ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ತನ್ನ ಗ್ರಾಹಕರ ಅನುಕೂಲಕ್ಕಾಗಿ ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯ ಆರಂಭಿಸಿದ್ದು, ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೂ ಈ ಸೌಲಭ್ಯ ಅಳವಡಿಸಿಕೊಳ್ಳಲು ಮುಂದಾಗಬೇಕು. ಇದಕ್ಕೆ ಬೇಕಾದ ತರಬೇತಿ ನೀಡಲು ಸಿದ್ಧ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದೀಗ ಯುಪಿಐ ಮತ್ತು ಐಎಂಪಿಎಸ್ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಬಳಸಿ ಗ್ರಾಹಕರು ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡಲು ಸಾಧ್ಯ. ಈ ವ್ಯವಸ್ಥೆಯ ಮೂಲಕ ಗ್ರಾಹಕರು ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹಣ ವರ್ಗಾವಣೆ ಮಾಡಬಹುದು. ಗೂಗಲ್ ಪೇ, ಫೋನ್ ಪೇ, ಭೀಮ್, ವಾಟ್ಸಪ್ ಪೇ, ಪೇಟಿಎಂ, ಫ್ರೀಚಾರ್ಜ್, ಸೂಪರ್‌ಮನಿ ಮುಂತಾದ ಅಪ್ಲಿಕೇಶನ್‌ಗಳ ಮೂಲಕವೂ ಸುಲಭವಾಗಿ ವ್ಯವಹಾರಗಳನ್ನು ನಡೆಸಬಹುದು ಎಂದು ಹೇಳಿದರು.
ನೂತನ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ನಂದಕುಮಾರ್, ಐಎಂಪಿಎಸ್ ಸೌಲಭ್ಯ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರು ಇನ್ನುಮುಂದೆ ತಕ್ಷಣ ಹಣ ಪಾವತಿ, ವರ್ಗಾವಣೆ ಮಾಡಬಹುದು. ಎಸ್‌ಸಿಡಿಸಿಸಿ ಬ್ಯಾಂಕ್ ಆ್ಯಪ್ ಮೂಲಕ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಹೊಸ ತಂತ್ರಜ್ಞಾನ, ವ್ಯವಸ್ಥೆಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್ ದೇಶದಲ್ಲೇ ಮೊದಲಿಗೆ ಅಳವಡಿಕೆ ಮಾಡಿಕೊಳ್ಳುತ್ತಿದ್ದು ಮಾದರಿಯಾಗಿದೆ ಎಂದರು.ಯುಪಿಐ ಮತ್ತು ಐಎಂಪಿಎಸ್ ವ್ಯವಸ್ಥೆಯ ಪೋಸ್ಟರ್ ಮತ್ತು ಕ್ಯೂಆರ್ ಕೋಡ್‌ನ್ನು ಡಾ.ಎಂ.ಎನ್. ರಾಜೇಂದ್ರಕುಮಾರ್ ಅನಾವರಣ ಮಾಡಿದರು. ನೂತನ ಸೌಲಭ್ಯಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್ , ಎಂ. ವಾದಿರಾಜ ಶೆಟ್ಟಿ, ಸದಾಶಿವ ಉಳ್ಳಾಲ್, ಮಹೇಶ್ ಹೆಗ್ಡೆ ಎಂ., ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಎಸ್.ಎನ್.ಮನ್ಮಥ, ಕುಶಾಲಪ್ಪ ಗೌಡ, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಇದ್ದರು. ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ, ವಂದಿಸಿದರು. ರಾಜೀವ್ ಕಕ್ಯಪದವು ನಿರೂಪಿಸಿದರು.24ರಂದು ಡಾ.ಎಂಎನ್‌ಆರ್ ಹುಟ್ಟುಹಬ್ಬ ಸಂಭ್ರಮ
ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಫೆ.24ರಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಡಗರದಿಂದ ಆಚರಿಸಲಾಗುವುದು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.