ಕುಷ್ಟಗಿ: ಹುಚ್ಚುಮಂಗವೊಂದರ ಹಾವಳಿ ಹೆಚ್ಚಾಗಿದ್ದು, ಎತ್ತು-ಕುರಿಗಳ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ನಾಲ್ಕು ಗ್ರಾಮಗಳ ಜನರು ಬೆಚ್ಚಿ ಬಿದ್ದಿದ್ದಾರೆ.
ಒಂದು ವಾರದ ಹಿಂದೆ ತಾಲೂಕಿನ ಹೆಸರೂರು ಗ್ರಾಮದಲ್ಲಿ ಕಂಡು ಬಂದ ಈ ಹುಚ್ಚುಕೋತಿ ಈಗ ಬಿಜಕಲ್, ಕಲಕೇರಿ, ಕೆ. ಬೋದೂರ, ಟಕ್ಕಳಕಿಯಲ್ಲೂ ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ.ಈ ಕೋತಿಯು ಊರ ಒಳಗಡೆ ಬರುವುದಿಲ್ಲ, ಆದರೆ ಹೊಲಗಳಿಗೆ ಹೋಗುವ ಜನರನ್ನು ಓಡಿಸುತ್ತದೆ, ಕಚ್ಚಲು ಬರುತ್ತದೆ. ಈಗಾಗಲೆ ಹೆಸರೂರು ಗ್ರಾಮದಲ್ಲಿ ಆಡು ಮತ್ತು ಕುರಿಗಳ ಮೇಲೆ ಹಾಗೂ ಬಿಜಕಲ್ ಗ್ರಾಮದ ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ರೈತರು, ಮಹಿಳೆಯರು ತಮ್ಮ ಹೊಲಗಳಿಗೆ ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ.
ಹಿಡಿಯಲು ಬಂದರೂ ಸಿಕ್ಕಿಲ್ಲ: ಗ್ರಾಮಸ್ಥರ ಒತ್ತಾಯದ ಮೇರೆಗೆ ಕೇಸೂರು ಹಾಗೂ ಬಿಜಕಲ್ ಗ್ರಾಪಂ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪರಿಣತರ ಮೂಲಕ ಮಂಗ ಹಿಡಿಯಲು ಮುಂದಾದರೂ ಸಹಿತ ತಪ್ಪಿಸಿಕೊಳ್ಳುತ್ತಿದೆ.ಈ ಕುರಿತು ಪ್ರಶಾಂತಕುಮಾರ ಹಿರೇಮಠ ಹಾಗೂ ಮಲ್ಲಪ್ಪ ಕುರಿ ಮಾತನಾಡಿ, ಹೆಸರೂರು ಹಾಗೂ ಬಿಜಕಲ್ ಗ್ರಾಮದಲ್ಲಿ ಈ ಮಂಗನ ಹಾವಳಿ ಹೆಚ್ಚಾಗಿದೆ. ಕುರಿ ಮತ್ತು ಆಡುಗಳಿಗೆ ಕಚ್ಚುತ್ತಿದೆ. ಜಮೀನುಗಳಿಗೆ ಒಬ್ಬರೆ ತೆರಳಿದರೆ ದಾಳಿ ಮಾಡುತ್ತಿದೆ. ಜಮೀನಿಗೆ ಹೋಗಲು ನಮಗೆ ಭಯವಾಗುತ್ತಿದೆ ಎಂದು ಹೇಳಿದರು. ಆದಷ್ಟು ಬೇಗನೆ ಈ ಮಂಗವನ್ನು ಸೆರೆಹಿಡಿಯಬೇಕು ಎಂದು ಅರಣ್ಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.ಈಗಾಗಲೆ ಎರಡು ಸಲ ಮಂಗ ಹಿಡಿಯುವವರನ್ನು ಕರೆಸಲಾಗಿದ್ದು, ಮಂಗವೂ ಬೋನಿನೊಳಗೆ ಬೀಳದೆ ತಪ್ಪಿಸಿಕೊಳ್ಳುತ್ತಿದೆ. ಈಗ ಗಂಗಾವತಿಯವರಿಗೆ ಹೇಳಿದ್ದೇವೆ. ಆದಷ್ಟು ಶೀಘ್ರದಲ್ಲಿ ಮಂಗವನ್ನು ಸೆರೆ ಹಿಡಿಯುತ್ತೇವೆ ಎಂದು ಬಿಜಕಲ್ ಪಿಡಿಒ ಆನಂದರಾವ್ ಕುಲಕರ್ಣಿ ಹೇಳಿದರು.ಮಂಗನ ಹಾವಳಿ ಬಗ್ಗೆ ಗಮನಕ್ಕಿದ್ದು, ನಮ್ಮ ಅರಣ್ಯ ರಕ್ಷಕರು ಸಹಿತ ಮಂಗ ಹಿಡಿಯುವವರ ಜತೆಗೆ ಕೈಜೋಡಿಸಿದ್ದಾರೆ. ಆದಷ್ಟು ಶೀಘ್ರ ಮಂಗನ ಸೆರೆ ಹಿಡಿಯಲಾಗುವುದು ಎಂದು ಕುಷ್ಟಗಿ ಅರಣ್ಯ ಇಲಾಖೆಯ ಅಧಿಕಾರಿ ರವಿಕುಮಾರ ಹೇಳಿದರು.