಸ್ಕ್ಯಾನಿಂಗ್ ಕೆಲಸದಲ್ಲಿ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಪಹಣಿಯೊಂದಿಗೆ ಆಧಾರ್ ಜೋಡಣೆಯಲ್ಲೂ ರಾಜ್ಯಕ್ಕೆ ಅಗ್ರ ಸ್ಥಾನದಲ್ಲಿದೆ. ಎಲ್ಲ ಅಧಿಕಾರಿ, ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣದತ್ತ ಸಾಗುತ್ತಿದ್ದು ಈಗಾಗಲೇ ಎಲ್ಲಾ ಕಡತಗಳನ್ನು ಇ-ಕಚೇರಿಯ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳಿಗೂ ಲ್ಯಾಪ್‍ ಟ್ಯಾಪ್ ಸೇರಿ ಆಡಳಿತ ಕಚೇರಿಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಲಭ್ಯವಾಗುವ ಸ್ಥಳ ಮತ್ತು ಸಮಯದ ಬಗ್ಗೆ ಆದೇಶವನ್ನೂ ಹೊರಡಿಸಲಾಗುತ್ತದೆ. ಸಾರ್ವಜನಿಕರು ಗ್ರಾಮ ಆಡಳಿತಾಧಿಕಾರಿಗೆ ಹುಡುಕಾಟ ನಡೆಸುವಂತಿಲ್ಲ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ, ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್ ಇತರರು ಇದ್ದರು.

- - -

(ಬಾಕ್ಸ್‌) * ಜಿಲ್ಲೆಯ 25 ಸಾವಿರ ಜನಕ್ಕೆ ಹಕ್ಕುಪತ್ರ: ಡಿಸಿ

- ಇನ್ನೂ 200 ಕಂದಾಯ ಗ್ರಾಮ ರಚಿಸಿ, ಹಕ್ಕುಪತ್ರ ವಿತರಣೆಗೆ ಕ್ರಮ ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ 104 ಕಂದಾಯ ಗ್ರಾಮಗಳನ್ನು ರಚಿಸುವ ಮೂಲಕ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಇನ್ನೂ 200 ಕಂದಾಯ ಗ್ರಾಮಗಳನ್ನು ತೆಗೆದುಕೊಂಡಿದ್ದು ಒಟ್ಟು 25 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದರಖಾಸ್ತು ಪೋಡಿ ಅಭಿಯಾನದ ಮೂಲಕ ಒಟ್ಟುಗೂಡಿದ್ದ ಪಹಣಿ ಬೇರ್ಪಡಿಸಲಾಗುತ್ತಿದೆ. ಈಗಾಗಲೇ 2 ಸಾವಿರ ದರಖಾಸ್ತು ಪೋಡಿ ಮೂಲಕ ಪ್ರತ್ಯೇಕ ಪಹಣಿ ವಿಂಗಡಿಸಲಾಗಿದೆ. ಇನ್ನೂ 5-6 ಸಾವಿರ ಪಹಣಿ ಒಟ್ಟುಗೂಡಿಸಿ ಬೇರ್ಪಡಿಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಮಾಡುವ ವೇಳೆ ಪೌತಿ ಖಾತೆಯ 96 ಸಾವಿರ ಪಹಣಿ ಉಳಿದಿರುವುದು ಕಂಡುಬಂದಿದೆ. ಕಂದಾಯ ಸಚಿವರ ಸೂಚನೆಯಂತೆ ಪೌತಿ ಖಾತೆ ಆಂದೋಲನ ಮೂಲಕ ವಾರಸುದಾರರಿಗೆ ಖಾತೆ ಮಾಡಿಕೊಡಲಾಗುತ್ತದೆ. ಜನರು ಈ ಆಂದೋಲನದ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

- - -

-5ಕೆಡಿವಿಜಿ12, 13, 14.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV