ಸಮೀಕ್ಷೆಯಲ್ಲಿ ಶೇ. 90 ರಷ್ಟು ಪ್ರಗತಿ, ಜಿಲ್ಲೆಯಲ್ಲಿ 59,934 ಪರಿಶಿಷ್ಟ ಜಾತಿಯ ಕುಟುಂಬಗಳು,
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಅವಧಿಯನ್ನು ಮೇ 25 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಮಿತಿ ಶಿಫಾರಸ್ಸಿನಂತೆ ಈಗಾಗಲೇ ನಿಗದಿಯಾಗಿದ್ದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ದಿನಾಂಕವನ್ನು ವಿಸ್ತರಿಸಲಾಗಿದೆ. 1534 ಶಿಕ್ಷಕರು, 153 ಮುಖ್ಯ ಶಿಕ್ಷಕರು ಮೇಲ್ವಿಚಾರಕರು, 185 ಹೆಚ್ಚುವರಿ ಗಣತಿದಾರರು ಮನೆ ಮನೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮೊದಲ ಹಂತದ ಸಮೀಕ್ಷೆ ದಿನಾಂಕವನ್ನು ಮೇ 25 ರವರೆಗೆ ವಿಸ್ತರಿಸಲಾಗಿದೆ. ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ನಡೆಸುವ ಸಂದರ್ಭದಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿಗಳ ಮತ್ತು ಉಪ ಜಾತಿಗಳ ಮಾಹಿತಿ ಸಮುದಾಯದವರು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದರು. ಆದಿಕರ್ನಾಟಕ, ಆದಿದ್ರಾವಿಡ, ಅದಿ ಆಂಧ್ರ ಎಂದು ನಮೂದಿಸಿದ್ದರೆ ಅಂಥವರು ಅದರ ಜೊತೆಗೆ ತಮ್ಮ ಉಪ ಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿ ಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು, ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿ ಗಳು, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿ ಒಡೆತನ, ಮನೆ, ಆದಾಯ, ಮಾನವ ಅಭಿವೃದ್ಧಿ, ಸರ್ಕಾರ ದಿಂದ ಪಡೆದಿರುವ ಸೌಲಭ್ಯ, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಕುರಿತು ನೀಡಬೇಕಾಗಿರುತ್ತದೆ ಎಂದರು. ಎರಡನೇ ಹಂತದ ಸಮೀಕ್ಷೆಯನ್ನು ಮೇ 26 ರಿಂದ 28 ರವರೆಗೆ ಮರು ನಿಗದಿಪಡಿಸಲಾಗಿದ್ದು, ಈ ಸಮೀಕ್ಷೆಯಲ್ಲಿ ಗುರುತಿಸಿ ರುವ ಮತಗಟ್ಟೆ ಪ್ರದೇಶದಲ್ಲಿ ಏರ್ಪಡಿಸಲಾಗುವ ವಿಶೇಷ ಶಿಬಿರಗಳಿಗೆ ಈಗಾಗಲೇ ಮೊದಲ ಹಂತದಲ್ಲಿ ಮಾಹಿತಿ ಸಲ್ಲಿಸದೇ ಅಥವಾ ಸಮೀಕ್ಷೆಗೆ ಒಳಪಡದೇ ಇರುವ ಪರಿಶಿಷ್ಟ ಜಾತಿಯವರು ತೆರಳಿ, ಗಣತಿದಾರರಿಗೆ ಜಾತಿ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಮೂರನೇ ಹಂತದ ಸಮೀಕ್ಷೆಯಲ್ಲಿ ಆನ್‌ಲೈನ್ ಮೂಲಕ ವೆಬ್‌ಸೈಟ್‌ನಲ್ಲಿ ಸ್ವಯಂ ಘೋಷಣೆ ಮಾಡುವ ಸಮೀಕ್ಷೆಯನ್ನು ಮೇ 19 ರಿಂದ 28 ರವರೆಗೆ ವಿಸ್ತರಿಸಲಾಗಿದ್ದು, ಸ್ವಯಂ ಘೋಷಣೆಗೆ ಆಧಾರ್ ನಂಬರ್ ಹಾಗೂ ಜಾತಿ ಪ್ರಮಾಣ ಪತ್ರದ ಆರ್.ಡಿ. ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದರು. 2022ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 59,296 ಪರಿಶಿಷ್ಟ ಜಾತಿಯ ಕುಟುಂಬಗಳು ಇವೆ. ಇಲ್ಲಿಯವರೆಗೆ ಒಟ್ಟು 52,934 ಪರಿಶಿಷ್ಟ ಜಾತಿ ಹಾಗೂ 2,43,986 ಇತರೆ ಜಾತಿಯ ಕುಟುಂಬಗಳು ಸೇರಿದಂತೆ ಒಟ್ಟು 2,96,920 ಕುಟುಂಬಗಳ ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ (99021 98300, 94813 59000, 94830 0400, 948084 3028) ಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಉಪ ವಿಭಾಗಧಿಕಾರಿ ದೇವರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಲತಿ ಉಪಸ್ಥಿತರಿದ್ದರು. 19 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯ ಪೋಸ್ಟರ್‌ವನ್ನು ಸೋಮವಾರ ಬಿಡುಗಡೆ ಮಾಡಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ, ಉಪ ವಿಭಾಗಾಧಿಕಾರಿ ದೇವರಾಜ್, ಸಮಾಜ ಕಲ್ಯಣಾಧಿಕಾರಿ ಮಾಲತಿ ಇದ್ದರು.